ಬಸವೇಶ್ವರರ ವಿಚಾರ ದೃಷ್ಟಿಕೋನ ಕುರಿತು ಅ.5ರಂದು ವಿದ್ಯಾರ್ಥಿ ವಿಚಾರ ಸಂಕಿರಣ
ಲೋಕದರ್ಶನ ವರದಿ
ಮಾಂಜರಿ 01 : ಕೆ.ಎಲ್.ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜವಿಜ್ಞಾನ, ಭಾಷಾವಿಜ್ಞಾನ ಹಾಗೂ ಪತ್ರಿಕೋದ್ಯಮ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಅ.5ರಂದು ‘ಬಸವೇಶ್ವರರ ವಿಚಾರ ದೃಷ್ಟಿಕೋನಗಳು’ ವಿಷಯದ ಕುರಿತು ಒಂದು ದಿನದ ವಿದ್ಯಾರ್ಥಿ ವಿಚಾರ ಸಂಕಿರಣ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸುಧೀರ್ ಎಸ್. ಕೋಟಿವಾಲೆ ತಿಳಿಸಿದರು.
ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ ನಡೆಯುವ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಹಾಗೂ ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ರಾಜಾ ಮಹಾಂತೇಶ ಕವಟಗಿಮಠ ವಹಿಸಲಿದ್ದಾರೆ. ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಹಾಗೂ ಬಿ.ಕೆ. ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಬಸವರಾಜ ಆರ್. ಪಾಟೀಲ ಉದ್ಘಾಟಿಸಲಿದ್ದಾರೆ.
ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕನ್ನಡ, ಆಂಗ್ಲ ಹಾಗೂ ಹಿಂದಿ ವಿಷಯಗಳಲ್ಲಿ ಒಟ್ಟು 265ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ಮಂಡನೆಗೆ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಾದ ಬೆಂಗಳೂರು, ಅಥಣಿ, ವಿಜಯಪುರ ಸೇರಿದಂತೆ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದಲೂ 310ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.