ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತಾದ ಇದು ಅಕ್ಷಮ್ಯ ಅಪರಾಧ: ಕೋಸಂಬೆ
ಅನಧಿಕೃತ ಅಬಾರ್ಷನ್ ಮಹಿಳೆ ಸಾವಿನೊಂದಿಗೆ ಭ್ರೂಣ ಹತ್ಯೆಯ ಕೃತ್ಯ

ಮಹಾಲಿಂಗಪುರ 31: ಅನಧಿಕೃತ ಅಬಾರ್ಷನ್ ಮೂಲಕ ಮಹಾರಾಷ್ಟ್ರ ಮೂಲದ ಮಹಿಳೆ ಸಾವಿನೊಂದಿಗೆ ಭ್ರೂಣ ಹತ್ಯೆಯ ಕೃತ್ಯ ನಡೆದಿರುವುದು ಕರ್ನಾಟಕ ರಾಜ್ಯವನ್ನೇ ತಲೆ ತಗ್ಗಿಸುವಂತೆ ಮಾಡಿದೆ, ಇದು ಅಕ್ಷಮ್ಯ ಅಪರಾಧ ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶ ಮಾಡುತ್ತಿದ್ದೇನೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಮಹಾಲಿಂಗಪುರ ಪಟ್ಟಣದ ಜಯಲಕ್ಷ್ಮಿ ನಗರದ ಮನೆಯೊಂದರಲ್ಲಿ ಆರೋಪಿ ಮಾಜಿ ಆಯಾ ಕವಿತಾ ಬಾಡನವರ ಎಂಬ ಮಹಿಳೆ ಅನಧಿಕೃತ ಅಬಾರ್ಷನ್ ಮಾಡಿ ಮಹಿಳೆಯೋರ್ವಳ ಸಾವಿಗೆ ಕಾರಣವಾದ ಈ ಸಂದರ್ಭದಲ್ಲಿ ಕೃತ್ಯ ನಡೆದಿದೆ ಎನ್ನಲಾದ ಮನೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ನೋಡಲ್ ಅಧಿಕಾರಿ ನಿರ್ಲಕ್ಷ್ಯ: 2019 ಮತ್ತು 22 ರಲ್ಲಿ ಇದೆ ಅಪರಾಧ ಕೃತ್ಯವೆಸಗಿದ ಮಹಿಳೆ ಮನೆ ಮೇಲೆ ದಾಳಿ ನಡೆದು, ಮನೆ ಸೀಜ್ ಮಾಡಿದ್ದನ್ನು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳದೆ ಅಂದಿನಿಂದ ಇಂದಿನವರೆವಿಗೂ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಡಿ ಬಿ ಪಟ್ಟಣಶೆಟ್ಟಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇದು ಅಮಾಯಕ ಹೆಣ್ಣು ಮಗಳ ಸಾವಿಗೆ ಕಾರಣವಾಗಿರುವುದರಿಂದ ಇದಕ್ಕೆ ಇವರನ್ನೇ ಹೊಣೆ ಮಾಡಿ ಪೋಲೀಸ್ ಇಲಾಖೆಯಿಂದ ಸುಮೋಟೋ ಪ್ರಕರಣ ದಾಖಲಿಸಿಕ್ಕೊಂಡು ಆರೋಗ್ಯ ಇಲಾಖೆ ಹಾಗೂ ಎಸಿ/ಡಿಸಿ ವರದಿ ಆಧರಿಸಿ ಇವರ ಮೇಲೆ ಆಯೋಗ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.
ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಡ: ಕಾನೂನು ಬಾಹಿರ ಅಬಾರ್ಷನ್ ಗಾಗಿ ಸಿಫಾರಸ್ಸು ಮಾಡಿದ ಸ್ಥಳೀಯ ಮತ್ತು ಮಹಾರಾಷ್ಟ್ರ ವೈದ್ಯರ/ ಮಧ್ಯವರ್ತಿಗಳ ವಿರುದ್ಧವೂ ಪೋಲೀಸ್ ಇಲಾಖೆ ಕ್ರಮ ಕೈಗೊಂಡು ಅವರ ಆಸ್ಪತ್ರೆ, ತಪಾಸಣೆ ಕೇಂದ್ರಗಳಿಗೆ ಮೋಹರ ಹಾಕಿ ಅವರ ಮೇಲೆ ಯೋಗ್ಯ ಕಾನೂನು ಕ್ರಮ ಜರುಗಿಸಬೇಕು. ಹೀಗಾದಲ್ಲಿ ಮಾತ್ರ ಮುಂದೆ ನಡೆಯುವ ಅನಧಿಕೃತ ಕೃತ್ಯಗಳಿಗೆ ಕಡಿವಾಣ ಬೀಳುವುದಲ್ಲದೆ ಹೆಚ್ಚಿನ ಅಮಾಯಕ ಸಾವುಗಳನ್ನು ತಡೆಯಬಹುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರಲಾಗುವುದು ಎಂದರು.
ಸ್ಟಿಂಗ್ ಆಪರೇಶನ್: ದೇಶದಲ್ಲಿ ಲಿಂಗಾನುಪಾತ ಕುಸಿಯುತ್ತಿದೆ. ಇಂತಹದರಲ್ಲಿ ಕಾನೂನು ಬಾಹಿರವಾಗಿ ಇಂತಹ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿವೆ. ಬಾಗಲಕೋಟ್ ಜಿಲ್ಲೆಯಾದ್ಯಂತ 183 ತಪಾಸಣೆ ಕೇಂದ್ರಗಳಿದ್ದು, ಐದು ತಂಡಗಳ ರಚನೆ ಮಾಡಿ ಪ್ರತಿ ಕೇಂದ್ರವನ್ನು ಪರೀಶೀಲನೆ (ಸ್ಟಿಂಗ್ ಆಪರೇಶನ್) ಮಾಡಿ, ಅಕ್ರಮ ಕೆಲಸ ಕಾರ್ಯಗಳಿಗೆ ತಡೆ ಒಡ್ಡಲಾಗುತ್ತದೆ. ಒಂದು ವೇಳೆ ಅಂತಹದ್ದೇನಾದರೂ ತಪ್ಪುಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ತಪಾಸಣೆ ಕೇಂದ್ರಗಳಿಗೆ ಮೋಹರ (ಸೀಜ್) ಮಾಡಲಾಗುವುದು.
ಮಹಿಳಾ ಹಕ್ಕುಗಳ ನಿರ್ದೇಶಕ ವೀರಣಗೌಡ ಪಾಟೀಲ್, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜಕುಮಾರ ಯರಗಲ್, ಎ ಸಿ. ಸಂತೋಷ್ ಕಾಮಗೌಡ, ಡಿವಾಯ್ ಎಸ್ಪಿ ಇ. ಶಾಂತವೀರ, ತಹಶೀಲ್ದಾರ್ ಗಿರಿಶ ಸ್ವಾದಿ, ಸಿಪಿಆಯ್ ಸಂಜೀವ ಬಳಗಾರ, ನೋಡಲ್ ಅಧಿಕಾರಿ ಡಿ ಬಿ ಪಟ್ಟಣಶೆಟ್ಟಿ, ತಾಲೂಕು ವೈದ್ಯಾಧಿಕಾರಿ ವೆಂಕಟೇಶ್ ಮಲಘಾಣ, ಡಿಸಿಪಿಓ ವೀಣಾ ಎಂ ಮತ್ತು ಸ್ಥಳೀಯ ಠಾಣಾಧಿಕಾರಿ ಪ್ರವೀಣ್ ಬಿಳಿಗಿ ಹಾಗೂ ಪೋಲಿಸ್ ಸಿಬ್ಬಂದಿಗಳು ಇದ್ದರು.