ಮಹಿಳಾ ಹಾಕಿ: ಐರ್ಲೆಂಡ್ ಮಣಿಸಿದ ಭಾರತ
ಟೋಕಿಯೊ, ಜು.30 - ಸತತ ಮೂರು ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದ್ದ ರಾಣಿ ರಾಮ್‌ಪಾಲ್ ನಾಯಕತ್ವದ ಭಾರತ ಮಹಿಳಾ ಹಾಕಿ ತಂಡ, ಕೊನೆಗೂ ಟೋಕಿಯೋ ಒಲಂಪಿಕ್ಸ್‌ನಲ್ಲಿ ಜಯದ ನಗೆ ಬೀರಿದೆ.
ಶುಕ್ರವಾರ ಆಡಿದ `ಎ' ಗುಂಪಿನ ತನ್ನ ನಾಲ್ಕನೇ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ 1-0 ಗೋಲುಗಳ ರೋಚಕ ಜಯ ದಾಖಲಿಸಿತು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ಆಟಗಾರ್ತಿಯರು ಸಮಬಲ ಪೈಪೋಟಿ ನೀಡಿದ್ದರಿಂದ ಪಂದ್ಯ ಆರಂಭದಲ್ಲಿಯೇ ರೋಚಕ ಹಂತ ಕಂಡಿತು. ಹೀಗಾಗಿ ಪಂದ್ಯದ ಮೊದಲ ಮೂರು ಅವಧಿಯಲ್ಲಿ ಎರಡೂ ತಂಡಗಳ ಆಟಗಾರ್ತಿಯರು ಗೋಲು ಗಳಿಕೆಗಾಗಿ ನಡೆಸಿದ ಯತ್ನ ಫಲಕಾರಿಯಾಗಲಿಲ್ಲ.
ಆದರೆ ನಾಲ್ಕನೇ ಹಾಗೂ ಕೊನೆಯ ಅವಧಿಯಲ್ಲಿ ಮೂರು ನಿಮಿಷದ ಆಟ ಬಾಕಿ ಇದ್ದಾಗ (57 ನೇ ನಿಮಿಷ) ನವನೀತ್ ಕೌರ್ ಗೋಲು ಗಳಿಸಿ ತಂಡಕ್ಕೆ ರೋಚಕ ಜಯ ತಂದಿತ್ತರು. ಈ ಗೆಲುವಿನೊಂದಿಗೆ ಭಾರತದ ಕ್ವಾರ್ಟರ್ ಫೈನಲ್ ಹಂತ ಕಾಣುವ ಅವಕಾಶವನ್ನು ರಾಣೆ ಪಡೆ ಜೀವಂತವಾಗಿಸಿಕೊಂಡಿತು.
ಭಾರತ, ತನ್ನ ಕೊನೆಯ ಲೀಗ್ ಪಂದ್ಯವನ್ನು ಶನಿವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಕ್ವಾರ್ಟರ್ ಫೈನಲ್ ಹಂತ ಕಾಣಲು ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಬೇಕು.