ನಾನು ಹೋದರೆ ಹೋದೇನು ಕನಕದಾಸರ ಉತ್ತರದ ಗೂಡಾರ್ಥ ಅಮೂಲ್ಯವಾದುದು
ಶ್ರೀವ್ಯಾಸರಾಯರು ಭಕ್ತಿ ಪಂಥದ ದಾಸಕೂಟಕ್ಕೆ ಗುರುಗಳಾಗಿದ್ದವರು. ಇವರು ಒಮ್ಮೆ ತಮ್ಮ ಶಿಷ್ಯವೃಂದಕ್ಕೆ ನಮ್ಮಲ್ಲಿ ವೈಕುಂಠಕ್ಕೆ ಯಾರು ಹೋಗಬಹುದು ಎಂದು ಪ್ರಶ್ನಿಸಿದರು. ಆಗ ಎಲ್ಲ ಶಿಷ್ಯರುಗಳು ಮೌನವಾಗಿ ನಿರುತ್ತರರಾಗುತ್ತಾರೆ. ಕೊನೆಯದಾಗಿ ವ್ಯಾಸರಾಯರ ನೆಚ್ಚಿನ ಶಿಷ್ಯರಾದ ಕನಕದಾಸರ ಸರದಿ ಬರುತ್ತದೆ. ಗುರುಗಳು ತಮ್ಮ ನೆಚ್ಚಿನ ಶಿಷ್ಯನಿಗೆ ಕನಕಾ ನೀನು ವೈಕುಂಠಕ್ಕೆ ಹೋಗಬಹುದೇ ಎಂದು ಕೇಳಿದಾಗ ಗುರುಗಳೇ ನಾನು ಹೋದರೆ ಹೋಗಬಹುದು ಎಂದು ಕನಕದಾಸರು ಉತ್ತರಿಸುತ್ತಾರೆ.
ಕನಕದಾಸರ ಈ ಉತ್ತರದಿಂದ ವ್ಯಾಸರಾಯರು ಸಂತಸಗೊಂಡರು. ಎಲ್ಲ ಶಿಷ್ಯಂದಿರಿಗೂ ಇದು ಆಶ್ವರ್ಯವೆನಿಸಿತು. ಆದರೆ ಕನಕದಾಸರ ಉತ್ತರದ ಒಳಾರ್ಥವು ನಾನು ಎಂದರೆ ಮನುಷ್ಯನಲ್ಲಿ ಇರುವ ಅಹಂಭಾವ, ಅಹಂಕಾರ. ನಮ್ಮಲ್ಲಿರುವ ಅಹಂಕಾರ ತೊಲಗಿದರೆ ಮಾತ್ರ (ನಾಶವಾದರೆ ಮಾತ್ರ) ದೇವರ ಸನ್ನಿಧಿ ವೈಕುಂಠಕ್ಕೆ ಹೋಗಲು ಸಾಧ್ಯವೆನ್ನುವುದು ಅವರ ಅಭಿಪ್ರಾಯವಾಗಿತ್ತು. ಇವೆಲ್ಲ ಕನಕದಾಸರು ಪರಮಾತ್ಮನ ಬಗ್ಗೆ ಹೊಂದಿರುವ ಅನನ್ಯ ಭಕ್ತಿಗೆ ನಿದರ್ಶನಗಳು.
ವ್ಯಾಸರಾಯರು ತಮ್ಮ ಶಿಷ್ಯವೃಂದದವರಿಗೆ ಎಲ್ಲರಿಗೂ ಒಂದೊಂದು ಬಾಳೆಹಣ್ಣನ್ನು ನೀಡುತ್ತಾರೆ ಹಾಗೂ ಯಾರೂ ಇಲ್ಲದ ಜಾಗಕ್ಕೆ ಹೋಗಿ ಬಾಳೆಹಣ್ಣು ತಿಂದು ಬರಲು ತಿಳಿಸುತ್ತಾರೆ. ಎಲ್ಲ ಶಿಷ್ಯರುಗಳು ಒಂದೊಂದು ಕಡೆ ಹೋಗಿ ಬಾಳೆ ಹಣ್ಣು ತಿಂದು ಬರುತ್ತಾರೆ. ಕನಕದಾಸರು ಮಾತ್ರ ಬಾಳೆ ಹಣ್ಣನ್ನು ತಿನ್ನದೇ ಹಾಗೇ ಅದನ್ನು ತಂದು ಎಲ್ಲ ಕಡೆಗೂ ಭಗವಂತನಿರುವಾಗ ನಾನು ಬಾಳೆಹಣ್ಣು ತಿನ್ನಲು ಆಗುವುದಿಲ್ಲ ಎಂದು ಗುರುಗಳಿಗೆ ಉತ್ತರಿಸುತ್ತಾರೆ. ದೇವರು ಸರ್ವಾಂತರ್ಯಾಮಿ. ಎಲ್ಲ ಕಡೆಗೂ ವ್ಯಾಪಿಸಿರುವಾಗ ಅವನಿಲ್ಲದ ಸ್ಥಳ ಯಾವುದೂ ಇಲ್ಲ ಎನ್ನುವುದು ಕನಕದಾಸರ ಪ್ರತಿಕ್ರಿಯೆಯಾಗಿತ್ತು. ಇವೆಲ್ಲವುಗಳು ಕನಕದಾಸರು ಭಗವಂತನ ಕುರಿತು ಹೊಂದಿರುವ ಅಪಾರಜ್ಞಾನ, ಭಕ್ತಿಯ ಕೈಗನ್ನಡಿಯಾಗಿವೆ.
ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509 ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕವಾಗಿತ್ತು. ತಿಮ್ಮಪ್ಪನಾಯಕನಿಗೆ ಕೆರೆಯ ಜೀರ್ಣೋದ್ಧಾರದ ಕೆಲಸದಲ್ಲಿ ನೆಲ ಅಗೆಯುವಾಗ ಭಾರೀ ಪ್ರಮಾಣದ ಬಂಗಾರ ಸಿಕ್ಕಿತು. ಆಗ ತಿಮ್ಮಪ್ಪನಾಯಕನಿಗೆ ಕನಕ ನಾಯಕ ಎಂದು ಕರೆಯಲು ಪ್ರಾರಂಭಿಸಿದರು. ಕನಕನಾಯಕ ದಂಡನಾಯಕರಾಗಿದ್ದು ಯಾವುದೋ ಒಂದು ಯುದ್ಧದಲ್ಲಿ ಸೋತ ಅವರಿಗೆ ಉಪರತಿ ಉಂಟಾಗಿ ಹರಿಭಕ್ತರಾಗಿ ಕನಕದಾಸರಾದರು. ಕನಕದಾಸರು ಕಾಗಿನೆಲೆಯ ಆದಿಕೇಶವನ ಭಕ್ತರಾಗಿದ್ದರು. ವ್ಯಾಸರಾಯರಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರೂ ಆಗಿದ್ದರು. ಪುರಂದರದಾಸರು ಹಾಗೂ ಕನಕದಾಸರುಗಳು ದಾಸಸಾಹಿತ್ಯದ ಅಶ್ವಿನಿ ದೇವತೆಗಳೆಂದೇ ವಿರಾಜಮಾನರಾಗಿದ್ದಾರೆ.
ಎಲ್ಲರ ಅಸ್ತಿತ್ವಕ್ಕೆ ಕಾರಣನಾದ ಭಗವಂತನ ನಾಮಸ್ಮರಣೆ, ಭಗವಂತನ ಪಾದಸೇವೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಸಂತರಾದ ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯಕ್ಕೆ ಅರ್ಿಸಿರುವುದಲ್ಲದೇ ಸಂಗೀತ ಪ್ರಪಂಚಕ್ಕೆ ಮುಂಡಿಗೆಗಳನ್ನು, ಭಕ್ತಿಗೀತೆಗಳನ್ನು ನೀಡಿದ್ದಾರೆ. ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಸಾರ, ನೃಸಿಂಹಸ್ತವ ಇನ್ನೂ ಅನೇಕ ಕೃತಿಗಳು ಜಗತ್ಪ್ರಸಿದ್ಧವಾಗಿವೆ.
ಸಾಮಾಜಿಕ ಸಾಮರಸ್ಯ, ಜ್ಞಾನ, ಭಕ್ತಿ, ವೈರಾಗ್ಯ ಮೂಡಿಸುವ ಅವರು ರಚಿಸಿದ ಕೀರ್ತನೆಗಳು ಮನುಜ ಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಂತಹವುಗಳಾವೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ನಾನು ನನ್ನದು ಎಂಬ ಹಂಬಲ ಸುಮ್ಮನೆ ಹೋಗುವುದಿಲ್ಲ. ಅದಕ್ಕೆ ಪರಮಾತ್ಮನ ದಯೆ ಇರಬೇಕು ಎಂದು ಕೀರ್ತನೆಗಳಲ್ಲಿ ತಿಳಿಸಿದ್ದಾರೆ. ಕನಕದಾಸರು ಸರಳ ಭಾಷೆಯಲ್ಲಿ ಪರಮಾತ್ಮನ ಮಹಿಮೆಯನ್ನು ಮನಮುಟ್ಟುವಂತೆ ತಿಳಿಸಿದ್ದಾರೆ.
ಕನಕದಾಸರು ಪರಮಹರಿಭಕ್ತರಾಗಿ, ದಾಸಶ್ರೇಷ್ಟರಾಗಿ, ದಾರ್ಶನಿಕರಾಗಿ ದೇಶದೆಲ್ಲೆಡೆ ಸಂಚರಿಸಿ ಸರ್ವಮತಗಳ ಒಳಿತನ್ನು ಬಯಸಿ ವಿರಾಜಿಸಿದ್ದಾರೆ. ಕನಕದಾಸರ ಸಾಹಿತ್ಯ, ಸಂದೇಶಗಳು ಸಾರ್ವಕಾಲಿಕವಾಗಿವೆ. ಆಧಾತ್ಮಿಕ ಶಿಖರವನ್ನೇರಿದ ದಾಸಶ್ರೇಷ್ಟರಾದ ಕನಕದಾಸರ ಕೃತಿಗಳನ್ನು ಅಭ್ಯಸಿಸುವಂತಾಗಬೇಕು. ಒಟ್ಟಾರೆಯಾಗಿ ಸಾರಸ್ವತ ಲೋಕದಲ್ಲಿ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಚಿರಸ್ಮರಣೀಯರಾಗಿದ್ದಾರೆ. ಅವರ ತತ್ವಗಳು ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
- ಅಂಜನಾ ರಾಘವೇಂದ್ರ ಕುಬೇರ,
ಗದಗ