ರಾಣೆಬೆನ್ನೂರ

ಲಯನ್ಸ್‌" ಸೇವಾ ಸಂಸ್ಥೆ ಸಾಮಾಜಿಕ ಸೇವೆಗೆ ಬದ್ಧ - ಮಲ್ಲೇಶಪ್ಪ ಅರಕೇರಿ

ಲಯನ್ಸ್‌" ಸೇವಾ ಸಂಸ್ಥೆ ಸಾಮಾಜಿಕ ಸೇವೆಗೆ ಬದ್ಧ - ಮಲ್ಲೇಶಪ್ಪ ಅರಕೇರಿ

 ರಾಣೆಬೆನ್ನೂರು, ಜು.11: ದೇಹದ ಎಲ್ಲ ಅಂಗಗಳಿಗಿಂತ ಕಣ್ಣು ಅತ್ಯಂತ ಮಹತ್ವದ ಅಂಗವಾಗಿದೆ. ಕೈ-ಕಾಲು ಇಲ್ಲದಿದ್ದರೂ ಜೀವನ ನಡೆಸಬಹುದು, ಆದರೆ ಕಣ್ಣುಗಳಿಲ್ಲದಿದ್ದರೆ ಜೀವನವೇ ಕತ್ತಲೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಎನ್ಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ಸಮಾಜಸೇವಕ ಮಲ್ಲೇಶಪ್ಪ ಅರಕೇರಿ ಹೇಳಿದರು.  

ನಗರದ ಲಯನ್ಸ್‌ ಶಾಲಾ ಸಭಾಭವನದಲ್ಲಿ ಲಯನ್ಸ್‌ ಸೇವಾ ಸಂಸ್ಥೆ, ಶ್ರೀ ಕಾಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್‌, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ವಿದ್ಯಾಶಂಕರ ಸೇವಾ ಟ್ರಸ್ಟ್‌ ಹಾಗೂ ಸ್ವಾಗತ ಸಾರ್ವಜನಿಕ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಲಯನ್ಸ್‌ ಸೇವಾ ಸಂಸ್ಥೆ ತನ್ನ ಆರಂಭದಿಂದಲೂ ವಿವಿಧ ರೀತಿಯ ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಾ ಬಂದಿದೆ. ಜನಸಾಮಾನ್ಯರ ಸೇವೆಯೇ ತನ್ನ ಧ್ಯೇಯವಾಗಿದ್ದು, ಇಂತಹ ವಿಶೇಷ ಕಾರ್ಯಕ್ರಮಗಳ ಮೂಲಕ ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ಶಿಬಿರಗಳಿಂದ ಸಾಮಾನ್ಯರು ಹಾಗೂ ಬಡವರಿಗೆ ಯಾವುದೇ ವೆಚ್ಚವಿಲ್ಲದೆ ಉತ್ತಮ ಚಿಕಿತ್ಸೆಯ ಸೌಲಭ್ಯ ದೊರೆಯುತ್ತಿದೆ ಎಂದು ಅವರು ತಿಳಿಸಿದರು.  

ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ಕೋಟ್ರೇಶಪ್ಪ ಎಮ್ಮಿ, ಡಾ. ವೈಷ್ಣವಿ, ಸ್ವಾಗತ ಆಸ್ಪತ್ರೆಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಟಿ.ಸಿ. ಪಾಟೀಲ, ಶಿವಪ್ಪ ಗುರಿಕಾರ, ಬಸವರಾಜ ಬಡಿಗೇರ, ರಾಜಣ್ಣ ಅಡಿವೆಪ್ಪನವರ, ಅಶೋಕ ಹೂಟಿಗೌಡ್ರ, ಎಸ್‌.ವಿ. ಪುರಾಣಿಕ, ಪರಶುರಾಮ ಕುರುವತ್ತಿ ಸೇರಿದಂತೆ ಅನೇಕ ಗಣ್ಯರು, ಲಯನ್ಸ್‌ ಪದಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.  

ಕವಿತಾ ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಕಾರ್ಯದರ್ಶಿ ಪ್ರಭುಲಿಂಗಪ್ಪ ಹಲಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಆರಿ​‍್ವ. ಸುರಗೋಂಡ ನಿರೂಪಣೆ ನಡೆಸಿ, ಜಿ.ಎಂ. ಬಿದರಿ ವಂದಿಸಿದರು.  ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ 160ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಗೊಳಪಟ್ಟಿದ್ದು, ಅಂತಿಮವಾಗಿ 112 ನಾಗರಿಕರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. 


ಸುದ್ದಿ ಓದಿ