ರಬಾಕಾವಿಬನಹಟ್ಟಿ

ತಾವು ಪಟ್ಟ ಪಾಡನ್ನು ಹಾಡಾಗಿಸಿದವರು ಬೇಂದ್ರೆ: ಬೇವಿನಗಿಡದ

ತಾವು ಪಟ್ಟ ಪಾಡನ್ನು ಹಾಡಾಗಿಸಿದವರು ಬೇಂದ್ರೆ: ಬೇವಿನಗಿಡದ

ರಬಕವಿ-ಬನಹಟ್ಟಿ : ಬೇಂದ್ರೆಯವರು ಜೀವನದ ಅನುಭವವನ್ನು ಶಬ್ದಮಯವಾಗಿ ಮಾಡಿಕೊಂಡರು. ಅವರ ಕಾವ್ಯವೆಲ್ಲ ಶಬ್ದ ಸ್ಮ್ರೃತಿಯಾಗಿದೆ. ಶಬ್ದಗಳ ಇಂದ್ರಜಾಲದಿಂದ ಹೊಸ ಕಾವ್ಯ ಜಗತ್ತು ನಿರ್ಮಿಸಿದವರು ಡಾ. ದ.ರಾ. ಬೇಂದ್ರೆಯವರು ತಾವು ಪಟ್ಟ ಪಾಡನ್ನು ಹಾಡಗಿಸಿದರು. ರಾಗ-ಅನುರಾಗ, ಬಿಕ್ಕಳಿಕೆಗಳಿಗೆ ಕಾವ್ಯದ ಸ್ಪರ್ಷ ಕೊಟ್ಟರು ಎಂದು ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಬಸು ಬೇವಿನಗಿಡದ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕ ಘಟಕ ರಬಕವಿ-ಬನಹಟ್ಟಿ, ವಲಯಗಳು ಮಹಾಲಿಂಗಪುರ ತೇರದಾಳ ಇವರ ಆಶ್ರಯದಲ್ಲಿ ರವಿವಾರ ಸಂಜೆ ಬ್ರಹ್ಮಾನಂದ ನಗರದ ಪರಪ್ಪ ಪೂಜೇರಿ ಅವರ ನಿವಾಸದಲ್ಲಿ ನಡೆದ ಪುಸ್ತಕಾವಲೋಕನ-18 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕನ್ನಡ ಕವಿತೆಗೆ ಉನ್ಮತ್ತತೆ, ಸದಾ ಉಕ್ಕುವ ಚೈತನ್ಯವನ್ನು ದೊರಕಿಸುವಲ್ಲಿ ಬೇಂದ್ರೆ ಅಗ್ರಗಣ್ಯರು. ಅವರೊಬ್ಬ ಮೇಧಾವಿ ಕವಿ. ನಾಡು ನುಡಿಯ ಜೀವ ತಂತುಗಳಿಂದಲೇ ಕಾವ್ಯ ಕಟ್ಟಿದರು. ಅವರ ಜೀವನದ ಕಥೆ ಸ್ಪೂರ್ತಿದಾಯಕ, ಪ್ರೇರಣಾದಾಯಕವಾಗಿದೆ ಎಂದರು.

ರಬಕವಿ-ಬನಹಟ್ಟಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಅವರು ಡಾ. ಬಸು ಬೇವಿನಗಿಡದ ಅವರ ಶತಮಾನದ ಕವಿ ಡಾ. ದ.ರಾ. ಬೇಂದ್ರೆ ಕೃತಿಯನ್ನು ಅವಲೋಕಿಸಿ ಮಾತನಾಡಿ ವರಕವಿ, ಸಾಧನಕೇರಿಯ ಸಾಧಕ, ಶಬ್ದ ಗಾರುಡಿಗ, ಶಬ್ದ ಮಾಂತ್ರಿಕ ಡಾ. ದ.ರಾ. ಬೇಂದ್ರೆಯವರು ಕನ್ನಡ ಕಾವ್ಯಕ್ಕೆ ಮಾಧುರ್ಯ ತಂದ ಕವಿ. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದವರು. ಪ್ರತಿಯೊಬ್ಬ ಕವಿಯು ಪರಂಪರೆಯ ಕೂಸು. ಕನ್ನಡವೆಂಬ ಗುಡಿಯನ್ನು ಕಟ್ಟಬೇಕಾದಾಗ ದುಡಿಯುವ ಶಿಲ್ಪಿಗಳು ದೀಪ ಉರಿಯಲು ಸದಾ ಎಣ್ಣೆಯನ್ನು ಸುಡುತ್ತಿರಬೇಕು ಎಂಬುದು ಬೇಂದ್ರೆಯವರ ಭಾವವಾಗಿತ್ತು. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ಬಸು ಬೇವಿನಗಿಡದ ಅವರ ಶತಮಾನದ ಕವಿ ಬೇಂದ್ರೆ ವರಕವಿಯ ಜೀವನ ಮತ್ತು ಸಾಹಿತ್ಯವನ್ನು ಸಮಗ್ರವಾಗಿ ಪರಿಚಯಿಸುವ ಸುಂದರ ಕೃತಿಯಾಗಿದೆ ಎಂದರು.

ಪ್ರಗತಿಪರ ರೈತರಾದ ಪರಪ್ಫಣ್ಣ ಪೂಜೇರಿ ಅಧ್ಯಕ್ಷತೆ ವಹಿಸಿ ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಒಳ್ಳೆಯ ಪುಸ್ತಕಗಳನ್ನು ಓದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಮಲ್ಲಪ್ಪ ಗಣಿ ಅವರು ಹಾಡಿದ ಬೇಂದ್ರೆಯವರ ಗೀತೆ ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದ ಹೋಗಾಂವಾ ಗೀತೆ ಗಮನ ಸೆಳೆಯಿತು.

ಹಿರಿಯ ಸಾಹಿತಿಗಳಾದ ಸಿದ್ಧರಾಜ ಪೂಜಾರಿ, ಮಲ್ಲಿಕಾರ್ಜುನ ಹುಲಗಬಾಳಿ, ಜಿ.ಎಸ್.ವಡಗಾವಿ, ಯಶವಂತ ವಾಜಂತ್ರಿ, ಕಸಾಪ ಕೋಶಾಧ್ಯಕ್ಷ ಡಿ.ಬಿ.ಜಾಯಗೊಂಡ, ಮಾಧ್ಯಮ ಕಾರ್ಯದರ್ಶಿ ಮಲ್ಲಿಕಾರ್ಜುನ ತುಂಗಳ, ಸಂಘಟನಾ ಕಾರ್ಯದರ್ಶಿ ಮಹಾಶಾಂತ ಶೆಟ್ಟಿ, ಹಿರಿಯ ಕಲಾವಿದ ಶ್ರೀಶೈಲ ಪಟ್ಟಣಶೆಟ್ಟಿ ಮೃತ್ಯುಂಜಯ ರಾಮದುರ್ಗ, ಮಲ್ಲಿಕಾರ್ಜುನ ಜವಳಗಿ, ಬಾಗಲಕೋಟೆಯ ಡಾ. ಪ್ರಕಾಶ ಖಾಡೆ, ಮುತ್ತು ಬಳ್ಳ, ಹುಲ್ಯಾಳದ ಗುರುನಾಥ ಸುತಾರ, ಹಿರಿಯ ಚಿತ್ರಕಲಾವಿದ ಮಹಾದೇವ ಕವಿಶೆಟ್ಟಿ, ತೇರದಾಳದ ಎಸ್.ಆರ್. ರಾವಳ, ಸದಾಶಿವ ದೊಡ್ಡಪ್ಪಗೋಳ, ಬಸವಪ್ರಭು ಹಟ್ಟಿ, ವಿಜಯಕುಮಾರ್ ಹಲಕುಕರ್ಿ, ಗೌರಿಮನಿ ಇನ್ನಿತರರು ಪಾಲ್ಗೊಂಡಿದ್ದರು.

ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಎಂ.ಎಸ್. ಬದಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತೇರದಾಳ ಕಸಾಪ ವಲಯಾಧ್ಯಕ್ಷ ಗಂಗಾಧರ ಮೋಪಗಾರ ನಿರೂಪಿಸಿದರು. ಹಿರಿಯ ಸಾಹಿತಿ ಶಿವಾನಂದ ದಾಶಾಳ ವಂದಿಸಿದರು.


ಸುದ್ದಿ ಓದಿ