“ದಿ ಕಾಶ್ಮೀರ್ ಫೈಲ್ಸ್”: ದೊಡ್ಡ ಸ್ಟಾರ್ಗಳಿಲ್ಲದ ಚಿತ್ರದಲ್ಲಿ ಹಣದಹೊಳೆ!!
ಮುಂಬೈ: ಮಾರ್ಚ್ 15 : ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಸೋಮವಾರದ ಕಲೆಕ್ಷನ್ ಇಡೀ ಹಿಂದಿ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ. ಮಾಹಿತಿಯ ಪ್ರಕಾರ, ಸೋಮವಾರದಂದು ಚಿತ್ರದ ಸ್ಕ್ರೀನ್ಗಳ ಸಂಖ್ಯೆ ಎರಡೂವರೆ ಸಾವಿರ ದಾಟಿದೆ. ಈ ಚಿತ್ರವು ಭಾನುವಾರಕ್ಕಿಂತ ಸೋಮವಾರ ಹೆಚ್ಚು ಗಳಿಕೆ ಮಾಡಿದೆ. ಯಾವುದೇ ಚಿತ್ರ ಬಿಡುಗಡೆಯಾದ ಬಳಿಕ ಸೋಮವಾರವನ್ನು ಅದರ ಬಾಕ್ಸ್ ಆಫೀಸ್ ಕಲೆಕ್ಷನ್ನ ಅತ್ಯಂತ ಪ್ರಮುಖ ದಿನವೆಂದು ಪರಿಗಣನೆ ಮಾಡಲಾಗುತ್ತದೆ. ಸೋಮವಾರದ ಗಳಿಕೆಗೆ ಸಂಬಂಧಿಸಿದಂತೆ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಶಾಹಿದ್ ಕಪೂರ್ ಅವರ ಬ್ಲಾಕ್ ಬಸ್ಟರ್ ಚಿತ್ರ ‘ಕಬೀರ್ ಸಿಂಗ್’, ಅಕ್ಷಯ್ ಕುಮಾರ್ ಅವರ ಚಿತ್ರ ‘ರುಸ್ತಂ’, ಅಜಯ್ ದೇವಗನ್ ಅವರ ಚಿತ್ರ ‘ಶಿವಾಯ್’ ಮತ್ತು ಶಾರುಖ್ ಖಾನ್ ಅವರ ಚಿತ್ರ ‘ರಾ ಒನ್’ ಸಿನೆಮಾಗಳನ್ನು ಹಿಂದಿಕ್ಕಿದೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿದೆ. ಮಾರ್ಚ್ 11ರಂದು ಶುಕ್ರವಾರ ಈ ಸಿನೆಮಾ ಬರೋಬ್ಬರಿ 650 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಕ್ರೀನ್ ಗಳ ಸಂಖ್ಯೆ 2500 ದಾಟಿದೆ. ಇದಾದ ನಂತರವೂ ಥಿಯೇಟರ್ಗಳಲ್ಲಿ ಜನರು ನೆಲದ ಮೇಲೆ ಕುಳಿತು ಚಿತ್ರ ವೀಕ್ಷಿಸುತ್ತಿರುವುದು ಕಂಡುಬಂದಿದೆ. ನೋಡಿದವರ ಮೆಚ್ಚುಗೆಯೇ ಚಿತ್ರದ ಯಶಸ್ಸಿಗೆ ದೊಡ್ಡ ಕಾರಣ ಎನ್ನಲಾಗುತ್ತಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಶುಕ್ರವಾರ 3.25 ಕೋಟಿ, ಶನಿವಾರ 8.25 ಕೋಟಿ ಹಾಗೂ ಭಾನುವಾರ ಸುಮಾರು 14 ಕೋಟಿ ಗಳಿಸಿದೆ. ಸೋಮವಾರ ಸಂಜೆ ಮುಂಬೈ ತಲುಪಿದ ಅಂಕಿಅಂಶಗಳ ಪ್ರಕಾರ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸೋಮವಾರ 18 ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ದಿ ಕಾಶ್ಮೀರ್ ಫೈಲ್ಸ್ ಫಿಲಂಗೆ ಭಾರತೀಯ ಜನತಾ ಪಾರ್ಟಿ ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತರೂಢ ರಾಜ್ಯಗಳಾದ ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಗೋವಾ ಹಾಗೂ ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಲಾಗಿದೆ