ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ

ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ

ಬೆಳಗಾವಿ : ಮಹಾರಾಷ್ಟçದ ಅಂಬೋಲಿ ಬಳಿಯ ಮಹಾದೇವಗಡ್ ವೀಕ್ಷಣಾ ಸ್ಥಳದಲ್ಲಿ ಫೋಟೋ ತೆಗೆಯುವ ವೇಳೆ ಕಣಿವೆಗೆ ಬಿದ್ದಿದ್ದ ಬೆಳಗಾವಿ ಜಿಲ್ಲೆಯ ಯುವಕನ ಮೃತದೇಹವನ್ನು ಬುಧವಾರ ಬೆಳಿಗ್ಗೆ ಐದು ಗಂಟೆಗಳ ಶೋಧ ಕಾರ್ಯಾಚರಣೆಯ ಬಳಿಕ ರಕ್ಷಣಾ ತಂಡ ಹೊರತೆಗೆದಿದೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಜತ್ರಾಟ್ ಗ್ರಾಮದ ನಿವಾಸಿ ಡಾ. ಅಯೂಬ್ ಅಬ್ಬಾಸ್ ಸಯ್ಯದ್(45) ಮೃತ ಯುವಕ ಎಂದು ಗುರುತಿಸಲಾಗಿದೆ. ಈ ಕುರಿತು ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿಯ ಪ್ರಕಾರ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಅಯೂಬ್ ಸಯ್ಯದ್ ಅವರು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಮಂಗಳವಾರ ಅಂಬೋಲಿಗೆ ಪ್ರವಾಸಕ್ಕೆ ತೆರಳಿದ್ದರು. ಸಂಜೆ ಮಹಾದೇವಗಡ್ ವೀಕ್ಷಣಾ ಸ್ಥಳದಲ್ಲಿ ಎಲ್ಲರೂ ಫೋಟೋ ತೆಗೆಯುತ್ತಿದ್ದ ವೇಳೆ ಅವರು ಸಮತೋಲನ ಕಳೆದುಕೊಂಡು ಆಳವಾದ ಕಣಿವೆಗೆ ಬಿದ್ದಿದ್ದಾರೆ.

    ಘಟನೆಯ ನಂತರ ಸ್ಥಳೀಯರು, ಸ್ನೇಹಿತರು, ಪೊಲೀಸರು ಹಾಗೂ ಸಾಹಸ ಮತ್ತು ರಕ್ಷಣಾ ತಂಡದ ಸದಸ್ಯರು ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದರು. ಆದರೆ ಭಾರಿ ಮಳೆ, ದಟ್ಟ ಮಂಜು ಮತ್ತು ಕತ್ತಲಿನ ಕಾರಣದಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಿಗ್ಗೆ 7 ಗಂಟೆಗೆ ಸಾಹಸ ಮತ್ತು ರಕ್ಷಣಾ ತಂಡ ಮತ್ತೆ ಶೋಧ ಕಾರ್ಯಾಚರಣೆ ಆರಂಭಿಸಿತು. ದುರ್ಗಮ ಪ್ರದೇಶ ಹಾಗೂ ಪ್ರತಿಕೂಲ ಹವಾಮಾನದ ನಡುವೆಯೂ ನಿರಂತರ ಶೋಧ ನಡೆಸಿದ ತಂಡ ಬೆಳಿಗ್ಗೆ ಸುಮಾರು 10.15ರ ವೇಳೆಗೆ ಮೃತದೇಹವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮೇಲಕ್ಕೆ ತಂದಿತು.

     ಶೋಧ ಕಾರ್ಯಕ್ಕೆ ಅಡ್ಡಿಯಾಗದಂತೆ ಬುಧವಾರ ಮಹಾದೇವಗಡ್ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶವನ್ನು ಪೊಲೀಸರು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದರು. ಪೊಲೀಸರು ಸ್ಥಳದಲ್ಲಿ ಪಂಚನಾಮೆ ನಡೆಸಿ, ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತ ಡಾ. ಅಯೂಬ್ ಸಯ್ಯದ್ ಅವರ ಅಗಲಿಕೆಯಿಂದ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ದುಃಖದಲ್ಲಿದ್ದಾರೆ.

ಸುದ್ದಿ ಓದಿ