ಗರ್ಭಿಣಿಯರ ಆರೋಗ್ಯ ಜಾಗೃತಿಗೆ ‘ಗರ್ಭ ಚೈತನ್ಯ’ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 25: ಯಳ್ಳೂರು ರಸ್ತೆಯಲ್ಲಿರುವ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ ಹಾಗೂ ಸಹಯೋಗದಲ್ಲಿ ಗರ್ಭಿಣಿಯರ ಆರೋಗ್ಯ, ಪೌಷ್ಟಿಕತೆ, ಯೋಗ ಹಾಗೂ ಸುರಕ್ಷಿತ ಮಾತೃತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಗರ್ಭ ಚೈತನ್ಯ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್. ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಜೊತೆಗೆ ಗರ್ಭಾವಸ್ಥೆಯ ಪ್ರತಿಯೊಂದು ಹಂತದಲ್ಲೂ ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ಪಡೆಯುವುದು ಅತ್ಯಂತ ಮುಖ್ಯ ಎಂದರು. ಆರೋಗ್ಯವಂತ ತಾಯಿ ಮತ್ತು ಮಗುವಿನ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಪ್ರೆಸಿಡೆಂಟ್ ಅವಂತಿಕಾ ಅವರು ಮಾತನಾಡಿ, ಗರ್ಭಿಣಿಯರ ಆರೋಗ್ಯ ಮತ್ತು ಸುರಕ್ಷಿತ ಮಾತೃತ್ವಕ್ಕಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಗರ್ಭಿಣಿಯರಿಗೆ ಕುಟುಂಬದ ಸದಸ್ಯರು ಹಾಗೂ ಸಮಾಜದಿಂದ ಅಗತ್ಯ ಬೆಂಬಲ ದೊರೆಯಬೇಕು ಎಂದರು. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ್ ಧಮಣಕರ್ ಅವರು ಅತಿಥಿಗಳನ್ನು ಸ್ವಾಗತಿಸಿ, ಗರ್ಭಾವಸ್ಥೆಯ ಪೂರ್ವ ಆರೈಕೆ ಕುರಿತು ಮಾಹಿತಿ ನೀಡಿದರು.
ಗರ್ಭಧಾರಣೆಯ ಆರಂಭದಿಂದಲೇ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು, ಅಗತ್ಯ ರಕ್ತ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ಗಳನ್ನು ವೈದ್ಯರ ಸಲಹೆಯಂತೆ ಮಾಡಿಸಿಕೊಳ್ಳುವುದು, ವೈದ್ಯರು ಸೂಚಿಸುವ ಓಷಧಿ ಹಾಗೂ ಪೂರಕಗಳನ್ನು ನಿಯಮಿತವಾಗಿ ಸೇವಿಸುವುದು ಮತ್ತು ಅಪಾಯಕಾರಿ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ವಿವರಿಸಿದರು.
ಡಾ. ಸುಷ್ಮಾ ಮೆಳೆದ ಅವರು ಗರ್ಭಾವಸ್ಥೆಯಲ್ಲಿನ ಪೌಷ್ಟಿಕತೆ ಮತ್ತು ಆಹಾರ ಪದ್ಧತಿ ಕುರಿತು ಮಾತನಾಡಿ, ತಾಯಿ ಮತ್ತು ಮಗುವಿನ ಉತ್ತಮ ಬೆಳವಣಿಗೆಗೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಅಗತ್ಯ ಎಂದರು. ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ಗಳು ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವಿಸುವಂತೆ ಸಲಹೆ ನೀಡಿದರು. ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವ ಅಗತ್ಯವನ್ನು ವಿವರಿಸಿದರು.
ಪೂಜಾ ಜಾಜರೆ ಅವರು ಗರ್ಭಾವಸ್ಥೆಯಲ್ಲಿ ಯೋಗದ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವೈದ್ಯರ ಸಲಹೆಯೊಂದಿಗೆ ಸೂಕ್ತ ಯೋಗಾಭ್ಯಾಸ ಹಾಗೂ ಉಸಿರಾಟದ ವ್ಯಾಯಾಮಗಳನ್ನು ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು. ಯಾವುದೇ ವ್ಯಾಯಾಮ ಅಥವಾ ಯೋಗಾಭ್ಯಾಸ ಆರಂಭಿಸುವ ಮೊದಲು ತಜ್ಞರ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗವನ್ನು ಯು.ಎಸ್.ಎಂ.ಕೆ.ಎಲ್.ಇ ನಿರ್ದೇಶಕರಾದ ಹೆ.ಬಿ. ರಾಜಶೇಖರ ಹಾಗೂ ಕೆಎಲ್‌ಇ ಸೆಂಟೆನರಿ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ಅವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸದಸ್ಯರು, ಗರ್ಭಿಣಿಯರು ಹಾಗೂ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಡಾ. ಸತೀಶ್ ಧಾಮಣಕರ್ ಸ್ವಾಗತಿಸಿದರು. ಪ್ರಭಾವತಿ ತೆಗೂರ ನಿರೂಪಿಸಿ ವಂದಿಸಿದರು.