ಎಸ್ ಎಸ್ ಎಲ್ ಸಿ ಮಕ್ಕಳಿಂದ ವಿಶ್ವರಂಗಭೂಮಿ ದಿನಾಚರಣೆ
ಲೋಕದರ್ಶನ ವರದಿ
ಕುಷ್ಟಗಿ 28: ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಜಹಗೀರ ಗುಡದೂರಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಎಸ್ ಎಸ್ ಎಲ್ ಸಿ ಮಕ್ಕಳಿಂದ ಪದ್ಯ ರಂಗ ಪ್ರಸ್ತುತಿ ಕಾರ್ಯಕ್ರಮವನ್ನು ಮಾ.28 ರಂದು ಜರುಗಿತು. ಮಕ್ಕಳಿಂದ ಪದ್ಯಗಳನ್ನು ವಾಚನ, ಗಾಯನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಈಜಿಪ್ಟ್ ರಂಗಕರ್ಮಿ ಸಮಿಹಾ ಆಯೌಬ್ ನೀಡಿದ ರಂಗ ಸಂದೇಶವನ್ನು ಕನ್ನಡದಲ್ಲಿ ಶಿಕ್ಷಕಿ ತನುಜಾ ಪೊಲೀಸ್ ವಾಚನ ಮಾಡಿದರು.
ರಂಗ ಶಿಕ್ಷಕ ಗುರುರಾಜ್ ಪ್ರಾಸ್ತಾವಿಕ ನುಡಿಗಳಲ್ಲಿ ರಂಗಭೂಮಿಯ ಸಾಧ್ಯತೆಗಳ ಬಗ್ಗೆ ತಿಳಿಸುತ್ತಾ ರಂಗಭೂಮಿಯ ಪ್ರವೇಶಿಕೆಯಿಂದ ಸಮೃದ್ಧ ಸಮಾಜವನ್ನು ಕಟ್ಟುವ ಯುವ ಪ್ರತಿಭೆಗಳು ನೀವಾಗಬೇಕು. ಯುವ ಸಮುದಾಯದ ಮುಂದಾಳತ್ವದಲ್ಲಿ ಈ ನಾಡನ್ನ ಕಟ್ಟಬೇಕಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ರಂಗಭೂಮಿಯ ಒಡನಾಟದಿಂದ ಜಗತ್ತಿಗೆ ಹೊಸ ಅರ್ಥವನ್ನು ನೀಡಬೇಕಾಗಿದೆ. ರಂಗ ಪ್ರವೇಶಿಕೆಯಿಂದ ಕಲಿಕೆಯಲ್ಲಿ ಸಾಕಷ್ಟು ಹಿಂದುಳಿದ ಮಕ್ಕಳು ಶೈಕ್ಷಣಿಕವಾಗಿ ತಮ್ಮನ್ನು ತಾವು ಕಟ್ಟಿಕೊಳ್ಳುವ ಹೊಸ ಭರವಸೆಯಲ್ಲಿ ಸಿದ್ದರಾಗುತ್ತಿರುವುದು ಸಂತೋಷದ ವಿಷಯ ಎಂದರು. 10ನೇ ತರಗತಿ ವಿದ್ಯಾರ್ಥಿಗಳಿಂದ ಪದ್ಯ ರಂಗ ಪ್ರಸ್ತುತಿ ಕಾರ್ಯಕ್ರಮ ವನ್ನು ನಡೆಸಲಾಯಿತು. ಕೌರವೇಂದ್ರನ ಕೊಂದೆ ನೀನು, ಹಲಗಲಿ ಬೇಡರು, ಹಸುರು, ಹಕ್ಕಿಹಾರುತಿದೆ ನೋಡಿದಿರಾ, ಸಂಕಲ್ಪ ಗೀತೆ, ವೀರಲವ ಪದ್ಯಗಳನ್ನು ಪ್ರಸ್ತುತಿ ಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸತ್ಯಪ್ಪ ಯಲಬುರ್ಗಿ ಮುಖ್ಯೋಪಾಧ್ಯಾಯ ಮಾತನಾಡಿ ನಮ್ಮ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಆಚರಣೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬರುತ್ತಿದ್ದಾರೆ. ರಂಗ ಶಿಕ್ಷಕರ ಇರುವಿಕೆಯಿಂದ ಮಕ್ಕಳಲ್ಲಿ ರಂಗ ಭಯ ದೂರಾಗಿ ಆಸಕ್ತಿ, ಕೌಶಲ್ಯದಿಂದ ಪಾಲ್ಗೊಂಡಂತಹ ಪ್ರಯೋಗಗಳನ್ನು ನಾವು ಕಾಣಬಹುದು. ರಂಗಭೂಮಿಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸುತ್ತಾ ಭಾಗವಹಿಸಿದ ಮಕ್ಕಳೆಲ್ಲರಿಗೂ ಬಹುಮಾನವನ್ನು ವಿತರಿಸಿದರು.
ಅತಿಥಿ ಶಿಕ್ಷಕರಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಎಸ್ ಡಿ ಎಂಸಿ ಅಧ್ಯಕ್ಷ ಭೀಮರಾವ್ ಸಾಳಂಕಿ, ಶಿವಪ್ಪ ಇಲಾಳ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪುರ್, ತನುಜಾ ಪೊಲೀಸ್, ಸುಮಿತ್ರ ಭಂಡಾರಿ, ರಮೇಶ್ ಚವಾನ್, ಜಗದೀಶ್ ಬಾಸಿಂಗದ, ಅತಿಥಿ ಶಿಕ್ಷಕರಾದ ಶರಣಪ್ಪ ಗೋಡೆಕರ್, ಮಹಬೂಬ್ ಸಾಬ್ ಘೋರಿ, ರವಿಕುಮಾರ ರಾಜೂರ ಉಪಸ್ಥಿತರಿದ್ದರು