ವಿಶ್ವ ಸ್ತನ್ಯಪಾನ ಸಪ್ತಾಹ: ಗರ್ಭಿಣಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ
ಲೋಕದರ್ಶನ ವರದಿ
ಧಾರವಾಡ, ಆ. 6: ಧಾರವಾಡ ತಾಲೂಕಿನ ಲೋಕೂರ ಗ್ರಾಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಪಿಎಐ) ಧಾರವಾಡ ಶಾಖೆ, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಹಾಗೂ ಅವಸರ ಫೌಂಡೇಶನ್ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿಯರಿಗೆ ಎದೆ ಹಾಲಿನ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ, ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಫ್ಪಿಎಐನ ವೈದ್ಯಾಧಿಕಾರಿ ಡಾ. ಅಕ್ಕಮಹಾದೇವಿ ಹಿರೇಮಠ, "ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದು ಅಮೃತಕ್ಕೆ ಸಮಾನ. ಇದರಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಜ್ಞರ ಪ್ರಕಾರ ತಾಯಿಯ ಎದೆಹಾಲು ನೀಡುವುದರಿಂದ ಭಾರತದಲ್ಲಿ ಲಕ್ಷಾಂತರ ಮಕ್ಕಳ ಜೀವ ರಕ್ಷಣೆ ಸಾಧ್ಯವಾಗಿದೆ" ಎಂದು ಹೇಳಿದರು.
"ಮಕ್ಕಳಿಗೆ ಬಾಟಲಿ ಹಾಲು ನೀಡುವುದಕ್ಕಿಂತ ತಾಯಿಯ ಎದೆಹಾಲು ಅತ್ಯಂತ ಶ್ರೇಷ್ಠ. ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಅರಿವು ಹೆಚ್ಚುತ್ತಿರುವುದು ಸಂತಸದ ಸಂಗತಿ. ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಿ ಈ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕು" ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ. ಸ್ವರೂಪಾ ಬಿರಾದಾರ, "ಹಾಲು, ಹಾಲಿಗಿಂತ ಬೆಣ್ಣೆ-ತುಪ್ಪಕ್ಕಿಂತಲೂ ಎದೆಹಾಲು ಶ್ರೇಷ್ಠ. ನಮ್ಮ ಹಿರಿಯರು ಇದನ್ನು ಅಮೃತಕ್ಕೆ ಸಮಾನವೆಂದು ಹೇಳಿದ್ದಾರೆ. ತಾಯಿ-ಮಗುವಿನ ಬಾಂಧವ್ಯ ವೃದ್ಧಿಯಾಗಲು ಹಾಗೂ ಮಗುವಿನ ಉತ್ತಮ ಬೆಳವಣಿಗೆಗೆ ಎದೆಹಾಲು ಪ್ರಮುಖ ಪಾತ್ರ ವಹಿಸುತ್ತದೆ" ಎಂದು ತಿಳಿಸಿದರು.
"ತಾಯಿಯು ಕನಿಷ್ಠ ಎರಡು ವರ್ಷಗಳವರೆಗೆ ಮಗುವಿಗೆ ಎದೆಹಾಲು ನೀಡಬೇಕು. ಯಾವುದೇ ತಾರತಮ್ಯವಿಲ್ಲದೆ ಪ್ರೀತಿಯಿಂದ ಮಗುವಿಗೆ ಹಾಲುಣಿಸುವುದರಿಂದ ಮಗುವಿನ ಆರೋಗ್ಯ ಉತ್ತಮವಾಗುತ್ತದೆ. ಎದೆಹಾಲು ನೀಡುವುದರಿಂದ ತಾಯಿಯ ಆರೋಗ್ಯಕ್ಕೂ ಪ್ರಯೋಜನವಾಗುತ್ತದೆ" ಎಂದು ಅವರು ಹೇಳಿದರು.