ಮಹಲಿಂಗಪುರ

ಸಿಲಿಂಡರ್ ಸ್ಫೋಟ ; ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ

ಸಿಲಿಂಡರ್ ಸ್ಫೋಟ ; ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ

ಮುಗಿಲು ಮುಟ್ಟಿದ ಕೆನ್ನಾಲಿಗೆ:  ಬಡ ಕೂಲಿ ಕಾರ್ಮಿಕನ ಮನೆ ಸಂಪೂರ್ಣ ಬೆಂಕಿಗೆ ಆಹುತಿ   

ಮಹಾಲಿಂಗಪುರ 06: ಸ್ಥಳೀಯ ಸಾಧು ಗುಡಿ ಹತ್ತಿರ ಬಡ ಕೂಲಿ ಕಾರ್ಮಿಕ ಮಹಾಲಿಂಗಪ್ಪ ಬಂಡಿವಡ್ಡರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕಸ್ಮಿಕ ಬೆಂಕಿ ಹತ್ತಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ.ಹಾನಿಯಾಗಿದೆ. 

ಶುಕ್ರವಾರ ಸಂಜೆ ನಡೆದ ಈ ದುರ್ಘಟನೆಯಲ್ಲಿ ಜನನಿಬಿಡ ಪ್ರದೇಶವಾಗಿರುವುದರಿಂದ ಅಂದಾಜು ಇಪ್ಪತ್ತು ಮನೆಗಳಿಗೆ ಬೆಂಕಿ ತಗುಲುವ ಸಾಧ್ಯತೆ ಇತ್ತು. ಸ್ಥಳೀಯ ಯುವಕರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದಂತಾಗಿದೆ, ಮನಿಷ್ಯರೂ ಓಡಾಡಲು ಜಾಗವಿಲ್ಲದ ಇಕ್ಕಟ್ಟಾದ ಸಂದಿಗೊಂದಿಗಳಿಂದ ಕೂಡಿದ ಪ್ರದೇಶದಲ್ಲಿ  ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಿದವು. 

ಕೂಲಿನಾಲಿ ಮಾಡಿ ಬದುಕು ಸಾಗಿಸುವ ಈ ಕುಟುಂಬಕ್ಕೆ ಈ ಘಟನೆಯಿಂದ ಅಂದಾಜು ರೂ.5 ಲಕ್ಷದ ವರೆಗೆ ವೈಯಕ್ತಿಕ ಹಾನಿ ಸಂಭವಿಸಿದೆ.ಮನೆಯಲ್ಲಿ ದವಸ ಧಾನ್ಯಗಳು, ಬಟ್ಟೆ ಬರೆ, 75 ಸಾವಿರ ರೂ.ನಗದು,ಎರಡು ತೊಲೆ ಬಂಗಾರದ ಆಭರಣಗಳು, ಇನ್ನಿತರ ಸರ್ಕಾರಿ ಕಾಗದ ಪತ್ರಗಳು ಅಲ್ಲದೆ ರೂ.2 ಲಕ್ಷಗಳ ವೆಚ್ಚದ ಕುಟುಂಬ ವಾಸಿಸುವ ತಗಡಿನ ಮನೆ ಸಂಪೂರ್ಣ ನಾಶವಾಗಿದೆ. 

ಇನ್ನು ಹತ್ತಿರದ ಎರಡು ಮನೆಗಳಿಗೂ ಬೆಂಕಿ ಕೆನ್ನಾಲಿಗೆ ಹಬ್ಬಿ  ಅಂದಾಜು 1.5 ಲಕ್ಷ ರೂ.ಬೆಲೆ ಬಾಳುವ ಪಾತ್ರೆ ಪಗಡೆಗಳು, ಇನ್ನೊಂದು ಮನೆಯಲ್ಲಿಯ ಗೃಹ ಕೈಗಾರಿಕೆ ರೆಡಿಮೇಡ್ ಉಡುಪು ತಯಾರಿಕೆಯ  ಅರಿವೆಗಳು ಬೆಂಕಿಗೆ ಆಹುತಿಯಾಗಿವೆ.ಇಲ್ಲಿಯೂ ಕೂಡ ರೂ.3.5ಲಕ್ಷದ ವರೆಗೆ ಹಾನಿಯಾಗಿದೆಯೆಂದು ಅಂದಾಜಿಸಲಾಗಿದೆ.ಈ ಘಟನೆಯಲ್ಲಿ ಒಟ್ಟಾರೆ ನಷ್ಠ ಅಂದಾಜು ರೂ.8 ರಿಂದ 9 ಲಕ್ಷಗಳು. 

ಶನಿವಾರ ಘಟನಾ ಸ್ಥಳಕ್ಕೆ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಗಿರಿಶ ಸ್ವಾದಿ, ಮಹಾಲಿಂಗಪುರದ ಗಣ್ಯರು, ಪುರಸಭೆ ಅಧಿಕಾರಿಗಳು, ಯೋಧ ಇಂಡಿಯನ್ ಗ್ಯಾಸ್ ಸಿಬ್ಬಂದಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದರು. 


ಸುದ್ದಿ ಓದಿ