ಕೊರೊನಾ ಮೂಲ ಶೋಧಿಸುವಲ್ಲಿ ರಾಜಕೀಯ ಬೇಡ: ವಿಶ್ವ ಆರೋಗ್ಯ ಸಂಸ್ಥೆ
ಜಿನಿವಾ
, ಡಿಸೆಂಬರ್ 1: ಪ್ರಪಂಚವನ್ನು ಅಲ್ಲೊಲ ಕಲ್ಲೋಲ ಮಾಡುತ್ತಿರುವ ಕೊರೊನಾ ವೈರಸ್
ಮೂಲ ಯಾವುದು ಎಂಬುದನ್ನು ಕಂಡುಹಿಡಿಯಲು ಎಲ್ಲ
ಪ್ರಯತ್ನಗಳನ್ನು ಮಾಡುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಭವಿಷ್ಯದಲ್ಲಿ ಇಂತಹ ಸೋಂಕು
ಹರಡದಂತೆ ನೋಡಿಕೊಳ್ಳಲು ಈ ಮಾಹಿತಿ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದೆ.
ಕೋವಿಡ್ -19 ಸೋಂಕಿನ ಮೂಲ ಹುಡುಕಲು ನಡೆಯುತ್ತಿರುವ ಸಂಶೋಧನೆಗಳನ್ನು ರಾಜಕೀಯಗೊಳಿಸಬಾರದು ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಮನವಿ ಮಾಡಿದ್ದಾರೆ. ಇಂತಹ ಕ್ರಮಗಳು ಸತ್ಯಾಂಶ ಹೊರತೆಗೆಯಲು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಮೋಲ ಹುಡುಕುವ ಅಧ್ಯಯನವನ್ನು ಡಬ್ಲ್ಯುಎಚ್‌ಒ ವುಹಾನ್ ನಿಂದ ಪ್ರಾರಂಭಿಸಲಿದೆ.. ಲಭ್ಯವಾಗಲಿರುವ ಆಧಾರಗಳು ಹಾಗೂ ಇತರ ಮಾರ್ಗಗಳಲ್ಲೂ ಮೂಲವನ್ನು ಪತ್ತೆಹಚ್ಚಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊರೊನಾ ಮೂಲಗಳ ಕುರಿತು ಡಬ್ಲ್ಯುಎಚ್ ಒ ನಿಲುವಿನ ಬಗ್ಗೆ ಮಾತನಾಡಿದ ಅವರು, "ಡಬ್ಲ್ಯುಎಚ್‌ಒ ನಿಲುವು ತುಂಬಾ ಸ್ಪಷ್ಟವಾಗಿದೆ. ಈ ವೈರಸ್‌ನ ಮೂಲವನ್ನು ನಾವು ತಿಳಿದುಕೊಳ್ಳಬೇಕು. ಏಕೆಂದರೆ ಇದು ಭವಿಷ್ಯದಲ್ಲಿ ಹರಡದಂತೆ ತಡೆಯಲು ಸಹಾಯ ಮಾಡುತ್ತದೆ ”ಎಂದು ಅಧಾನಮ್ ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಿಂದ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವಾರ ಮೊದಲ ಬಾರಿ ಕುಸಿತ ಕಂಡು ಬಂದಿದ್ದು, ಯುರೋಪಿನಲ್ಲಿ ವೈರಸ್ ಪೀಡಿತರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು. ಮತ್ತೊಂದೆಡೆ, ವಿಶ್ವಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 6.3 ಕೋಟಿ ದಾಟಿದೆ. ಸಾವಿನ ಸಂಖ್ಯೆ 14.73 ಲಕ್ಷವನ್ನು ತಲುಪಿದೆ.