ಹ್ಯಾಪಿ ಹೋಂ ಎಂಬ ಸುಂದರ ತಾಣ, ಸೆಲ್ಫಿಗೂ ಹಸಿರು ತೋರಣ
ಹೊಸ ಟ್ರೆಂಡ್ಗೆ ಫ್ರೆಂಡ್ ಇದ್ದಂತೆ ಈ ಹ್ಯಾಪಿ ಹೋಂ
ಶಿವಲಿಂಗ ಸಿದ್ನಾಳ
ಮಹಾಲಿಂಗಪುರ 27: ಪಟ್ಟಣದ ನಿವೃತ್ತ ಚಿತ್ರಕಲಾವಿದ ಎಂ.ಐ.ಡಾಂಗೆ ವಿಶ್ರಾಂತ ಜೀವನವನ್ನು ಸೃಜನಶೀಲ ಹವ್ಯಾಸಗಳೊಂದಿಗೆ ಕಳೆಯಲೆಂದು ತನ್ನ ಮಗ ರಾಜು ಡಾಂಗೆ ಅವರಿಗೆ ಹೊಸ ಕಾನ್ಸೆಪ್ಟ್ ಪರಿಚಯಿಸಿ ಹ್ಯಾಪಿ ಹೋಂ ಎಂಬ ಸಂಸ್ಥೆ ಹುಟ್ಟು ಹಾಕಿದ್ದಾರೆ. ರಾಜು ಡಾಂಗೆ ಹಾಗೂ ಪತ್ನಿ ಟಸ್ಕಿನ್ ಡಾಂಗೆ ಸೇರಿ ಮುಧೋಳ ನಿಪ್ಪಾಣಿ ಹೆದ್ದಾರಿ ಪಕ್ಕದಲ್ಲಿ ಉದ್ಯಾನ ಮತ್ತು ಕುಟೀರ ನಿರ್ಮಿಸಿ ಮನೆ ಮತ್ತು ವಾಣಿಜ್ಯ ಮಳಿಗೆಗಳ ಅಲಂಕಾರಿಕ ವಸ್ತು, ಸಸ್ಯ ಮತ್ತು ಸಾಮಗ್ರಿಗಳ ಪ್ರದರ್ಶನದೊಂದಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಮಾಡುವ ಕೇಂದ್ರ ಆರಂಭಿಸಿದ್ದಾರೆ.
ಮಹಾಲಿಂಗಪುರ ಹಾಗೂ ರನ್ನಬೆಳಗಲಿ ಜನತೆ ನಿತ್ಯ ವಾಕಿಂಗ್ ತೆರಳರುವ ದಾರಿಯಲ್ಲಿರುವ ಈ ಉದ್ಯಾಣದಲ್ಲಿ ದೇಸಿ ಮಾದರಿಯ ಆಹ್ಲಾದಕರ ಹವಾಗುಣದ ಕುಟೀರವಿದೆ. ಸೆಲ್ಫಿ ಪ್ರಿಯರಿಗೆ ಹಸಿರು, ಹೂವು ಹಿನ್ನೆಲೆಯ ಸುಂದರ ನೋಟವಿದೆ. 120ಕ್ಕೂ ಹೆಚ್ಚು ವಿಧದ ದೇಶ ವಿದೇಶಗಳ ಹೂ, ಹಣ್ಣು, ಔಷಧಿ, ಶೋಭೆ, ವಾಸ್ತುವಿಗೆ ಸಂಬಂಧಿಸಿದ ಸಸಿಗಳು ಅವುಗಳು, ನೆಡುವ ಪಾಟ್ಗಳು, ನೆಲಹಾಸು, ಗೊಡೆಯ ಪರದೆ, ಶೋ ಕೇಸ್, ಟೆರೆಸ್, ಬಾಲ್ಕನಿಯನ್ನು ಅಲಂಕರಿಸುವ ಕೃತಕ ಪ್ರಾಪರ್ಟಿಗಳು ಸೇರಿದಂತೆ ಮನೆ ಸಿಂಗರಿಸುವ, ಮನಸೋರೆಗೊಳ್ಳುವ ವಸ್ತು ಭಂಡಾರವನ್ನೇ ಕಾಣಬಹುದು.
ಮನೆ ಗೋಡೆಯ ಮೇಲ್ಮೈಗೆ ಅಂದದ ಅಲಂಕಾರ, ಅಂಗಳದಲ್ಲಿ ಚೆಂದದ ಹೂಬಳ್ಳಿಯ ಚಿತ್ತಾರ, ಮನೆ ಒಳ-ಹೊರಗೆ ಅನುಲೂಕರ, ಆಹ್ಲಾದಕರ ವಿನ್ಯಾಸಗಳ ಸ್ಪರ್ಶಗಳಿಂದ ಮನೆ ಅಂದಗೊಳಿಸಿ ಆನಂದದ ತಾಣವಾಗಿಸುವ ಸಕಲ ಅಗತ್ಯ ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ಒಂದೇ ಸೂರಿನಡಿ ಪರಿಚಯಿಸುವ ಮೂಲಕ ಹೊಸ ಟ್ರೆಂಡ್ಗೆ ಫ್ರೆಂಡ್ ಆಗಿ ಈ ಹ್ಯಾಪಿ ಹೋಂ ಜನರನ್ನು ಸೆಳೆಯುತ್ತಿದೆ.
ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಆಹ್ಲಾದಕರ ಅನುಭವ ಪಡೆಯುತ್ತಿದ್ದಾರೆ. ಮಧ್ಯಾಹ್ನ ಸುಡು ಬಿಸಿಲಲ್ಲಿ ತಂಪಾದ ಅನುಭವ ಪಡೆಯಲು ದೇಸಿ ಕುಟೀರದ ಅಡಿಯಲ್ಲಿ ವಿರಮಿಸುವವರೂ ಇದ್ದಾರೆ.