ಬೆಳಗಾವಿ

ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ಸಮಾರೋಪ

ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ಸಮಾರೋಪ
Śrāvaṇa māsada pravacana kāryakramada samārōpa

ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ಸಮಾರೋಪ  

ಯಮಕನಮರಡಿ 12: ಸ್ಥಳೀಯ   ಜಗದ್ಗುರು ಶೂನ್ಯ ಸಂಪಾದನಾ ಪೀಠ, ಹುಣಸಿಕೊಳ್ಳ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಎಂಟು ದಿನಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭ ಅದ್ದೂರಿಯಾಗಿ ನಡೆಯಿತು.  

ಕಾರ್ಯಕ್ರಮವು ಜಗಜ್ಯೋತಿ ಬಸವೇಶ್ವರರ ಪೂಜೆ ಹಾಗೂ ವಚನ ಮಸ್ತಕದ ಪೂಜೆಯೊಂದಿಗೆ ಆರಂಭವಾಯಿತು. ವಚನ ಸಾಹಿತ್ಯದ ಪವಿತ್ರ ಗ್ರಂಥಗಳನ್ನು ಶಿರದ ಮೇಲೆ ಹೊತ್ತು ಪ್ರದಕ್ಷಿಣೆ ಹಾಕಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಶ್ರೀಮಠದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಶ್ರೀಮಠದ ಉತ್ತರಾಧಿಕಾರಿಗಳಾದ   ಸಿದ್ದಬಸವ ದೇವರು ಮಾತನಾಡಿ, ಶ್ರೀಮಠವು ಕಳೆದ ಮೂರು ವರ್ಷಗಳಲ್ಲಿ ಅಗಾಧ ಪ್ರಮಾಣದಲ್ಲಿ ಬದಲಾವಣೆಗೊಳ್ಳುತ್ತಿದೆ. ಈ ಬದಲಾವಣೆಗೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತನು, ಮನ, ಧನದಿಂದ ಮಠದ ಏಳಿಗೆಗಾಗಿ ದುಡಿಯುತ್ತಿರುವುದೇ ಕಾರಣವಾಗಿದೆ. ಈಗಾಗಲೇ ಮಠದಲ್ಲಿ ದಾಸೋಹದ ಕೋಣೆ ಹಾಗೂ ಪಲ್ಲಕ್ಕಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಠದಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಭಕ್ತರನ್ನು ಮನಸಾರೆ ಕೊಂಡಾಡಿ ಆಶೀರ್ವದಿಸಿದರು.  

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹುಕ್ಕೇರಿ ವಿರಕ್ತಮಠದ   ಶಿವಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಹುಕ್ಕೇರಿ ವಿರಕ್ತಮಠ ಹಾಗೂ ಹುಣಸಿಕೊಳ್ಳ ಮಠಗಳು ನೂರಾರು ವರ್ಷಗಳಿಂದ ಭಕ್ತರ ಕಾಮಧೇನುವಿನಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಪ್ರವಚನಗಳಿಂದ ಬಸವಾದಿ ಶರಣರ ವಿಚಾರಧಾರೆಗಳನ್ನು ಜನರಿಗೆ ತಿಳಿಯಲು ಅನುಕೂಲವಾಗುತ್ತದೆ.   ಸಿದ್ದಬಸವ ದೇವರು ಇಂತಹ ಕಾರ್ಯಗಳನ್ನು ನಡೆಸುವ ಮೂಲಕ ಗ್ರಾಮದ ಭಕ್ತರ ಮನತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ   ರಾಜೇಂದ್ರ ಪಾಟೀಲ ಮಾತನಾಡಿ, ಮಠದಲ್ಲಿ ಇಂತಹ ಸತ್ಕಾರ್ಯಗಳು ನಡೆಯಲು ಯಾವಾಗಲೂ ತಮ್ಮ ಕೈಲಾದ ಸಹಾಯಹಸ್ತ ನೀಡಲು ಸಿದ್ಧರಿರುವುದಾಗಿ ತಿಳಿಸಿದರು. ಮಠದ ಅಭಿವೃದ್ಧಿ ಹಾಗೂ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯರಿಗೆ ಪೂಜ್ಯ ಶ್ರೀಗಳು ಪುಷ್ಪನಮನ ಸಲ್ಲಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕಿರಣಸಿಂಗ್ ರಜಪೂತ, ಮಹಾಂತೇಶ ಪಾಟೀಲ, ಗೀರೀಶ ಮಿಶ್ರಿಕೋಟಿ, ವೀರಣ್ಣ ಬಿಸಿರೊಟ್ಟಿ, ಲಕ್ಷ್ಮಣ ನಗಾರಿ, ಈರಣ್ಣ ಪಾವುಟೆ, ಸಂತೋಷ ಗುಡಸ, ಪಿಡಿಒ ಶ್ರೀ ಎ.ಎಚ್‌. ಕರೆಹೊನ್ನ ಸೇರಿದಂತೆ ಹಲವರು ಭಾಗವಹಿಸಿದ್ದರು.  

ಕಾರ್ಯಕ್ರಮದ ಆರಂಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಯಮಕನಮರಡಿಯ ಉಪನ್ಯಾಸಕರಾದ ಬಿ.ಬಿ. ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಆರ್‌. ತಬರಿ ಸ್ವಾಗತ ಹಾಗೂ ನಿರೂಪಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಯಮಕನಮರಡಿಯ ಎಲ್ಲ ಶರಣ-ಶರಣೆಯರು ಭಾಗವಹಿಸಿದ್ದರು. ಸದ್ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. 


ಸುದ್ದಿ ಓದಿ