ಮಹಲಿಂಗಪುರ

ಬಿಜೆಪಿ ಕಾರ್ಯ,ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದೇವೆ : ಜಮಾದಾರ

ಬಿಜೆಪಿ ಕಾರ್ಯ,ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದೇವೆ : ಜಮಾದಾರ


ಮಹಾಲಿಂಗಪುರ: ಪ್ರಧಾನಿ ಮೋದಿ ಮತ್ತು ಬಿಜೆಪಿ ಕಾರ್ಯ ಹಾಗೂ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನಾವೆಲ್ಲ ಬಿಜೆಪಿ ಸೇರಿದ್ದೇವೆ ಆದರೆ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ವಿಕೃತ ಮನಸ್ಸನ್ನು ಎತ್ತಿತೋರಿಸುತ್ತದೆ ಹಾಗೂ ಇದು ಖಂಡನೀಯ ವಿಷಯವಾಗಿದೆ ಎಂದು ರಾಜ್ಯ ಎಸ್ ಸಿ ಮೋರ್ಚಾ ಮಾಜಿ ಸದಸ್ಯ ಹನುಮಂತ ಜಮಾದಾರ ಹೇಳಿದರು.  

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಭಾನುವಾರ ಬೆಳಿಗ್ಗೆ ಸ್ಥಳೀಯ ಜಿಎಲ್ ಬಿಸಿಯಲ್ಲಿ ಬಿಜೆಪಿ ನಗರ ಘಟಕ ಹಾಗೂ ಬಿಜೆಪಿ ದಲಿತ ಮೋರ್ಚಾವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಷ್ಟು ದಿನ ಹಿಂದೂಗಳಿಗೆ ಹಾಗೂ ಆರ್ ಎಸ್ ಎಸ್ ನವರಿಗೆ ಬೈಯುತ್ತಿದ್ದರು ಈಗ ದಲಿತರಿಗೆ ಬೈಯುತ್ತಿದ್ದಾರೆ, ಅವರಿಗೆ ತಲೆ ಸರಿ ಇಲ್ಲ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಹಾಗೂ ತಕ್ಷಣವೇ ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು ತಪ್ಪಿದಲ್ಲಿ ಮಹಾಲಿಂಗಪುರದಲ್ಲಿ ಎಸ್ಸಿ ಮೋರ್ಚಾ ವತಿಯಿಂದ ಜಾತಿನಿಂದನೆ ಕೇಸ್ ದಾಖಲಿಸುತ್ತೇವೆ ಹಾಗೂ ಸಿಂದಗಿಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಸಿದ್ದರಾಮಯ್ಯನವರನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದರು.  

ಭಾಜಪ ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ ಮಾತನಾಡಿ ದೇಶದ ಪ್ರಧಾನಿಯಿಂದ ಹಿಡಿದು ಎಲ್ಲ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡುವ ಸಿದ್ಧರಾಮಯ್ಯನವರಿಗೆ ನಾಲಿಗೆ ಹಿಡಿತದಲ್ಲಿಲ್ಲ. ಅವರ ಉದ್ದಟತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಶಿಕ್ಷೆ ಕಾದಿದೆ ಎಂದರು.  

 ಶಿವಲಿಂಗ ಘಂಟಿ ಮಾತನಾಡಿ, ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಕಂಬಾಲಪಲ್ಲಿಯಲ್ಲಿ ದಲಿತರ ಸಾಮೂಹಿಕ ದಹನ ನಡೆಯಿತು, ಅಂಬೇಡ್ಕರ್ ಅವರು ತೀರಿಕೊಂಡಾಗ ವಶ ಸಂಸ್ಕಾರಕ್ಕೆ ಕಾಂಗ್ರೆಸ್ ಸರ್ಕಾರ ಸ್ಥಳ ನೀಡಲಿಲ್ಲ. ಎಂಪಿ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ಸಿನವರೇ ಸೋಲಿಸಿದರು ಆದರೆ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಬಿಜೆಪಿ ಪಕ್ಷವೇ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿತು, ಪಾರ್ಲಿಮೆಂಟಿನಲ್ಲಿ ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡಿತು, ರದ್ದಾದ ಅಟ್ರಾಸಿಟಿಯನ್ನು ಮತ್ತೆ ಪಾರ್ಲಿಮೆಂಟಿನಲ್ಲಿ ಪಾಸ್ ಮಾಡುವ ಮೂಲಕ ಪ್ರಧಾನಿ ಮೋದಿಯವರು ದಲಿತ ಪರ ಕಾಳಜಿ ಮೆರೆದರು, ಭಾಜಪ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಪ್ರತಿ ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ಸ್ಥಾಪನೆ ಇಂತಹ ನೂರಾರು ದಲಿತ ಪರ ಕಾರ್ಯಗಳಿಂದಾಗಿ ದಲಿತರು ಬಿಜೆಪಿಯನ್ನು ಇಷ್ಟಪಟ್ಟು ಬಿಜೆಪಿಗೆ ಸೇರಿದ್ದಾರೆ ಹೊರತಾಗಿ ಯಾರೂ ಹೊಟ್ಟೆಪಾಡಿಗಾಗಿ ಸೇರಿಲ್ಲ ಎಂದರು.  

ಭೀಮಶಿ ಗೌಂಡಿ, ಶಿವಬಸು ಗೌಂಡಿ, ಪ್ರಶಾಂತ ಮುಕ್ಕೆನ್ನವರ, ಶಿವಾನಂದ ಅಂಗಡಿ, ಮಹೇಶ ಮುಕುಂದ, ಮಹಾಲಿಂಗ ಶಿವಣಗಿ, ತಿಪ್ಪಣ್ಣ ಬಂಡಿವಡ್ಡರ, ಮಹಾಂತೇಶ ಪಾತ್ರೋಟ, ರಾಜು ಬಂಡಿವಡ್ಡರ ಇತರರು ಇದ್ದರು. 


ಸುದ್ದಿ ಓದಿ