ಶ್ರಾವಣ ಮಾಸದಲ್ಲಿ ಇಷ್ಟಲಿಂಗ ದೀಕ್ಷಾ ಸಮಾರಂಭ
ಲೋಕದರ್ಶನ ವರದಿ
ಶ್ರಾವಣ ಮಾಸದಲ್ಲಿ ಇಷ್ಟಲಿಂಗ ದೀಕ್ಷಾ ಸಮಾರಂಭ
ಯಮಕನಮರಡಿ 12: ಸ್ಥಳೀಯ ಸುಕ್ಷೇತ್ರ ಹುಣಸಿಕೊಳ್ಳ ಶ್ರೀಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ವಾರದ ಕಾಲ ನಡೆದ ಆಧ್ಯಾತ್ಮಿಕ ಪ್ರವಚನ ಹಾಗೂ ಇಷ್ಟಲಿಂಗ ದೀಕ್ಷಾ ಸಮಾರಂಭ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಪ.ಪು. ರಾಚೋಟೇಶ್ವರ ಮಹಾಸ್ವಾಮಿಗಳು ವಹಿಸಿ, ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು. ಮಕ್ಕಳು, ಹಿರಿಯರು ಹಾಗೂ ಮಹಿಳೆಯರು ಸೇರಿದಂತೆ ಸುಮಾರು 200 ಮಂದಿ ಇಷ್ಟಲಿಂಗ ದೀಕ್ಷೆ ಪಡೆದರು. ಒಂದು ವಾರದವರೆಗೆ ಪ್ರತಿದಿನ ಆಧ್ಯಾತ್ಮಿಕ ಪ್ರವಚನ ಆಯೋಜಿಸಲಾಗಿದ್ದು, ಶ್ರೀಮಠದ ಉತ್ತರಾಧಿಕಾರಿಗಳಾದ ಸಿದ್ದಬಸವ ದೇವರು ಮಾರ್ಮಿಕವಾಗಿ ಪ್ರವಚನ ನೀಡಿದರು.
ದಿನಾಂಕ 11ರಂದು ಪ್ರವಚನ ಮುಕ್ತಾಯ ಸಮಾರಂಭ ನಡೆಯಿತು. ಹುಕ್ಕೇರಿ ವಿರಕ್ತಮಠದ ಪೂಜ್ಯರಾದ ಶಿವಬಸವ ಮಹಾಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಕಿರಣಸಿಂಗ್ ರಜಪೂತ್, ಏಕಸ್ ಕಂಪನಿಯ ಪ್ರತಿನಿಧಿ ಮಾಂತೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀಮಠದ ಉಸ್ತುವಾರಿಗಳಾದ ಈರಣ್ಣ ಬಿಸಿ ರೊಟ್ಟಿ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.