ವಿದ್ಯಾರ್ಥಿಗಳು ಉದಾತ್ತವಾದ ಗುರಿ ಹೊಂದಬೇಕು: ವೀರಮಹಂತ ಶಿವಾಚಾರ್ಯ ಶ್ರೀ
ರಾಮದುರ್ಗ : ವಿದ್ಯಾರ್ಥಿಗಳು ಉದಾತ್ತವಾದ ಗುರಿಯನ್ನು ಇಟ್ಟುಕೊಂಡು ಶಿಸ್ತು, ಸಮಯಪಾಲನೆ ಹಾಗೂ ಛಲದಿಂದ ಜ್ಞಾನವನ್ನು ಸಂಪಾದಿಸಿದರೆ ಗುರಿ ಸುಲಭವಾಗಿ ತಲುಪಬಹುದು ಎಂದು ಅಫಜಲ್ಪೂರ ತಾಲೂಕಿನ ಚಿನ್ಮಯಗಿರಿಯ ಮಹಂತೇಶ್ವರ ಮಠದ ವೀರಮಹಂತ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ತಾಲೂಕಿನ ಚಂದರಗಿಯ ಎಸ್ ಎಂ ಕಲೂತಿ ಸಂಯುಕ್ತ ಕ್ರೀಡಾ ವಸತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉತ್ತಮ ನಾಗರಿಕನಾಗಿ ಬೆಳೆಯಲು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾದ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಭವಿಷ್ಯದಲ್ಲಿ ಏನಾಗಬೇಕೆಂದು ಈಗಲೇ ನಿರ್ಧರಿಸಿ ಶ್ರಮದಿಂದ ಓದಿ ಆ ಗುರಿ ಮುಟ್ಟಿಯೇ ತೀರಬೇಕು. ಸಮಯವನ್ನು ಈಗ ನಾವು ಗೌರವಿಸಿದರೆ ಮುಂದೆ ಸಮಯ ನಮ್ಮನ್ನು ಗೌರವಿಸುತ್ತದೆ, ಇಚ್ಚಾಶಕ್ತಿ ಇಟ್ಟುಕೊಂಡು, ಸಾಧಿಸುವ ಛಲ ಹೊಂದಿ, ಓದುವ ಹಂಬಲದೊಂದಿಗೆ ಸದಾ ಪ್ರಯತ್ನಶೀಲರಾದರೆ ಯಶಸ್ಸು ದೊರೆಯುತ್ತದೆ, ಸಾಮಾನ್ಯ ಗುರಿ ಹೊಂದಿದವರು ಕಷ್ಟ ಪಡಬೇಕಿಲ್ಲ ಆದರೆ ಅಸಾಮಾನ್ಯ ಗುರಿ ಇಟ್ಟುಕೊಂಡರೆ ಕಠಿಣ ಪರಿಶ್ರಮ ಪಡಲೇಬೇಕು ಎಂದು ಕಿವಿ ಮಾತು ಹೇಳಿದರು. ಚೆನ್ನಾಗಿ ವ್ಯಾಸಂಗ ಮಾಡಿದರೆ ನೌಕರಿ ನಿಮ್ಮನ್ನು ಹಿಂಬಾಲಿಸುತ್ತಾ ನಿಮ್ಮ ಮನೆ ಬಾಗಿಲಿಗೇ ಬರುತ್ತದೆ ಇಲ್ಲದಿದ್ದರೆ ನೀವು ನೌಕರಿಗೆ ಅಲೆದಾಡುವ ಸ್ಥಿತಿ ಬರುತ್ತದೆ ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಛಲದಿಂದ ಓದಿ ಗುರಿ ಸಾಧಿಸಿರಿ ಎಂದರು.
ವಿದ್ಯಾಲಯದ ಹಳೆಯದ ಹಳೆಯ ವಿದ್ಯಾರ್ಥಿಯೂ ಆದ ಸ್ವಾಮೀಜಿಯವರು ತಾವು ವಿದ್ಯಾಲಯದಲ್ಲಿ ಕಳೆದ ದಿನಗಳನ್ನು ಮಕ್ಕಳಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಭಾರತ ವಿಶ್ವದ ಆಧ್ಯಾತ್ಮಿಕ ರಾಜಧಾನಿಯಾಗಿದ್ದು, ತಂದೆ ತಾಯಿಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಬಾರದು ಜ್ಞಾನ ಸಂಗ್ರಹದಲ್ಲಿ ಶಿಕ್ಷಕರು ಆಹಾರದಲ್ಲಿನ ಪೋಶಕಾಂಶಗಳು ಇದ್ದಂತೆ ಎಂದರು, ಅಂದು ಹೇಳಿದ ಪಾಠಗಳನ್ನು ಅಂದೇ ಓದಿದರೆ ಪರೀಕ್ಷೆಯ ಭಯದಿಂದ ಮುಕ್ತರಾಗಬಹುದು, ನಿಂತಿರುವ ನೀರು ಅನುಪಯುಕ್ತ ಆದರೆ ಹರಿಯುವ ನದಿ ಸಮುದ್ರವನ್ನು ಸೇರುತ್ತದೆ ತಾವೆಲ್ಲಾ ಹರಿಯುವ ನೀರಾಗಬೇಕು ಎಂದು ನುಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕÀ ಎಸ್ ಆರ್ ನವರಕ್ಕಿ ಹಾಗೂ ಪ್ರಾಚಾರ್ಯರು ಉಪಸ್ಥಿತರಿದ್ದರು. ಎಸ್. ಎ. ಹಿರೇಮಠ ನಿರೂಪಿಸಿದರು, ಪ್ರಾಚಾರ್ಯ ಎ ಎನ್ ಮೋದಗಿ ಅವರು ಸ್ವಾಗತಿಸಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.