ಗತಕಾಲದ ಎಲ್ಲ ಸಂಗತಿಗಳು ಇತಿಹಾಸ ಆಗುವುದಿಲ್ಲ - ಡಾ.ವಿಜಯ್ ಪೂಣಚ್ಚ ತಂಬಂಡ

ಗತಕಾಲದ ಎಲ್ಲ ಸಂಗತಿಗಳು ಇತಿಹಾಸ ಆಗುವುದಿಲ್ಲ - ಡಾ.ವಿಜಯ್ ಪೂಣಚ್ಚ ತಂಬಂಡ


ಗತಕಾಲದ ಎಲ್ಲ ಸಂಗತಿಗಳು ಇತಿಹಾಸ ಆಗುವುದಿಲ್ಲ - ಡಾ.ವಿಜಯ್ ಪೂಣಚ್ಚ ತಂಬಂಡ  

ಹಂಪಿ 11: ಇತಿಹಾಸ ಎನ್ನುವುದು ಒಂದು ಜಿಜ್ಞಾಸೆ. ಒಂದು ಶಿಸ್ತು, ಬ್ರಿಟಿಷರ ಆಗಮನದ ನಂತರ ಇತಿಹಾಸ ಒಂದು ಜ್ಞಾನಶಿಸ್ತಾಗಿ ಬೆಳೆಯಿತು. ಅದಕ್ಕು ಮೊದಲು ಇತಿಹಾಸ ಸಂಕಥನ ಮೌಖಿಕವಾಗಿತ್ತು. ಗತಕಾಲದ ಎಲ್ಲ ಸಂಗತಿಗಳು ಇತಿಹಾಸ ಆಗುವುದಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ನುಡಿದರು. 

ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ(ರಿ), ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 11ನೇ ನವೆಂಬರ್ 2024ರಂದು ಮಂಟಪ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಪಿಎಚ್‌.ಡಿ. ಮತ್ತು ಡಿ.ಲಿಟ್ ಪದವೀಧರ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು. 

ಬ್ರಿಟಿಷರಿಗೆ ಅಧಿಕಾರ ನಡೆಸಲು ನಮ್ಮ ಇತಿಹಾಸ ಬೇಕಾಗಿತ್ತು. ಆದರೆ ನಮ್ಮವರೇ ಆಕರಗಳನ್ನು ಹುಡುಕಿಕೊಂಡು ಶಾಸನಗಳ ಮೂಲಕ ಇತಿಹಾಸವನ್ನು ಮರುರಚಿಸುವ ಕೆಲಸ ಆರಂಭಿಸಿದರು. ಭಾರತೀಯ ಇತಿಹಾಸ ಬರೆಯಲು ಮೊದಲು ಯೂರೋಪಿಯನ್ ಇತಿಹಾಸ ರಚನೆ ನಮಗೆ ಮಾದರಿಯಾಗಿತ್ತು. ಇತಿಹಾಸ ಅಕಾಡೆಮಿಯು ಸ್ಥಳೀಯ ಚರಿತ್ರೆಯ ರಚನೆಗೆ ಮಹತ್ವ ನೀಡುತ್ತಿದೆ ಎಂದು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರಿಗೆ ಇತಿಹಾಸ ಶಾಸನಶಸ್ತ್ರದ ಬಗ್ಗೆ ಅತೀವ ಕುತೂಹಲವಿದೆ. ಕ್ಯಾಂಪಸ್‌ನಲ್ಲಿ ಸಮ್ಮೇಳನ ನಡೆಸಬೇಕು. ಸಂಶೋಧನೆಗಳು ಆಗಬೇಕು, ಹೊರಗಿನಿಂದ ಯೋಜನೆಗಳನ್ನು ತರಬೇಕು, ವಿದ್ವಾಂಸರನ್ನು ಕರೆಸಬೇಕೆಂಬ ಅವರ ಆಶಯದ ಹಿನ್ನೆಲೆಯಲ್ಲಿ ಇತಿಹಾಸ ಅಕಾಡೆಮಿಯ ಜೊತೆ ಕೈ ಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹಂಚಿಕೊಂಡರು. 

ನಿ.ಜ. ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ-ಹಾಲಕೆರೆ ಪಿಎಚ್‌.ಡಿ. ಪದವೀಧರ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ನಂತರ ಹಿತವಚನ ನೀಡುತ್ತ ದೊಡ್ಡ ದೊಡ್ಡ ಸಾಮ್ರಾಜ್ಯಗಳ ಇತಿಹಾಸ ಮಾತ್ರ ಚರಿತ್ರೆ ಅಲ್ಲ, ದೊಡ್ಡ ಸಾಮ್ರಾಜ್ಯಗಳು ಗಟ್ಟಿಯಾಗಿ ನೆಲೆಯೂರಲು ಸಣ್ಣ ಸಣ್ಣ ಸಾಮಂತರು, ಪಾಳೆಯಗಾರರು, ಪಾಳೆಯಪಟ್ಟುಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತಿಹಾಸ ಅಕಾಡೆಮಿಯು ಸ್ಥಳೀಯ ಚರಿತ್ರೆಗಳನ್ನು ಸಂಶೋಧಿಸುತ್ತಿದೆ. ಯುವ ಸಂಶೋಧಕರನ್ನು ಮುನ್ನೆಲೆಗೆ ತಂದು ಅವರಿಗೆ ವೇದಿಕೆ ಒದಗಿಸುತ್ತಿದೆ. ಇದು ಶ್ಲಾಘನೀಯವಾಗಿದೆ. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಬಗ್ಗೆ ನಡೆದಷ್ಟು ಸಂಶೋಧನೆಗಳು ಪ್ರೌಢದೇವರಾಯನ ಬಗ್ಗೆ ನಡೆಯುತ್ತಿಲ್ಲ. ಪ್ರೌಢದೇವರಾಯನ ತ್ಯಾಗ, ಬುದ್ಧಿವಂತಿಕೆ, ಸರ್ವಧರ್ಮ ಸಹಿಷ್ಣುತೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇತಿಹಾಸ ಮುಚ್ಚಿಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ತಪ್ಪು ಸರಿ ನಿರ್ಧಾರಕ್ಕಿಂತ ತಪ್ಪು ನಡೆಯಬಾರದು ಎಂದು ತಿಳಿಯಲು ಇತಿಹಾಸ ಬೇಕು. ನೈಜ ಇತಿಹಾಸ ಬೆಳಕಿಗೆ ಬರಬೇಕು. ಇತಿಹಾಸ ತಿಳಿದುಕೊಂಡು ನಾವು ಜಗಳವಾಡಬಾರದು. ಇತಿಹಾಸ ಚಲನಶೀಲವಾಗಿರಬೇಕು ಎಂದು ಯುವ ಸಂಶೋಧಕರಿಗೆ ಕರೆ ನೀಡಿದರು. ನಂತರ ಕೊಟ್ಟೂರು ಸಂಸ್ಥಾನ ಮಠದ ಚರಿತ್ರೆಯನ್ನು ತೆರೆದಿಟ್ಟರು.  

ವೇದಿಕೆಯಲ್ಲಿರುವ ಗಣ್ಯರು ನಿ.ಜ. ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ-ಹಾಲಕೆರೆ ಗೌರವಿಸಿದರು. 

ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಗುರುಮನೆ, ಮಠ, ಸಾಮಾಜಿಕ ಸಂಘಸಂಸ್ಥೆಗಳು, ಇತಿಹಾಸ ಅಕಾಡೆಮಿಗೆ ಆಶ್ರಯ ನೀಡುತ್ತಲೆ ಬಂದಿವೆ. ಸರ್ಕಾರವು ನೆರವು ನೀಡಿದೆ. ನಮಗೆ ಈ ಮಾರ್ಗದರ್ಶನ ತೋರಿದವರೆ ಡಾ. ಸೂರ್ಯನಾಥ ಕಾಮತ್ ಅವರು. ಅಕಾಡೆಮಿಯನ್ನು ಮೊದಲು ಉದ್ಘಾಟಿಸಿದವರು ಡಾ. ಚಿದಾನಂದಮೂರ್ತಿ ಅವರು ಎಂದು ತಿಳಿಸುತ್ತ, ಇತಿಹಾಸ ಸಮ್ಮೇಳನಕ್ಕೆ ಎಲ್ಲ ರೀತಿಯ ನೆರವು ನೀಡಿದವರನ್ನು ಸ್ಮರಿಸಿದರು. ಮುಂದಿನ ಇತಿಹಾಸ ಸಮ್ಮೇಳನ ಗದಗದಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು.  

ವೇದಿಕೆಯಲ್ಲಿ ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಆರ್‌. ಶೇಷಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಕೆ.ರವೀಂದ್ರನಾಥ ಉಪಸ್ಥಿತರಿದ್ದರು.  

ಅಕಾಡೆಮಿಯ ಕಾರ್ಯದರ್ಶಿಗಳಾದ ಡಾ.ವಿ.ಸಂಧ್ಯಾ, ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರಾದ ದೊಡ್ಡಮನಿ ಜ್ಯೋತಿ, ಪೂಜಾರ ಕಾವ್ಯ ತಾಯಿ ಶಾರದೆಯನ್ನು ಸ್ತುತಿಸಿದರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ರಾಜಶೇಖರ್ ವಂದಿಸಿದರು. 


ಸುದ್ದಿ ಓದಿ