ಉತ್ತರ ಕನ್ನಡ ಜಿಲ್ಲಾ 25 ನೇ ಸಾಹಿತ್ಯ ಸಮ್ಮೇಳನ ; ನಿಲ್ಲದ ವಿವಾದ
ದಾಂಡೇಲಿ ಫೇ 10 : ಉತ್ತರ ಕನ್ನಡ ಜಿಲ್ಲಾ 25 ನೇ ಸಾಹಿತ್ಯ ಸಮ್ಮೇಳನ ನ್ಯಾಯಾಲಯದ ಮಧ್ಯಂತರ ಆದೇಶದ ಷರತ್ತುಗಳ ಕಣ್ಗಾವಲಿನಲ್ಲಿ ನಡೆದಿದ್ದರೂ ಇದೀಗ ವಿವಾದಗಳಿಂದ ಹೊರಬಂದಂತಿಲ್ಲ. ಷರತ್ತುಗಳನ್ನು ಪಾಲಿಸದೇ ಇರುವದರಿಂದ ವಾದಿಗಳಾದ ಅಜೀವ ಸದಸ್ಯರು, ಕ.ಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿಯವರನ್ನು ಮೂರನೇ ಪ್ರತಿವಾದಿಯನ್ನಾಗಿಸಿದ್ದಾರೆ. ದಾಂಡೇಲಿ ನ್ಯಾಯಾಲಯದಲ್ಲಿ ಈ ಸಂಬಂಧ ರಾಜ್ಯಾಧ್ಯಕ್ಷರಿಗೆ ನೋಟಿಸು ಜಾರಿಯಾಗಿದೆ. ಅವರು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾಗಬೇಕಾದ ಪ್ರಸಂಗ ಬಂದಿದೆ. ಒಂದನೇ ಪ್ರತಿವಾದಿ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ (ಬಿ.ಎನ್ ವಾಸರೆ), ಎರಡನೇ ಪ್ರತಿವಾದಿ ಕ.ಸಾ.ಪ ಆಡಳಿತಾಧಿಕಾರಿ ಕೆ.ಎಮ್. ಗಾಯತ್ರಿ ಅವರಾಗಿದ್ದಾರೆ. ಫೆಬ್ರುವರಿ 5 ರಂದು ಕೋರ್ಟಿಗೆ ಆಡಳಿತಾಧಿಕಾರಿ ಹಾಜರಾಗಿಲ್ಲ. ಅಂದೇ ರಾಜ್ಯಾಧ್ಯಕ್ಷ ಮಹೇಶ ಜೋಶಿಯವರನ್ನು ಮೂರನೆ ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ದಾಂಡೇಲಿಯಲ್ಲಿ ಡಿಸೆಂಬರ 2025 ರಲ್ಲಿ ಮೂರು ದಿನಗಳ ಕಾಲ ಉತ್ತರ ಕನ್ನಡ 25 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಯೋಜಿಸಿದ್ದರು. ಅಜೀವ ಸದಸ್ಯರಾದ ಅಕ್ರಂವುಲ್ಲಾ ಖಾನ್, ಪ್ರವೀಣ ಕೋಠಾರಿ, ಸಂದೀಪ ಭಂಡಾರಿಯವರು ರಾಜ್ಯಾಧ್ಯಕ್ಷರ ವಿರುದ್ದ ಹಣ ದುರುಪಯೋಗದ ಬಗ್ಗೆ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ತಹಶೀಲದಾರ, ಪಿಎಸ್.ಐ ಅನುಮತಿ ಮಾತ್ರ ಪಡೆದು, ಲಕ್ಷಾಂತರ ರೂಪಾಯಿ ಸಾರ್ವಜನಿಕ ವಂತಿಗೆ ಸಂಗ್ರಹಿಸಿ ಸಮ್ಮೇಳನ ಆಯೋಜನೆ ಮಾಡುತ್ತಿರುವ ಕ್ರಮ ಬದ್ದತೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ನ್ಯಾಯಾಲಯದ ವಿಚಾರಣೆಯಲ್ಲಿ ಪ್ರತಿವಾದಿ ಬೊಮ್ಮಯ್ಯ ವಾಸರೆ ಸಮ್ಮೇಳನ ಹಮ್ಮಿಕೊಳ್ಳಲು ಕಾರವಾರದ ಜಿಲ್ಲಾಧಿಕಾರಿ, ಪೋಲಿಸ್ ಅಧೀಕ್ಷಕರ, ಡಿ.ವೈ.ಎಸ್.ಪಿ ಮತ್ತು ಇನ್ನಿತರ ಅಧಿಕಾರಿಗಳಿಂದ ಪಡೆದ ಯಾವುದೇ ಅನುಮತಿಗಳನ್ನು ಹಾಜರು ಪಡಿಸಲು ವಿಫಲರಾಗಿರುತ್ತಾರೆಂದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಇದನ್ನು (ಒ.ಎಸ್. ನಂ 216/2025ಆರ್ಡರ್) ನಲ್ಲಿ ನಮೂದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಸಮ್ಮೇಳನ ನಡೆಸಲು ಸಾಕಷ್ಟು ಜನರು ಅಲ್ಲಿ ಸೇರುವದರಿಂದ ಘಟಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಸೂಕ್ತ ಅನುಮತಿ ಪಡೆಯುವದು ಅತಿ ಮಹತ್ವದ್ದಾಗಿದೆ. ಆದರೆ ಅವರು ಸದರಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವದು ಕಂಡು ಬರುತ್ತದೆ. ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ನ್ಯಾಯಾಲಯ ಷರತ್ತುಬದ್ದ ಮಧ್ಯಂತರ ಆದೇಶವನ್ನು ಮಾಡಿದೆ. ಈ ಆದೇಶದಲ್ಲಿ ವಿಧಿಸಿದ ಷರತ್ತುಗಳು ಇಂತಿದ್ದವು.