ಬೆಳಗಾವಿಯ ಸಾಂಸ್ಕೃತಿಕ ರಾಯಭಾರಿ ಶಶಿಧರ ಘಿವಾರಿ ಇನ್ನಿಲ್ಲ

ಬೆಳಗಾವಿಯ ಸಾಂಸ್ಕೃತಿಕ ರಾಯಭಾರಿ ಶಶಿಧರ ಘಿವಾರಿ ಇನ್ನಿಲ್ಲ

ಬೆಳಗಾವಿ : ಗಡಿನಾಡಿನ ಸಾಂಸ್ಕೃತಿಕ ರಾಯಭಾರಿ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕನ್ನಡ ಧುರೀಣ ಶಶಿಧರ ಘಿವಾರಿ(೬೦) ಶನಿವಾರ ನಿಧನರಾಗಿದ್ದಾರೆ.ಮಹಾಮಾರಿ ಕರೋನಾಗೆ ಅವರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿರಿಗನ್ನಡ ಪ್ರತಿಷ್ಠಾನ ಅಸ್ತಿತ್ವಕ್ಕೆ ತಂದು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಕನ್ನಡಪರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪ್ರತಿಷ್ಠಾನ ಮೂಲಕ ಕನ್ನಡ ನಾಡು- ನುಡಿಗಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರತಿವರ್ಷ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ.

ಕನ್ನಡಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ಅವರು, ಕನ್ನಡಮ್ಮನ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು.

ಸಿರಿಗನ್ನಡ ಪ್ರತಿಷ್ಠಾನ ಮೂಲಕ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಅನೇಕ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಬೆಂಗಳೂರಿಗೆ ಸೀಮಿತವಾಗಿದ್ದ ಅದ್ದೂರಿ ಕನ್ನಡ ಕಾರ್ಯಕ್ರಮಗಳನ್ನು ಬೆಳಗಾವಿಯಲ್ಲೂ ಆಯೋಜಿಸಿ ಗಡಿಕನ್ನಡಿಗರ ಗಮನ ಸೆಳೆದಿದ್ದರು.

ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಂಡು ನಾಡು, ನುಡಿಯ ವಿಷಯದಲ್ಲಿ ಕನ್ನಡಪರ  ಸಂಘಟನೆಗಳಿಗೆ ಮಾರ್ಗದರ್ಶಕರಾಗಿದ್ದರು. ನಾಡೋಜ ಸೇರಿದಂತೆ ಅನೇಕ ಸ್ಥಳೀಯ ಕನ್ನಡ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವ ಮೂಲಕ ಪತ್ರಿಕಾರಂಗದಲ್ಲಿಯೂ ಛಾಪು ಮೂಡಿಸಿದ್ದರು.

ಸಾಹಿತಿಗಳು, ಕನ್ನಡ ಹೋರಾಟಗಾರರು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಬಹುಮುಖಿ ವ್ಯಕ್ತಿತ್ವದ ಅವರು ಪ್ರತಿಯೊಬ್ಬರನ್ನು ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಅವರ ನಿಧನದಿಂದಾಗಿ ಬೆಳಗಾವಿಯ ಕನ್ನಡಪರ ಚಟುವಟಿಕೆಗಳಿಗೆ ತುಂಬಲಾರದ ಹಾನಿಯಾಗಿದೆ.

ಸುದ್ದಿ ಓದಿ