ಮಹಲಿಂಗಪುರ

ನೇಕಾರಿಕೆ ದೇಶದ ಪುರಾತನ ಕಲೆ ; ಮೌರ್ಯ

ನೇಕಾರಿಕೆ ದೇಶದ ಪುರಾತನ ಕಲೆ ; ಮೌರ್ಯ

ಮಹಾಲಿಂಗಪುರ: ನೇಕಾರಿಕೆ ದೇಶದ ಪುರಾತನ ಕಲೆ ಇತ್ತೀಚಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕೈಮಗ್ಗ ದಿನ ಘೋಷಣೆ ಮಾಡಿ ನೇಕಾರ ಸಮುದಾಯಕ್ಕೆ ಗೌರವ ಸೂಚಿಸಿದ್ದಾರೆ ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ ಹೇಳಿದರು. 

ನೇಕಾರರ ಕರಕುಶಲತೆ ಮತ್ತು ಕೈಮಗ್ಗ ಬಟ್ಟೆಗಳಿಗೆ ಮಾರು ಹೋಗಿ ಶನಿವಾರ ನಗರದ ಹಿರಿಯ ಕೈಮಗ್ಗ ನೇಕಾರರ ಮನೆಗೆ ಭೇಟಿ ನೀಡಿ ಅವರ ಕುಶಲೋಪರಿ ವಿಚಾರಿಸಿ ಮಾತನಾಡಿದ ಅವರು ನೇಕಾರಿಕೆ ಒಂದು ಅದ್ಭುತ ಕಲೆಯಾಗಿದ್ದು ನೂಲಿನ ಎಳೆ-ಎಳೆಗಳನ್ನು ಜೋಡಿಸಿ ಬಟ್ಟೆ ತಯಾರಿಸುವ ಕಾಯಕ ನಿಷ್ಠೆಯನ್ನು ಪ್ರಸಂಶಿದರು. 

ಸ್ಥಳೀಯ ಹಿರಿಯ ನೇಕಾರರಾದ ಶಿವಶಂಕರ​‍್ಪ ಮೂಡಲಗಿ, ಮಲ್ಲಪ್ಪ ನಡಕಟ್ನಿ ಅವರ ಮನೆಗಳಿಗೆ ಭೇಟಿ ನೀಡಿ ಕೈ ಮಗ್ಗಗಳನ್ನು, ನೂಲು ಸುತ್ತುವುದು, ಸಂದರಕಿ ಹಾಕುವುದು, ಹಾಸು ಹೊಯ್ಯುವುದು, ವಾಂಡರ ಹಾಕುವುದು, ಟವೆಲ್ ನೇಯ್ಗೆ ಮಾಡುವುದನ್ನು ವೀಕ್ಷಿಸಿ ಮಾಹಿತಿ ಪಡೆದರು.  

ಸ್ವತಃ ತಾವೂ ಸಹ ಖಂಡಕಿ ಸುತ್ತಿ ಖುಷಿಪಟ್ಟರು. ನಂತರ ಮಹಾಲಿಂಗಪ್ಪ ಸೋರಗಾಂವಿ ಅವರ ಮನೆಗೆ ಭೇಟಿ ನೀಡಿ ಶತಮಾನದ ಇತಿಹಾಸವಿರುವ ಕುಣಿ ಕೈಮಗ್ಗ ವೀಕ್ಷಣೆ ಮಾಡಿ ಪ್ರಾಚೀನರ ಉದ್ಯೋಗದ ಕೌಶಲ್ಯತೆಯನ್ನು ಹಾಡಿ ಹೊಗಳಿದರು. 

ದಾನೇಶ್ವರಿ ಕೈಮಗ್ಗ ಬಟ್ಟೆ ಉತ್ಪಾದನಾ ಘಟಕದ ಮಾಲೀಕ ಶಿವಶಂಕರ​‍್ಪ ಮೂಡಲಗಿ ಕೈಮಗ್ಗ ನೇಕಾರಿಕೆ ಬಗ್ಗೆ ಸರ್ಕಾರ ಕಲೆ ಹಾಗೂ ಉದ್ಯೋಗ ಉಳಿವಿಕೆಗೆ ಸಹಕಾರ ನೀಡಬೇಕೆಂದು ಹೇಳಿದರು.  

ನಶಿಸಿ ಹೋಗುತ್ತಿರುವ ಕೈಮಗ್ಗ ಉಳಿವಿಗಾಗಿ ಸುಮಾರು 40 ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುತ್ತಿರುವ ಶಿವಶಂಕರ​‍್ಪ ಮೂಡಲಗಿ ಹಾಗೂ ತಮ್ಮ 75 ನೇ ವಯಸ್ಸಿನಲ್ಲಿಯೂ ನೇಕಾರಿಕೆ ಮಾಡುತ್ತಿರುವ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿದರು.  

ಮಹಾಲಿಂಗೇಶ್ವರ ಮಠಕ್ಕೆ ಭೇಟಿ : ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಹಿರಿಯ ಕೈಮಗ್ಗ ನೇಕಾರ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿದರು. ಸಂಜು ಹಳ್ಳಿ ಸೋಮಶೇಖರ್ ಮೂಡಲಗಿ, ಮಾಹಾಂತೇಶ ಮೂಡಲಗಿ, ಈಶ್ವರ ಮಠದ, ಗೋವಿಂದ ಕೇಳಕರ ಸೇರಿದಂತೆ ಹಲವರು ಇದ್ದರು. 

ರಾಜೇಶಕುಮಾರ ಮೌರ್ಯ ಅವರು ನೇಕಾರ ಕಲೆಯ ಮೇಲೆ ಅಪಾರ ಪ್ರೀತಿ ಹೊಂದಿರುವ ಕಾರಣ ನಮ್ಮನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೇ ಕರೆಯಿಸಿಕೊಂಡು ನಮ್ಮನ್ನು ಸನ್ಮಾನಿಸಿದರು ಮತ್ತು ಅಲ್ಲಿಯೇ ಒಂದು ವಾರದವರೆಗೆ ಕೈಮಗ್ಗ ಹಾಕಿಸಿ, ನೇಕಾರಿಕೆ ಮಾಡಿಸಿ ನಾವು ತಯಾರಿಸಿದ ಕೈಮಗ್ಗ ಬಟ್ಟೆಗಳನ್ನು ದೇಶದ ನಾನಾ ರಾಜ್ಯ, ವಿದೇಶಗಳ ಜನರಿಗೆ ಪರಿಚಯಿಸಿ ಕೈಮಗ್ಗದ ಬಟ್ಟೆಗಳಿಗೆ ವಿಶಾಲ ಮಾರುಕಟ್ಟೆಯ ಪರಿಚಯ ಮಾಡಿಸಿದರು. ಮೌರ್ಯಸಾಹೇಬರು ನಮಗೆ ನೀಡಿರುವ ಆದರವನ್ನು ಎಂದೂ ಮರೆಯಲು ಸಾಧ್ಯವಿಲ್ಲ. 

ಮಲ್ಲಪ್ಪ ನಡಕಟ್ನಿ. ಹಿರಿಯ ನೇಕಾರ 


ಸುದ್ದಿ ಓದಿ