ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ: ತಾಯಿಯ ಹಾಲೇ ಮಗುವಿನ ಮೊದಲ ರಕ್ಷಣೆ
ಲೋಕದರ್ಶನ ವರದಿ
ಧಾರವಾಡ 01 : ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ಆಚರಿಸಲಾಗುವ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಲೇಡಿ ಲೂರ್ಡ್ಸ ನರ್ಸಿಂಗ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎಫ್.ಕೆ. ಮಾತನಾಡಿ, ತಾಯಿಯ ಹಾಲು ಮಗುವಿನ ಮೊದಲ ಆಹಾರ, ಮೊದಲ ಲಸಿಕೆ ಹಾಗೂ ಮೊದಲ ರಕ್ಷಣೆ ಎಂದು ತಿಳಿಸಿದರು. ಜನನದ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಬೇಕು.
ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡಬೇಕು ಹಾಗೂ ನಂತರ ಪೂರಕ ಆಹಾರದೊಂದಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ತನ್ಯಪಾನ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಮೊದಲ ಹಾಲಾದ ಕೊಲೊಸ್ಟ್ರಮ್ ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅತಿಸಾರ, ನ್ಯುಮೋನಿಯಾ ಸೇರಿದಂತೆ ಹಲವು ಸೋಂಕುಗಳಿಂದ ರಕ್ಷಿಸುತ್ತದೆ. ಸ್ತನ್ಯಪಾನದಿಂದ ಮಗುವಿನ ದೈಹಿಕ, ಮಾನಸಿಕ ಹಾಗೂ ಮೆದುಳಿನ ಬೆಳವಣಿಗೆಗೆ ನೆರವಾಗುವುದರ ಜೊತೆಗೆ ತಾಯಿಯ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ ಎಂದು ತಿಳಿಸಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಸಂಜಯ ದುಮ್ಮಗೋಳ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ತನ್ಯಪಾನ ಅತ್ಯಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.