ಬೆಳಗಾವಿ

ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ‘ಆರೋಪ ಶುದ್ಧ ಸುಳ್ಳು’ ಚನ್ನರಾಜ ಹಟ್ಟಿಹೊಳಿ

ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ‘ಆರೋಪ ಶುದ್ಧ ಸುಳ್ಳು’  ಚನ್ನರಾಜ ಹಟ್ಟಿಹೊಳಿ


ಬೆಳಗಾವಿ 25: ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಳ್ಳಿಹಾಕಿದ್ದು, ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ತಮ್ಮ ಮೇಲಿನ ಆರೋಪ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಕ್ರಷರ್ ಮಾಲೀಕರು ವಿದ್ಯುತ್ ಸಮಸ್ಯೆಗಳ ಕುರಿತು ತಮ್ಮ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿಯನ್ನು ಕರೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.  

“ರೈತರಿಗೆ ಸಮರ​‍್ಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹಲವು ಟ್ರಾನ್ಸ್ಫಾರ್ಮರ್ಗಳು ಸುಟ್ಟುಹೋಗಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿಯನ್ನು ಕರೆಸಿ, ನೋಟಿಸ್ ನೀಡಿ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದ್ದೇನೆ. ಸಿಬ್ಬಂದಿಗೆ ಬುದ್ಧಿವಾದ ಹೇಳಿದ್ದು ನಿಜ, ಆದರೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ,” ಎಂದು ಅವರು ಹೇಳಿದರು. ಸುಮಾರು 50ರಿಂದ 60 ಜನರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಕೇವಲ ಐದು ನಿಮಿಷಗಳ ಕಾಲ ಸಿಬ್ಬಂದಿಯೊಂದಿಗೆ ಚರ್ಚಿಸಲಾಗಿದೆ. ತಮ್ಮಿಂದ ಯಾವುದೇ ಅಸಂವಿಧಾನಿಕ ಪದಗಳ ಬಳಕೆ ಅಥವಾ ನಿಂದನೆ ನಡೆದಿಲ್ಲ ಎಂದು ಅವರು ತಿಳಿಸಿದರು.  

“ಸಿಬ್ಬಂದಿಯ ಮನಸ್ಸಿಗೆ ನನ್ನ ಮಾತಿನಿಂದ ನೋವಾಗಿದ್ದರೆ ನನ್ನೊಂದಿಗೆ ಮಾತನಾಡಬಹುದಿತ್ತು. ಆದರೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು,” ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.  ಹೆಸ್ಕಾಂ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ನಿಯಮಾನುಸಾರ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಮಾತ್ರ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಹಲ್ಲೆ ಆರೋಪದ ಕುರಿತು ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಕುಳಿತು ಮಾತನಾಡಿ ವಾಸ್ತವಾಂಶ ತಿಳಿದುಕೊಳ್ಳಲು ತಾವು ಸಿದ್ಧರಿರುವುದಾಗಿ ಚನ್ನರಾಜ ಹಟ್ಟಿಹೊಳಿ ಹೇಳಿದರು. 


ಸುದ್ದಿ ಓದಿ