ಕಬ್ಬಿಗೆ 50 ಹೆಚ್ಚುವರಿ ದರ: ಬಿ.ಎಸ್. ಕಲಟ್ಟಿ
ಲೋಕದರ್ಶನ ವರದಿ
ಸಂಕೇಶ್ವರ 23: ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗಿಂತ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 50 ಹೆಚ್ಚುವರಿ ದರ ನೀಡಲಾಗುವುದು ಎಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಶಂ. ಕಲಟ್ಟಿ ಹೇಳಿದರು. ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 70ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಖಾನೆಗೆ ಕಬ್ಬು ಪೂರೈಸುವ ರೈತರ ಹಿತ ಕಾಪಾಡಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.
2025-26ನೇ ಹಂಗಾಮಿನಲ್ಲಿ 4,91,304.351 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದ್ದು, 5,11,500 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಸಕ್ಕರೆ ಇಳುವರಿ ಶೇ.11.72ರಷ್ಟಾಗಿದೆ ಎಂದು ತಿಳಿಸಿದರು. ರೈತರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,310 ದರ ಪಾವತಿಸಲಾಗಿದ್ದು, ರಾಜ್ಯ ಸರ್ಕಾರದ ಸಹಾಯಧನ 50 ಹಾಗೂ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ 936 ಸೇರಿದಂತೆ ಒಟ್ಟು 4,296 ಪಾವತಿಸಲಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್ಿ ದರ 3,747ಕ್ಕಿಂತ ಕಾರ್ಖಾನೆಯು 549 ಹೆಚ್ಚುವರಿಯಾಗಿ ಪಾವತಿಸಿದೆ ಎಂದು ಹೇಳಿದರು. ಡಿಸ್ಟಿಲರಿ ಘಟಕದ ಸಾಮರ್ಥ್ಯ ವಿಸ್ತರಣೆಗಾಗಿ 80.65 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದ್ದು, ದಿನಕ್ಕೆ 50 ಕೆಎಲ್ಪಿಡಿಯಿಂದ 150 ಕೆಎಲ್ಪಿಡಿಗೆ ಸಾಮರ್ಥ್ಯ ಹೆಚ್ಚಿಸಲಾಗಿದೆ. ಪ್ರಸಕ್ತ 2025-26ನೇ ಹಂಗಾಮಿನಲ್ಲಿ 15.60 ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸುವ ಗುರಿ ಹೊಂದಿದ್ದು, ಇದರಿಂದ ಕಾರ್ಖಾನೆಗೆ 10.01 ಕೋಟಿ ಲಾಭ ನೀರೀಕ್ಷಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 69,715 ಎಕರೆ ಪ್ರದೇಶದ ಕಬ್ಬನ್ನು ಕಾರ್ಖಾನೆಗೆ ಪೂರೈಸಲು ರೈತರು ನೋಂದಾಯಿಸಿಕೊಂಡಿದ್ದಾರೆ. ಸುಮಾರು 10 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 11 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕಲಟ್ಟಿ ಮಾಹಿತಿ ನೀಡಿದರು. ಬೆಳಗಾವಿ ಜಿಲ್ಲೆಯ ಇತರೆ ಸಕ್ಕರೆ ಕಾರ್ಖಾನೆಗಳಿಗಿಂತ ರೈತರಿಗೆ ಪ್ರತಿ ಮೆಟ್ರಿಕ್ ಟನ್ಗೆ ಹೆಚ್ಚುವರಿ ದರ ಪಾವತಿಸುವ ಭರವಸೆಯನ್ನು ಅವರು ನೀಡಿದರು.
ಸಭೆಯಲ್ಲಿ ವೈಸ್ ಚೇರ್ಮನ್ ಅಶೋಕ ಬಸವಂತಪ್ಪ ಪಟ್ಟಣಶೆಟ್ಟಿ, ಶಿವನಾಯಿಕ ನಾಯಿಕ, ಅಪ್ಪಾಸಾಹೇಬ ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಮಹಾದೇವಸ್ವಾಮಿ, ಕಾರ್ಖಾನೆ ಹಿತಚಿಂತಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ ಸರ್ವಸಾಧಾರಣ ಸಭೆಯ ವಿಷಯಪಟ್ಟಿ ಓದಿ, ರೈತರ ಹರ್ಷೋದ್ಗಾರದ ನಡುವೆ ವಿಷಯಪಟ್ಟಿಗೆ ಅನುಮೋದನೆ ಪಡೆಯಲಾಯಿತು. ಬಳಿಕ ಸುಭಾಷ ನಾಶಿಪುಡಿ ವಂದಿಸಿದರು.