’ಕನ್ನಡವೇ ಕನ್ನಡಿಗರ ಉಸಿರು’.’ಕರ್ನಾಟಕದ ಏಕೀಕರಣವೇ ಕನ್ನಡಿಗರ ಜೀವಾಳ’: ಡಾ.ಪ್ರಸನ್ನದೇವರಮಠ
ಹೂವಿನಹಡಗಲಿ 25: ’ಕನ್ನಡವೇ ಕನ್ನಡಿಗರ ಉಸಿರು’.’ಕರ್ನಾಟಕದ ಏಕೀಕರಣವೇ ಕನ್ನಡಿಗರ ಜೀವಾಳ’ ಎಂಬ ಕನ್ನಡ ಡಿಂಡಿಮವನ್ನು ನಾಡಿನ ಉದ್ದಗಲಕ್ಕೆ ಕೇಳುವಂತೆ ಬಾರಿಸಿದ ಶಾಸ್ತ್ರಿಗಳು ನಾಡನ್ನು ಏಕೀಕರಣಗೊಳಿಸಿದ ಛಲದಂಕ ಮಲ್ಲರಾಗಿದ್ದಾರೆ ಎಂದು ಸಾಹಿತಿ ಶಿಕ್ಷಕ ಡಾ.ಪ್ರಸನ್ನದೇವರಮಠ ಅನಿಲಕುಮಾರ ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಇಟ್ಟಿಗಿ ಹೋಬಳಿ ಘಟಕ ತಾಲೂಕಿನ ಇಟ್ಟಿಗಿ ಗ್ರಾಮದ ಶ್ರೀಮತಿ ಬಳಿಗಾರ ಪಾರ್ವತಮ್ಮ ಓಮಣ್ಣ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪೂಜ್ಯ ಚರಂತಪ್ಪಯ್ಯ ಮಹಾಸ್ವಾಮಿಗಳ ಸ್ಮರಣಾರ್ಥ ದತ್ತಿ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಸ್ಮರಣಾರ್ಥ ದತ್ತಿ, ತೆಗ್ಗಿನಮಠದ ವೀರಮ್ಮ ಶಿವಶಂಕರಯ್ಯ ಸ್ಮಾರಕ ದತ್ತಿ, ಮುಂಡವಾಡ ಕಸ್ತೂರಿ ಚನ್ನಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ’ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ’ ಬದುಕು-ಬರಹ ವಿಷಯ ಕುರಿತು ಮಾತನಾಡಿದರು.
ಶಾಸ್ತ್ರಿಗಳು ನಾಡು ನುಡಿಯ ಬಗ್ಗೆ ಅಭಿಮಾನ ತಳೆದು ಏಕೀಕರಣದ ಮಂತ್ರ ಜಪಿಸುತ್ತ ನಾಡಿನ ಉದ್ದಗಲಕ್ಕೂ ಸಂಚರಿಸಿದ ಮಹಾನುಭವಿಗಳಾಗಿದ್ದಾರೆ ಎಂದರು.ನಿವೃತ್ತ ಉಪಪ್ರಾಚಾರ್ಯ ಕೆ.ಎನ್. ಚಂದ್ರಗೌಡ ಉದ್ಘಾಟಿಸಿದರು. ಸಂಗೀತ ಶಿಕ್ಷಕ ಬಿ.ಸೋಮಶೇಖರ ಗವಾಯಿ ನಾಡ-ನುಡಿಯ ಮಹತ್ವ ತಿಳಿಸಿ ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಡಿ.ಕರಿಬಸವನಗೌಡ, ಶಿಕ್ಷಕ ಸಿಬ್ಬಂದಿ,ಕಸಾಪ ಸಂಘಟನಾ ಕಾರ್ಯದರ್ಶಿ ಎಂ.ನಿಂಗರಾಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಎ.ಶಾರದ,ಉಮಾ, ಎನ್.ಪುಷ್ಪಾ ಕವನ ವಾಚಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಇಟ್ಟಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯರಾಜ ಆಚಾರ್ಯ ವಹಿಸಿದ್ದರು. ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಶಶಿಧರ ಸ್ವಾಗತಿಸಿದರು. ಶಿಕ್ಷಕ ರವೀಂದ್ರಗೌಡ ವಂದಿಸಿದರು. ಕನ್ನಡ ಶಿಕ್ಷಕ ಮಲ್ಲಯ್ಯ ಕಾರ್ಯಕ್ರಮ ನಿರ್ವಹಿಸಿದರು.