ಲೇಖನಗಳು

ದ್ವೇಷಿಸುವವರನ್ನು ಪ್ರೀತಿಸುವ ಪರ್ವ ಮುಂದುವರೆದರೆ ಬದಲಾವಣೆ ಆಗಲೇಬೇಕಲ್ಲವೇ?

ದ್ವೇಷಿಸುವವರನ್ನು ಪ್ರೀತಿಸುವ ಪರ್ವ ಮುಂದುವರೆದರೆ ಬದಲಾವಣೆ ಆಗಲೇಬೇಕಲ್ಲವೇ?

ತನ್ನನ್ನು ದ್ವೇಶಿಸುವವರನ್ನು ಪ್ರೀತಿಯಿಂದ ಕಾಣುವ ಆದರ್ಶದ ಗುಣ ಕೇವಲ ಭಾತದ ಮಣ್ಣಿನಲ್ಲಿ ಆಲ್ಲದೇ ಬೇರೆಲ್ಲೂ ಇರಲು ಸಾಧ್ಯವಿಲ್ಲ. ನಮ್ಮವರು ಯಾರನ್ನೂ ಶತ್ರುವೆಂದು ಬಗೆದು ದೂರ ಥಳ್ಳಿದವರಲ್ಲ. ನಂಬಿ ಬಂದವರಿಗೆ ಆಶ್ರಯವನ್ನು ನಿರಾಕರಿಸಿದವರಲ್ಲ. ಇರುವುದನ್ನೆ ಹಂಚಿಕೊಂಡು ತಿನ್ನುವ ಗುಣವನ್ನು ಕರಗತ ಮಾಡಿಕೊಂಡು ಬದುಕುತ್ತಿದ್ದ ಭಾರತೀಯರು ಸದಾ ಎಲ್ಲರನ್ನು ಪ್ರೀತಿಯಿಂದ ಕಂಡರು. ಆ ಗುಣದಿಂದಲೇ ಏನೋ ಭಾರತ ಎನ್ನುವ ಶಬ್ದ ಕೇಳುತ್ತಲೇ ಮೈ ಮತ್ತು ಮನದೊಳಗೆ ರೋಮಾಂಚನವಾಗುತ್ತದೆ. ಇತಿಹಾಸ, ಚರಿತ್ರೆ ಯಾವುದನ್ನೆ ತೆಗದುಕೊಂಡು ನೋಡಿದರು ಕೂಡ ಅದರಲ್ಲಿ ಒಂದಲ್ಲ ಒಂದು ರೋಮಾಂಚನಕಾರಿ ಅನುಭವ ಇದ್ದೆ ಇರುತ್ತದೆ. ಬುದ್ಧನಿಂದ ಶಾಂತಿ, ಮಹಾವೀರನಿಂದ ಮಾನವೀಯತೆ, ಬಸವಣ್ಣನಿಂದ ಸಮಾನತೆ ಕಂಡ ನಾಡು ನಮ್ಮದು. ಅದೇ ರೀತಿ ಹೊಂಚು ಹಾಕುವವರನ್ನು ಜೊತೆಗೆ ಕರೆದುಕೊಂಡು ಹಂಚಿ ತಿಂದವರು ನಾವು. ದೇಹಿ ಎಂದವರಿಗೆ ಕೈ ಎತ್ತಿ ನೀಡಿದವರು ನಾವು. ನೀರು ಬೇಡಿದವರಿಗೆ ಖಿರನಿತ್ತು ಖುಷಿಪಟ್ಟವರು ನಾವು. ಮಣ್ಣನ್ನು ಪೂಜಿಸಿ ಚಿನ್ನವನ್ನಾಗಿ ಬದಲಾಯಿಸಿದವರು ನಾವು. ಯಾವ ದೇಶದಲ್ಲೂ ಇಲ್ಲದ, ಯಾವ ದೇಶವೂ ಕಾಣದ ಚರಿತ್ರೆ ನಮ್ಮಲ್ಲಿದೆ. ಸತ್ಯಕ್ಕಾಗಿ ಸುಡುಗಾಡು ಕಾಯ್ದವರು, ಅಮ್ಮನಿಗಾಗಿ ಮನೆ ತೊರೆದವರು, ಸಹೋದರರಿಗಾಗಿ ಕಾಡು ಪಾಲಾದವರು ನಮ್ಮಲ್ಲಲ್ಲದೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಎಲ್ಲವೂ ಇದ್ದರೂ ಕೂಡ ಏನು ಇಲ್ಲದ ಬರಿಗೈ ಫಕೀರನಂತೆ ಮನೆತೊರೆದು ಹೋಗಿ ಜ್ಞಾನಿಯಾದವರು, ತನಗೆ ವಿಷವಿತ್ತವನನ್ನೆ ಮುಕ್ತಿ ಕೊಟ್ಟ ಮಹಾದೇವ ನೀನು ಎಂದು ಕೊಂಡಾಡಿದವರ ಕಥೆ ಭರತವರ್ಷದಲ್ಲಿ ಅಲ್ಲದೇ ಬೇರಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಅದಕ್ಕೆ ಹೇಳಿದ್ದು ಭಾರತ ಎಂದರೆ ಅದು ಬರೀ ದೇಶವಲ್ಲ ಬದಲಿಗೆ ಅದೊಂದು ಬದುಕಿನ ಮಾರ್ಗ. 

ವೀರ ಸನ್ಯಾಸಿ ವಿವೇಕಾನಂದರ ಅಮೃತವಾಣಿಯೊಂದು ನೆನಪಿಗೆ ಬರುತ್ತಲಿದೆ ಅದೇನೆಂದರೆ “ಜಗದ ಇತಿಹಾಸದಲ್ಲೆಲ್ಲಾ ಮಹಾಪುರುಷರು ಮಹಾತ್ಯಾಗ ಮಾಡುತ್ತಾರೆ ಅದರ ಫಲವನ್ನು ಜನಸಾಮಾನ್ಯರು ಅನುಭವಿಸುವುದನ್ನು ನಾವು ನೋಡಬಹುದು, ನಿನ್ನ ಸ್ವಂತ ಮುಕ್ತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವುದರಲ್ಲಿ ಏನು ಇಲ್ಲ. ಜಗದ ಹಿತಕ್ಕಾಗಿ ನಿನ್ನ ಸ್ವಂತ ಮುಕ್ತಿಯನ್ನು ಕೂಡ ಮರೆಯ ಬಲ್ಲೆಯಾ? ಆಗ ನೀನೆ ದೇವರು ಇದನ್ನು ಆಲೋಚಿಸಿ ನೋಡು” ಎನ್ನುವುದನ್ನು ಓದಿದರೆ ನಾವು ಬದುಕಬೇಕಾಗಿರುವ ಬದುಕಿನ ಮಾರ್ಗ ಹೇಗಿರಬೇಕು ಎನ್ನುವುದು ಸ್ಪಷ್ಟವಾಗುತ್ತ ಸಾಗುತ್ತದೆ. ಅದಕ್ಕೆ ಮಹಾತ್ಮಾ ಗಾಂಧೀಜಿಯವರು ವಿವೇಕಾನಂದರನ್ನುದ್ದೇಶಿಸಿ ಹೇಳಿದ್ದು, “ಭಗವದ್ಗೀತೆಯನ್ನು ತಿಳಿಯಬೇಕೆಂದಿದ್ದರೆ ಕೃಷ್ಣನನ್ನು ಓದು, ಭಾರತ ದೇಶದ ಬಗ್ಗೆ ತಿಳಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಓದು” ಎಂದು. ಹಾಗೆ ಸ್ವಾಮಿಜೀಯವರು ಬದುಕಿನ ಕಗ್ಗಂಟುಗಳನ್ನು ಒಂದೊಂದಾಗಿ ಬಿಡಿಸಿಕೊಡುತ್ತಿದ್ದರು. ದೇಶದ ವಿಷಯ ಬಂದಾಗ ಕಥೆ ಮಾಡಿ ಹೇಳುತ್ತಿದ್ದರು. ಬೇರೊಬ್ಬರ ಒಳಿತಿಗಾಗಿ ನಮ್ಮ ಮುಕ್ತಿಯನ್ನು ಮರೆತರೆ ದೇವರಾಗಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದರೆ, ದ್ವೇಶಿಸಿದವರನ್ನು ಸಹ ಪ್ರೀತಿಸುವುದರಿಂದ ಜಗತ್ತನ್ನೆ ಗೆಲ್ಲಬಹುದು ಎಂಬ ಸತ್ಯವನ್ನು ಮಹಾತ್ಮಾ ಗಾಂಧಿ ತಿಳಿಸಿಕೊಡುತ್ತಾರೆ. ಇತಿಹಾಸದ ಕಾಲಗರ್ಭದಲ್ಲಿ ಅದೆಷ್ಟೋ ರೋಚಕ ಸಂಗತಿಗಳು ಇಂದಿಗೂ ಕೂಡ ತನ್ನ ಪ್ರಸ್ತುತತೆಯನ್ನು ಹೇಳಬೇಕೆಂದು ಕಾದು ಕುಳಿತುಕೊಂಡಿವೆ. ತಾನು ಹೇಳುವ ಮಾತುಗಳು ಆಧುನಿಕ ಭಾರತ ನವ ನಾಗರಿಕರಿಗೂ ಹಾಗೂ ಭವಿಷ್ಯದ ನಾಯಕರಿಗೂ ಅತ್ಯಂತ ಅಗತ್ಯ ಎನ್ನುವುದನ್ನು ಒತ್ತಿ ಒತ್ತಿ ಸಾರುತ್ತಿವೆ. ಅವುಗಳು ನಮ್ಮ ಬದುಕನ್ನೇ ಬದಲಿಸುವ ಶಕ್ತಿ ಹೊಂದಿವೆ. ಗಾಂಧೀಜಿಯವರ ಬದುಕಲ್ಲಿ ನಡೆದ ಈ ಒಂದು ಘಟನೆ ನಮ್ಮಲ್ಲಿಯೂ ಪರಿವರ್ತನೆಯನ್ನು ತರಬಹುದು.  ದಕ್ಷಿಣ ಆಫ್ರಿಕಾಗೆಂದು ಹೋದ ಮಹಾತ್ಮಾ ಗಾಂಧೀಜಿಯವರು ಅಲ್ಲಿನ ವರ್ಣಬೇಧ ನೀತಿಯನ್ನು ಕಂಡು ಕಂಗಾಲಾದರು. ಪ್ರಾಣಿಗಳನ್ನು ಸಹ ಪ್ರೀತಿಸಿ, ಮುದ್ದಿಸಿ ಕರುಣೆ ತೋರುವ ಗುಣವುಳ್ಳ ಭಾರತ ದೇಶದಿಂದ ಹೋದ ಗಾಂಧೀಜಿಯವರಿಗೆ ಮನುಷ್ಯರನ್ನು  ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುವ ದೇಶವನ್ನು ಕಂಡು ಕಣ್ಣೀರಲ್ಲಿ ಕನಲಿ ಬಿಟ್ಟಿದ್ದರು. ಜನಸಾಮಾನ್ಯರಿಗೆ ಅನ್ಯಾಯವಾದರೆ ನ್ಯಾಯ ದೊರಕಿಸಿಕೊಡಲು ಹೋರಾಡಬೇಕು, ಅಸಾಯಕರಾಗಿ ಕಣ್ಣೀರು ಮಿಡಿಯುವ ಜನರಿಗಾಗಿ ಸಾಂತ್ವನದ ಕೈಯಾಗಬೇಕು. ದೇಶ ಯಾವುದಾದರೇನು ಸತ್ಯದ ದಾರಿ ಮಾತ್ರ ನಮ್ಮದಾಗಿರಬೇಕು ಎನ್ನುವ ಗುಣ ಗಾಂಧೀಜಿಯವರಲ್ಲಿ ರಕ್ತದಲ್ಲೇ ಬೆರೆತು ಹೋಗಿತ್ತು. ಅಲ್ಲಿನ ಕಷ್ಟ ಕಾರ​‍್ಪಣಯಗಳನ್ನು ಕಣ್ಣಾರೆ ಕಂಡ ಬಾಪೂ ಧ್ವನಿ ಇಲ್ಲದ ಜನರ ಧ್ವನಿಯಾಗಲು ಸಿದ್ಧರಾದರು. ವರ್ಣಬೇಧ ನೀತಿಯ ವಿರುದ್ಧ ಪಾಂಚಜನ್ಯ ಮೊಳಗಿಸಿದರು. ಇದರ ಕಹಳೆಗೆ ಇಡೀ ದಕ್ಷಿಣ ಆಫ್ರಿಕಾದ ಶೋಷಿತರೆಲ್ಲ ಬೀದಿಗಳಿದರು, ಬಿಳಿಯರ ದಬ್ಬಾಳಿಕೆಗೆ ಧ್ವನಿಯನ್ನೇ ಕಳೆದುಕೊಂಡಿದ್ದ ಶೋಷಿತರ ಪರವಾಗಿ ಗಾಂಧೀಜಿ ಮಾತನಾಡಲು ಮುಂದಾದರು, ಹಸಿದ ಜನರ ಮೇಲಾಗುವ ದೌರ್ಜ್ಯನ್ಯ ಖಂಡಿಸಿ ಉಪವಾಸ ಕುಳಿತರು, ಶಾಂತಿಯಿಂದಲೇ ಬಿಳಿಯರ ಮನಒಲಿಸುವ ಪ್ರಯತ್ನಕ್ಕೆ ಕೈಹಾಕಿದರು. ವರ್ಣಬೇಧದ ಮುಕ್ತಿಗಾಗಿ ಪ್ರತಿಭಟನೆಯಲ್ಲಿ ನಿರತವಾದ ಗಾಂಧೀಜಿಯವರ ಎದೆಗೆ ದಕ್ಷಿಣಾಫ್ರಿಕಾದ ಧುರಹಂಕಾರಿ ಅಧ್ಯಕ್ಷ ಜನರಲ್ ಸ್ಮರ್ಟ್ಸ್‌ ಜೋರಾಗಿ ಒದ್ದನು. ಬಾಯಿಗೆ ಬಂದ ಶಬ್ದಗಳಲ್ಲಿ ನಿಂದಿಸಿದನು.  ನಂತರ ಅವರನ್ನು ಜೈಲಿಗೆ ತಳ್ಳಿಸಿದನು. ಆ ಮೂಲಕ ಗಾಂಧಿಜಿಯವರ ಮೇಲಿನ ತನ್ನ ಸಿಟ್ಟನ್ನು ತೀರಿಸಿಕೊಂಡನು. ‘ಸತ್ಯದ ದಾರಿಯಲ್ಲಿ ನಡೆವವನು ಮರು ಉತ್ತರವನ್ನು ನೀಡುತ್ತ ವ್ಯರ್ಥ ಸಮಯ ಕಳೆಯಬಾರದು’ ಎಂದು ಹೇಳುವ ಗಾಂಧಿ ಆ ವ್ಯಕ್ತಿಯ ನಡೆಯಿಂದ ವಿಚಲಿತರಾಗದೇ ಜೈಲಿನಲ್ಲಿಯೂ ತಮ್ಮ ಮನೋಬಲದಿಂದ ಶಿಕ್ಷೆ ಅನುಭವಿಸಿದರು. ಈ ಸಂದರ್ಭದಲ್ಲಿ ನಡೆದ ಆ ಒಂದು ಘಟನೆ ಗಾಂಧೀಜಿಯವರ ಬದುಕಿಗೂ ಹಾಗೂ ಭಾರತ ಪರಂಪರೆಯ ಬುನಾದಿಗೂ ಕನ್ನಡಿಯನ್ನು ಹಿಡಿಯುತ್ತದೆ ಮಾತ್ರವಲ್ಲ ನಮಗೂ ಕೂಡ ಬದಲಾವಣೆಯ ದಾರಿಯನ್ನು ತೋರುತ್ತದೆ. ಆಫ್ರಿಕಾದ ಜೈಲಿನ ಸಲಾಕೆಗಳ ಹಿಂದೆ ಬಂಧಿಯಾಗಿದ್ದ ಗಾಂಧಿಜಿ ಅಲ್ಲಿಯೇ ಕೆಲಸ ಮಾಡುತ್ತ ಚಪ್ಪಲಿಗಳನ್ನು ಹೊಲಿಯುವ ಕೆಲಸವನ್ನು ಕರಗತ ಮಾಡಿಕೊಂಡಿದ್ದರು. ಅದರ ಮೂಲಕವಾಗಿ ಒಂದು ಜೊತೆ ಸುಂದರವಾದ ಚಪ್ಪಲಿಗಳನ್ನು ತಯಾರಿಸಿದರು. ಜೈಲಿನಿಂದ ಬಿಡುಗಡೆಯಾಗಿ ಹೊರ ಬರುವ ಸಮಯದಲ್ಲಿ ತಾವು ಹೊಲಿದ ಚಪ್ಪಲಿಯನ್ನು ತನ್ನೆದೆಗೆ ಸಿಟ್ಟಿನಿಂದ ಒದ್ದ ಸ್ಮರ್ಟ್ಸ್‌ಗೆ ಉಡುಗೊರೆಯಾಗಿ ನೀಡಿದರು. ಈ ದೃಶ್ಯವನ್ನು ಕಂಡವರೆಲ್ಲ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದರು. ಎದೆಗೆ ಒದ್ದವನ ಪಾದಗಳಿಗೆ ಪಾದರಕ್ಷೆ ಹೊಲಿದು ಕೊಡುತ್ತಾನೆಂದರೆ ಈತ ಎಂತ ವ್ಯಕ್ತಿಯಾದರೂ ಇರಬೇಕು, ಇವನದು ಅದೆಂತಾ ವ್ಯಕ್ತಿತ್ವವಾಗಿರಬೇಕು ಎಂದು ಎಲ್ಲರೂ ದಿಗ್ಭ್ರಮೆಗೊಂಡರು. 

 ದಿನಕಳೆದಂತೆ ದಕ್ಷಿಣಾಫ್ರಿಕಾದಿಂದ ಭಾರತಕ್ಕೆ ಬಂದ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಗಂಗೆಯ ಒಡಲಿಗೆ ಧುಮುಕಿ ತಮ್ಮನ್ನು ತಾವು ಭಾರತ ಮಾತೆಯ ಚರಣಗಳಿಗೆ ಅರ​‍್ಿಸಿಕೊಂಡು ಬಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟವೆಂಬ ಯಜ್ಞದಲ್ಲಿ ತಮ್ಮನ್ನು ತಾವು ಸಮರ​‍್ಿಸಿಕೊಂಡ ಸಂದರ್ಭದಲ್ಲಿ ಗಾಂಧೀಜಿಯವರ ಜನ್ಮದಿನ ಬಂದಿತು. ಈ ದಿನಕ್ಕಾಗಿ ದಕ್ಷಿಣ ಆಫ್ರಿಕಾದಿಂದ ಒಂದು ಉಡುಗೊರೆ ಬಂದಿತು. ಅದನ್ನು ತೆರೆದು ನೋಡಿದ ಗಾಂಧೀಜಿಯವರಗೆ ಅಚ್ಚರಿ ಕಾದಿತ್ತು. ಕಾರಣ ಅದರಲ್ಲಿ ತಾವೇ ತಯಾರಿಸಿ ಸ್ಮರ್ಟ್ಸಗೆ ಕಾಣಿಕೆಕೊಟ್ಟ ಚಪ್ಪಲಿಗಳಿದ್ದವು. ಅವುಗಳನ್ನು ಸ್ಮರ್ಟ್ಸ್‌ ಗಾಂಧೀಜಿಯವರಿಗೆ ವಾಪಸ್ಸು ಕಳುಹಿಸಿದ್ದನು. ಜೊತೆಯಲ್ಲಿ ಒಂದು ಪತ್ರವನ್ನು ಇಟ್ಟಿದ್ದನು. ಆ ಪತ್ರದಲ್ಲಿ “ಗಾಂಧೀಜಿಯವರೇ ಅಂದು ನೀವು ನನಗಾಗಿ ನೀಡಿದ ಚಪ್ಪಲಿಗಳನ್ನು ನಾನು ನಿಮಗೆ ವಾಪಸ್ಸು ಕಳುಹಿಸುತ್ತಿದ್ದೇನೆ, ಕಾರಣ ಅವುಗಳನ್ನು ತೊಡುವ ಯೋಗ್ಯತೆ ನನ್ನಲ್ಲಿಲ್ಲ. ಇಷ್ಟು ದಿವಸ ಅವುಗಳನ್ನು ಪೂಜಿಸುತ್ತಿದ್ದೆ. ಆದರೆ ಇಂದು ಅವುಗಳನ್ನು ನಿಮಗೇ ಸಮರ​‍್ಿಸುತ್ತಿದ್ದೇನೆ” ಎಂದು ಬರೆದಿದ್ದನು. ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸದೇ ಯುದ್ಧ ಗೆಲ್ಲಬಹುದು ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ ಅಲ್ಲವೇ?. ಏಕೆಂದರೆ ಆ ಧುರಹಂಕಾರಿಯಾಗಿ ಅಧಿಕಾರದ ಮಧವನ್ನು ಪ್ರದರ್ಶಿಸಿದ ಸ್ಮರ್ಟ್ಸನ ಜೊತೆಗೆ ಏರು ಧ್ವನಿಯಲ್ಲಿ ಮಾತನಾಡದ ಗಾಂಧಿಜಿಯವರು ಕೇವಲ ಉಡುಗೊರೆಯನ್ನು ನೀಡುವ ಮೂಲಕ ಆತನ ಮನವನ್ನು ಕಲಕಿದ್ದರು. ದ್ವೇಷಿಸುವವನನ್ನು ದ್ವೇಶಿಸಿದಷ್ಟು ದ್ವೇಷ ಹೆಚ್ಚಾಗುತ್ತದೆ. ಅಸೂಹೆ ಹೊಗೆಯಾಡುತ್ತದೆ, ನೆಮ್ಮದಿ ನಾಶವಾಗುತ್ತದೆ, ಶಾಂತಿ ಸಾಯುತ್ತದೆ, ಬುದ್ಧಿ ಲದ್ದಿ ತಿನ್ನುತ್ತದೆ. ಅದೇ ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸಿದರೆ ಬರಡು ಮನಸ್ಸಿನಲ್ಲೂ ಬಂಗಾರದ ಹೂವು ಅರಳುತ್ತದೆ. ಪ್ರೇಮದ ಕಂಪು ಸೂಸುತ್ತದೆ ಎನ್ನುವ ಸತ್ಯವನ್ನು ಕಂಡುಕೊಂಡಿದ್ದ ಗಾಂಧೀಜಿ ತಮ್ಮ ಉದಾತ್ತವಾದ ನಿಲುವಿನಿಂದಲೇ ತಾನು ಮಾಡಿದ ಕಾರ್ಯಕ್ಕಾಗಿ ತಾನೇ ಪಶ್ಚಾತಾಪ ಪಟ್ಟುಕೊಂಡು ತನ್ನ ಪಾಪಕ್ಕೆ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿದರು. “ಪಾಪವನ್ನು ದ್ವೇಷಿಸಿ ಆದರೆ ಪಾಪಿಯನ್ನು ಪ್ರೀತಿಸು” ಎನ್ನುವ ಅವರ ಹೃದಯ ವೈಶಾಲ್ಯತೆಯನ್ನು ಸದ್ದಿಲ್ಲದೆ ಜಗತ್ತಿನೆದುರು ಪ್ರದರ್ಶಿಸಿದ್ದರು. ಅಂದು ಗಾಂಧಿ ಕೊಟ್ಟದ್ದು ಕೇವಲ ಉಡುಗೊರೆಯಾಗಿದ್ದಿಲ್ಲ. ಬದಲಿಗೆ ಆ ಅಧಿಕಾರಿಯಲ್ಲಿನ ದುಷ್ಟ ಮನಸ್ಸನ್ನು ಹಾಗೂ ಸೊಕ್ಕನ್ನು ಸದೆ ಬಡೆದುದುರ ಸಂಕೇತವಾಗಿತ್ತು. ಆದರೆ ಈ ಗುಣ ರಾಷ್ಟ್ರಪಿತನಿಗೆ ಬಂದಿದ್ದಾದರು ಎಲ್ಲಿಂದ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡರೆ ಸಿಗುವ ಉತ್ತರ ಒಂದೇ ಅದು ಮಹಾತ್ಮರ ತಪೋ ಭೂಮಿಯಲ್ಲಿ ಜನ್ಮವೆತ್ತಿದ ಕಾರಣದಿಂದ. ಜಗತ್ತಿನಲ್ಲಿ ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದದ್ದು ಭಾರತ ದೇಶ ಒಂದೇ. ಎಲ್ಲ ದೇಶಗಳು ಪ್ರೀತಿಯನ್ನು ವ್ಯಾಪಾರದ ಸರಕಾಗಿ ಮಾಡಿಕೊಂಡರೆ ನಮ್ಮ ದೇಶಮಾತ್ರ ಪ್ರೀತಿಯನ್ನು ಬಾಂಧವ್ಯ ಬೆಸುಗೆಯಾಗಿ ಮಾಡಿಕೊಂಡಿದೆ. ಆ ಕಾರಣಕ್ಕಾಗಿಯೇ ಗಾಂಧಿಜಿಯವರು ಕಡಲಾಚೆ ಇದ್ದರೂ ಕೂಡ ಕಳ್ಳುಬೆಳ್ಳಿಯ ಸಂಬಂಧವನ್ನು ಕಟ್ಟಿಕೊಂಡು ಬಂದಿದ್ದರು. ಇದು ಭಾರತ ದೇಶ ಜಗತ್ತಿಗೆ ನೀಡಿದ ಕೊಡುಗೆ. ದ್ವೇಶದಿಂದ ಯಾರನ್ನು ಗೆಲ್ಲಲೂ ಸಾಧ್ಯವಿಲ್ಲ. ದ್ವೇಶದಿಂದ ಸಾವನ್ನು ಸೃಷ್ಠಿಸಬಹುದೇ ಹೊರತು ಬದುಕನ್ನು ಕಟ್ಟುವುದಕ್ಕಾಗುವುದಿಲ್ಲ. ಹಿಂಸೆಗೆ ಪ್ರತಿಹಿಂಸೆ ನೀಡಲು ಮುಂದಾದರೆ ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವಾದರೂ ಏನು ಉಳಿಯುತ್ತದೆ. ದ್ವೇಷಿಸುವವನ್ನು ಪ್ರೀತಿಸುವುದು, ಹಿಂಸಿಸುವವನನ್ನು ಪರಿವರ್ತಿಸುವುದು ನಮ್ಮ ಪರಂಪರೆಯಲ್ಲಿ ರಕ್ತಗತವಾಗಿಯೇ ಬಂದು ಬಿಟ್ಟಿದೆ. ಅದಕ್ಕೆ ತಾನೇ ಕ್ರೂರಿಯಾದ ಅಂಗೂಲಿಮಾಲ ಬುದ್ಧನ ನಗುವಿನಿಂದ ಮಗುವಂತಾಗಿ ಹೋಗಿದ್ದು, ಅದರಿಂದ ತಾನೆ ಕಳ್ಳನಾಗಿದ್ದ ರತ್ನಾಕರ ವಾಲ್ಮಿಕಿಯಾಗಿದ್ದು. ಹೀಗೆ ಇತಿಹಾಸದುದ್ದಕ್ಕೂ ಇಂತ ಪರಿವರ್ತನೆಯ ಮಹಾಪ್ರಸಂಗಗಳನ್ನು ನಾವು ಕಾಣುತ್ತಲೇ ಹೋಗುತ್ತೇವೆ. ಆದರೆ ಭಾರತಿಕ್ಕಿಂದು ನಿಜವಾದ ಸಮಸ್ಯೆಯೊಂದು ಎದುರಾಗಿದೆ. ಹೇಗೆ ಅಂಗೂಲಿಮಾಲಾನನ್ನು ಪರಿವರ್ತಿಸಿ ತನ್ನ ಶಿಷ್ಯೋತ್ತಮನನ್ನಾಗಿ ಬುದ್ಧ ಮಾಡಿಕೊಂಡನೋ ಹಾಗೆ ನಮ್ಮ ಯುವಕರ ಮನವನ್ನು ಪರಿವರ್ತಿಸುವ ಮಹಾ ಮಾಂತ್ರಿಕನೊಬ್ಬನ ಆಗಮನವಾಗಬೇಕಿದೆ. ದೇಶದಲ್ಲಿ ತನ್ನ ಅಸ್ಥಿತ್ವವೇನು ತನ್ನ ನಿಜವಾದ ಕಾರ್ಯವೇನು ಎನ್ನುವುದನ್ನು ಮರೆತಿರುವ ಯುವಪಡೆ ಹಂತ ಹಂತವಾಗಿ ದೇಶಕ್ಕೆ ಮಾರಕವಾಗುವ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ, ಬೆಳೆಯುತ್ತಿದ್ದಾರೆ ಎನ್ನುವುದಕ್ಕಿಂತ ನಮ್ಮವರೇ ಹಾಗೆ ಬೆಳೆಸುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇಲ್ಲಿ ಆದರ್ಶ ಬೋಧಿಸಬೇಕಾದವರೇ ಆದರ್ಶ ಹೀನರಾಗುತ್ತಿದ್ದಾರೆ, ಇತಿಹಾಸ ತಿಲಿಸಿಕೊಡಬೇಕಾದವರೇ ಇತಿಹಾಸವನ್ನು ಮರೆಯುತ್ತಿದ್ದಾರೆ, ಪರಂಪರೆಯ ಕೊಂಡಿಯನ್ನು ಮುಂದಿನ ಪೀಳಿಗೆಗೆ ಜೋಡಿಸಬೇಕಾದವರೆ ಅದನ್ನು ನಿರ್ಧಯವಾಗಿ ಕತ್ತರಿಸಲು ಮುಂದಾಗಿದ್ದಾರೆ. ಜಾಗತೀಕರಣ, ಓದ್ಯೋಗೀಕರಣ, ಯಾಂತ್ರೀಕರಣ ಎನ್ನುವ ಹೆಸರಿನಲ್ಲಿ ನಮ್ಮ ಒಗ್ಗಟ್ಟೆನ್ನುವ ಜೇನು ಗೂಡಿಗೆ ಕಲ್ಲು ಎಸೆಯುತ್ತಿದ್ದಾರೆ. ಜಾತಿ ಧರ್ಮ ಎನ್ನುವ ವಿಷವನ್ನು ಜಾತ್ಯಾತೀತ ಎನ್ನುವ ಗಾಳಿಯಲ್ಲಿ ತೇಲಿಬಿಟ್ಟು ಮೋಜು ನೋಡುತ್ತಿದ್ದಾರೆ. ಇದರಿಂದಾಗಿ ಯುವಪಡೆ ದಾರಿ ತಪ್ಪುತ್ತಿದೆ. ಮುಂದೆ ಇದು ಯಾವ ಸಂಕಷ್ಟವನ್ನು ತಂದೊಡ್ಡುತ್ತದೆಯೋ ತಿಳಿಯುತ್ತಿಲ್ಲ. 

ರಾಷ್ಟ್ರಭಕ್ತರ ರಾಷ್ಟ್ರಭಕ್ತ, ದೇಶಪ್ರೇಮಿಗಳ ದೇಶಪ್ರೇಮಿ ಎಂದು ಕರಿಸಿಕೊಂಡಿರುವ ಸ್ವಾಮಿವಿವೇಕಾನಂದರ ಆದರ್ಶದ ಮಾತುಗಳು ಇಂದು ಯುವಕರನ್ನು ತಲುಪುತ್ತಿಲ್ಲ. ಗಾಂಧೀಜಿಯಂತವರ ಸಾಧನೆಯ ಹಾದಿ, ಶಾಂತಿಯ ನೆಲೆ ಯಾರಿಗೂ ಅರ್ಥವಾಗುತ್ತಿಲ್ಲ. ಸಮಾನತೆ ಬೋಧಿಸಿದ ಬಸವನ ಮಾತು ಯಾರಿಗೂ ಕೇಳಿಸುತ್ತಿಲ್ಲ, ಕ್ರಾಂತಿ ಚಿರವಾಗಲಿ ಎಂದ ಭಗತ್‌ನ ದೇಶಭಕ್ತಿಯ ಕಿಡಿ ಎಲ್ಲೂ ಹೊತ್ತುತ್ತಿಲ್ಲ. ಚಾರಿತ್ರಿಕ ಭಾರತ ನಿರ್ಮಾಣ ಮಾಡುವುದಕ್ಕಾಗಿ ನಮ್ಮ ಮಹಾತ್ಮರು ಪಟ್ಟ ನೋವು, ವ್ಯಥೆ, ಸಂಕಟ ಯಾರಿಗೂ ತಿಳಿಯುತ್ತಿಲ್ಲ. ಇದರಿಂದಾಗಿ ದೇಶಕ್ಕೆ ಪೂರಕವಾಗಬೇಕಾದವರೇ ಮಾರಕರಾಗುತ್ತಿದ್ದಾರೆ. ಅಂದು ಎದೆಗೆ ಒದ್ದವನನ್ನೇ ಎದೆಗಪ್ಪಿಕೊಂಡು ಬದಲಾವಣೆ ಮಾಡಿದ ಗಾಂಧೀಜಿ ಜನಿಸಿದ ದೇಶದಲ್ಲೇ ನಾವು ನಾವುಗಳೇ ನಾಯಿ ನರಿಗಳ ಹಾಗೆ ಕಿತ್ತಾಡಿಕೊಳ್ಳುತ್ತಿದ್ದರೆ ನಮ್ಮನ್ನು ಬೇಟೆ ಆಡುವುದಕ್ಕೆ ಬೇರೊಬ್ಬರ ಆಗಮನವಾಗುತ್ತದೆ. ಅಂದೂ ನಾವು ಅದನ್ನೇ ಮಾಡಿದ್ದು ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವ ಹಾಗೆ ಜಾತಿ, ಮತ, ಪಂಥ ಬೇಧ ಸೃಷ್ಠಿ ಮಾಡಿಕೊಳ್ಳುವುದರ ಮೂಲಕ ನಮ್ಮನ್ನು ಆಳಿಸಿಕೊಳ್ಳುವುದಕ್ಕೆ ನಾವೇ ಮತ್ತೊಬ್ಬರಿಗೆ ಅವಕಾಶ ಮಾಡಿಕೊಟ್ಟೆವು. ಇಂದೂ ಅದೇ ಮುಂದುವರೆಯುತ್ತಿದ್ದರೆ ಅಂದಿಗಿಂತಲೂ ಭಯಾನವಕವಾದ ವಾತಾವರಣ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ. ಗಾಂಧೀಜಿ ವಿದೇಶಕ್ಕೆ ತೆರಳಿ ವಿದೇಶದಲ್ಲಿದ್ದವರನ್ನೇ ಪರಿವರ್ತನೆ ಮಾಡಿದರೆಂದ ಮೇಲೆ ಅವರ ಆದರ್ಶಗಳ ಅರಿವನ್ನು ನಾವು ಮಾಡಿಕೊಂಡರೆ ನಮ್ಮನ್ನು ನಾವು ಸ್ವಯಂ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ. ಸಾಕು...! ಇನ್ನಾದರೂ ಕೇವಲ ನೆಪ ಮಾತ್ರಕ್ಕೆ ದಾರಿದ್ರ್ಯದ ಬದುಕನ್ನು ಬದುಕುವುದನ್ನು ಬಿಟ್ಟು, ದಿಟ್ಟ ನಿಲುವು ಹಾಗೂ ಗಟ್ಟಿ ನಿರ್ಧಾರ ಮಾಡಿ ನನ್ನ ದೇಶ, ನನ್ನ ಪರಂಪರೆ ಎನ್ನುವುದನ್ನು ಕಂಡುಕೊಂಡು ಬದುಕಿದ್ದರೆ ಭವ್ಯ ಭಾರತದ ನಿರ್ಮಾಣವಾಗುವುದರ ಜೊತೆಗೆ ಸದೃಢ ಭಾರತವು ಕೂಡ ನಿರ್ಮಾಣವಾಗುತ್ತದೆ. 

ದ್ವೇಷಿಸಿದವರನ್ನು ಪ್ರೀತಿಸುವ ಮೂಲಕ ಗಾಂಧೀಜಿ ಹೊಸದೊಂದು ಪರ್ವವನ್ನು ಹುಟ್ಟುಹಾಕಿದರು. ಆ ಪರ್ವ ಹಾಗೆ ಮುಂದು ವರೆದಿದ್ದರೆ ನಮ್ಮ ದೇಶದಲ್ಲಿ ಹಿಂಸೆ ನಡೆಯುತ್ತಿರಲಿಲ್ಲವೇನೋ ಎನ್ನುವ ಭಾವನೆಯೊಂದು ಆಗಾಗ ನನ್ನನ್ನು ಕಾಡುತ್ತದೆ. ಆದರೆ ನಮ್ಮವರನ್ನೇ ನಾವೀಗ ಪ್ರೀತಿಸುವ ಮಟ್ಟದಲ್ಲಿಲ್ಲವಲ್ಲ ಎನ್ನುವುದು ನೆನಪಾದಾಗ ನೋವಾಗುತ್ತದೆ. ಬದಲಾವಣೆಯ ಪರ್ವಕ್ಕೆ ಗಾಂಧೀ ಮುನ್ನುಡಿ ಬರೆದರೆ ಅದರ ಮುಂದಿನ ಅಧ್ಯಾಯಗಳನ್ನು ನಾವುಗಳು ರಚಿಸೋಣ. 

- * * * - 


ಸುದ್ದಿ ಓದಿ