ಬೆಳಗಾವಿ

ನವರಾತ್ರಿ ಸಂಭ್ರಮಕ್ಕೆ ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡ ಸಜ್ಜು

ನವರಾತ್ರಿ ಸಂಭ್ರಮಕ್ಕೆ ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡ ಸಜ್ಜು

ಲೋಕದರ್ಶನ ವರದಿ 


ಉಗರಗೋಳ 09 :  ‘ಬರ’ದ ಕಾರ್ಮೋಡದ ಮಧ್ಯೆಯೂ, ಸಡಗರದ ನವರಾತ್ರಿ ಉತ್ಸವಕ್ಕೆ ‘ಏಳುಕೊಳ್ಳದ ನಾಡು’ ಯಲ್ಲಮ್ಮನಗುಡ್ಡ ಸಜ್ಜಾಗಿದೆ. 


ಹನ್ನೂಂದು ದಿನ ಜರುಗಲಿರುವ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಯಲ್ಲಮ್ಮ ದೇವಸ್ಥಾನದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರಿಗೆ ಸಂಸ್ಥೆಯು ಬೆಳಗಾವಿ ಮತ್ತು ಸವದತ್ತಿ ಬಸ್ ನಿಲ್ದಾಣಗಳಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. 


ಅಕ್ಟೋಬರ್ 11ರಂದು ಸಂಜೆ 6 ಗಂಟೆಗೆ ಯಲ್ಲಮ್ಮ ದೇವಿ ಗರ್ಭಗುಡಿಯಲ್ಲಿ ಘಟ್ಟಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಧಿಕಾರಿಗಳು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 


ನವರಾತ್ರಿ ಅಂಗವಾಗಿ ಯಲ್ಲಮ್ಮನಗುಡ್ಡಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಲಕ್ಷಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಧಾರ್ಮಿಕ ಆಚರಣೆ ಕೈಗೊಳ್ಳುತ್ತಾರೆ. 5, 7 ಮತ್ತು 9ನೇ ಘಟ್ಟಗಳಂದು ಯಲ್ಲಮ್ಮನಗುಡ್ಡ ಭಕ್ತರಿಂದ ಕಿಕ್ಕಿರಿದು ತುಂಬಿರುತ್ತದೆ. 


ನವರಾತ್ರಿಯಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ ಮತ್ತು ನೈವೇದ್ಯ ನೆರವೇರಲಿದೆ. ಅ.20ರಂದು ಆಯುಧಪೂಜೆ(ಖಂಡೆ) ಮತ್ತು 21ರಂದು ಯಲ್ಲಮ್ಮನಗುಡ್ಡಹಿಉಗರಗೋಳ ಮಾರ್ಗದಲ್ಲಿರುವ ಬಣ್ಣೆಮ್ಮ ದೇವಸ್ಥಾನ ಬಳಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. 


ನಿಗದಿತ ಸ್ಥಳದಲ್ಲೇ ಎಣ್ಣೆ ಹಾಕಿ: ‘ನವರಾತ್ರಿ ವೇಳೆ ಯಲ್ಲಮ್ಮನಗುಡ್ಡಕ್ಕೆ ಬರುವ ಪ್ರತಿ ಭಕ್ತರೂ ದೀಪಕ್ಕೆ ಎಣ್ಣೆ ಹಾಕುವ ಸಂಪ್ರದಾಯವಿದೆ. ಹಾಗಾಗಿ ಯಲ್ಲಮ್ಮ ದೇವಿ ಗರ್ಭಗುಡಿ ಎದುರು ಹಾಗೂ ದೇವಸ್ಥಾನ ಪ್ರಾಂಗಣದಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ನಿಗದಿತ ಸ್ಥಳದಲ್ಲೇ ಭಕ್ತರು ಎಣ್ಣೆ ಹಾಕಬೇಕು’ ಎಂದು ಯಲ್ಲಮ್ಮ ದೇವಸ್ಥಾನದ ಅಧಿಕಾರಿಗಳು ಕೋರಿದ್ದಾರೆ 


ಸುದ್ದಿ ಓದಿ