ಸರ್ವೈವರ್ ಟೀಸರ್‌ನಿಂದ ಸೌಂಡ್ ಮಾಡುತ್ತಿರುವ 'ಲ್ಯಾಂಡ್‌ಲಾರ್ಡ್‌'

ಸರ್ವೈವರ್ ಟೀಸರ್‌ನಿಂದ ಸೌಂಡ್ ಮಾಡುತ್ತಿರುವ 'ಲ್ಯಾಂಡ್‌ಲಾರ್ಡ್‌'


ಬೆಂಗಳೂರು 03: ಸ್ಯಾಂಡಲ್‌ವುಡ್ ಸಲಗ ವಿಜಯ್ ಕುಮಾರ್ ಅಭಿನಯದ ಬಹು ನೀರೀಕ್ಷಿತ 'ಲ್ಯಾಂಡ್‌ಲಾರ್ಡ್‌' ಪ್ರಾರಂಭದಿಂದ ಸೌಂಡ್ ಮಾಡುತ್ತಲೇ ಇದೆ. ಚಿತ್ರದ ನಾಯಕಿ ರಚಿತಾ ರಾಮ್ ಹುಟ್ಟುಹಬ್ಬದಂದು ಕ್ಯಾರೆಕ್ಟರ್ ಟೀಸರ್ ಬಿಟ್ಟು ಸದ್ದು ಮಾಡಿದ್ದ ಲ್ಯಾಂಡ್‌ಲಾರ್ಡ್‌ ಈಗ ದಿ ಸರ್ವೈವರ್ ಟೀಸರ್ ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ. ಹೌದು, ನವೆಂಬರ್ 1ರಂದು ಬೆಂಗಳೂರಿನ ನವರಂಗ ಥಿಯೇಟರ್‌ನಲ್ಲಿ ಈ ಟೀಸರ್‌ನ್ನು ಅಭಿಮಾನಿಗಳು ರೀಲೀಸ್ ಮಾಡಿದ್ದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ ಮಾತನಾಡಿ, 'ನಿರ್ದೇಶಕರು ದೊಡ್ಡ ಕನಸು ಇಟ್ಟುಕೊಂಡವರು. ಅಂದುಕೊಂಡಂತೆ ಸಿನಿಮಾ ಮಾಡಿದ್ದು, ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಿದ್ದಾರೆ. ನಮ್ಮ ನೆಲದ ಮಣ್ಣಿನ ವಾಸನೆಯನ್ನು ಆಸ್ವಾದಿಸುವಂತೆ ಮಾಡುವ ಚಿತ್ರವಿದು. ಇಂತಹ ಸ್ಥಿತಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಇದೆ ಎಂದರೇ ನಂಬಲೇ ಬೇಕು. ವಿಜಿ ನಂಗೆ ಅಂತರಂಗದ ಮಗ ಎನ್ನಬಹುದು. ಅದ್ಭುತವಾಗಿ ನಟಿಸಿದ್ದಾನೆ. ಅವನು ಈ ಧರೆಯ ದೊರೆಯಾಗಲಿ' ಎಂದು ಹಾರೈಸಿದರು. 

ಚಿತ್ರವನ್ನು ಜಡೇಶ್ ಕೆ. ಹಂಪಿ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಮಾಸ್ತಿ, 'ಇದರಲ್ಲಿ ಆಂದ್ರ ಹಾಗೂ ಕನ್ನಡ ಗಡಿಭಾಗದ ಸಂಭಾಷಣೆ ಬಳಿಸಲಾಗಿದೆ. ನಾನು ಹಾಗೂ ವಿಜಿ ಯಾವ ನಿರ್ದೇಶಕರ ಪೋನ್ ಬಂದ್ರೆ ಹೆದರಲ್ಲ. ಆದರೆ ಜಡೇಶ್ ಅವರ ಪೋನ್ ಗೆ ಹೆದರತಾ ಇದ್ವಿ. ಎಲ್ಲಾ ನಟರು ಜೀವ ತುಂಬಿ ನಟಿಸಿದ್ದಾರೆ. ಜಡೇಶ್ ಕಥೆಗಳನ್ನು ಚನ್ನಾಗಿ ಬರಿತಾರೆ. ಅದರಲ್ಲೂ ವಿಜಿ ಈ ಚಿತ್ರಕ್ಕಾಗಿ ತುಂಬಾ ಶ್ರಮ ಹಾಕಿದ್ದಾರೆ. ನನ್ನ ಜೊತೆ ಶ್ರೀಕಾಂತ್ ಹಾಗೂ ಮಂಜುನಾಥ ಸಂಭಾಷಣೆಗೆ ಸಾಥ್ ನೀಡಿದ್ದಾರೆ. ಕೋಲಾರ ಭಾಷೆ ಶೈಲಿಯ ಸಂಭಾಷಣೆ ಇರಲಿದೆ' ಎಂದರು. ಮತ್ತೋರ್ವ ಸಂಭಾಷಣೆಗಾರ ಶ್ರೀಕಾಂತ್, 'ಸ್ವಾಭಿಮಾನ ಮತ್ತು ಸ್ವಾರ್ಥದ ಮೇಲೆ ಕಥೆ ಸಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಅಂಶವಿದೆ. ಇದರಲ್ಲಿ ನಾವು ಮಾನವನನ್ನು ಗೌರವಿಸೋನ ಎಂದು ಹೇಳ ಹೊರಟಿದ್ದೇವೆ' ಎಂದರು. ನಂತರ ಚಿತ್ರದ ನಿರ್ದೇಶಕ ಜಡೇಶ್ ಮಾತನಾಡಿ, 'ಟೀಸರ್‌ಗೆ ಪಾಸಿಟಿವ್ ರೆಸ್ಪಾನ್ಸ್‌ ಸಿಗತಾ ಇದೆ. ಇದರಲ್ಲಿ 50-60 ಕಲಾವಿದರು ನಟಿಸಿದ್ದಾರೆ. ಪ್ರತಿ ಪಾತ್ರ ಕೂಡ ಮುಖ್ಯವಾಗಿ ಬರುತ್ತವೆ. 80ರ ಕಾಲಘಟ್ಟ ಕಟ್ಟಲು ತುಂಬಾ ಶ್ರಮ ಪಟ್ಟಿದ್ದೇವೆ. ನಂಗೆ ಈ ಸಿನಿಮಾ ಮಾಡಲು ಕುವೆಂಪು ಅವರ ಚೋಮನ ದುಡಿ ಕಾದಂಬರಿ ಪ್ರೇರಣೆ' ಎಂದರು.  

ಚಿತ್ರದ ನಾಯಕಿ ರಚಿತಾ ರಾಮ್ ಮಾತನಾಡಿ, 'ಈ ಸಿನಿಮಾದಲ್ಲಿ ನಾನು ಒಬ್ಬಳು ಆಗಿದ್ದು ಖುಷಿ ಕೊಟ್ಟಿದೆ. ನನಗೆ 18ವರ್ಷದ ಮಗಳು ಇರುತ್ತಾಳೆ ಎಂದಾಗ ಇನ್ನಷ್ಟು ಖುಷಿ ಆಯ್ತು. ಈ ಪಾತ್ರದ ಬಗ್ಗೆ ದರ್ಶನ ಸರ್ ಗೂ ನಾನು ಹೇಳಿದ್ದೆ. ಅವರು ಖುಷಿ ಪಟ್ಟರು. ವಿಜಿ ಅವರ ಜೊತೆ ಇದು ನನ್ನ ಎರಡನೇ ಸಿನಿಮಾ. ಫೋಟೋ ಶೂಟ್‌ನಲ್ಲಿ ಫ್ರೇಮ್ ತುಂಬಾ ಚನ್ನಾಗಿ ಇತ್ತು. ಕೋಲಾರ ಭಾಷೆ ಮಾತಾಡೋದು ತುಂಬಾ ಕಷ್ಟ ಆಗಿತ್ತು. ಚ್ಯಾಲೆಂಜಿಂಗ್ ಆಗಿ ತೆಗೆದುಕೊಂಡು ನಟಿಸಿದೆ. ನನ್ನ ವೃತ್ತಿ ಜೀವನದಲ್ಲಿ ತುಂಬಾ ಮುಖ್ಯವಾದ ಚಿತ್ರ ಲ್ಯಾಂಡ್‌ಲಾರ್ಡ್‌ ಆಗುವ ನೀರೀಕ್ಷೆ ಇದೆ. ನಿಂಗಮ್ಮ ನನ್ನ ಪಾತ್ರದ ಹೆಸರು. ಸಿನಿಮಾ ಪ್ರೇಕ್ಷಕರಿಗೆ ಮೋಸ ಮಾಡಲ ತುಂಬಾ ಇಷ್ಟ ಆಗುತ್ತದೆ' ಎಂದರು. ಚಿತ್ರದ ನಾಯಕ ವಿಜಯ್ ಮಾತನಾಡಿ, 'ಜಡೇಶ್ ನನ್ನ ತಮ್ಮ ಎನ್ನಬಹುದು. ಪ್ರತಿಯೊಬ್ಬರ ಮನಸಿನಲ್ಲೂ ಉಳಿಯುವ ಚಿತ್ರ ಲ್ಯಾಂಡ್ ಲಾರ್ಡ್‌. ಉಮಾಶ್ರೀ ಅವರ ಜೊತೆ ನಟಿಸುವಾಗ ನನ್ನ ಅಮ್ಮನ ಜೋತೆ ನಟಿಸಿದಂತೆ ಆಗುತ್ತದೆ. ಇಡೀ ತಂಡದ ಶ್ರಮದಿಂದ ಸಿನಿಮಾ ಚನ್ನಾಗಿ ಬಂದಿದೆ' ಎನ್ನುವರು. ಇದೇ ಸಂದರ್ಭದಲ್ಲಿ ವಿಜಯ್ ಅವರ ಮಗಳಾದ ರಿತನ್ಯ, ಶಿಶಿರ, ಮಿತ್ರ, ಅನನ್ಯ, ಮಾಲಿನಿ, ಅಭಿಶೇಕ ತಮ್ಮ ಅನುಭವ ಹಂಚಿಕೊಂಡರು. ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ. 2026ರ ಜನವರಿ 23ರಂದು ರೀಲೀಸ್ ಆಗಲಿರುವ ಚಿತ್ರವನ್ನು 'ಸಾರಥಿ' ಚಿತ್ರ ನಿರ್ಮಿಸಿದ್ದ ಕೆ.ವಿ ಸತ್ಯ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಇವರ ಮಗ ಹೇಮಂತ್ ಗೌಡ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದರು. 


ಸುದ್ದಿ ಓದಿ