ಅಮೆರಿಕಾದಲ್ಲಿ 11 ಮಂದಿ ಭಾರತೀಯ ವಿದ್ಯಾರ್ಥಿಗಳ ಬಂಧನ
ವಾಷಿಂಗ್ಟನ್, ಅ 23 : ಅಕ್ರಮವಾಗಿ ನೆಲೆಸಿರುವ ಆರೋಪದ ಮೇಲೆ ಅಮೆರಿಕಾದಲ್ಲಿ ಹದಿನೈದು ಮಂದಿ ವಿದೇಶಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ 11 ಮಂದಿ ಭಾರತೀಯರು ಸೇರಿದ್ದಾರೆ. ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಸ್ಟನ್, ವಾಷಿಂಗ್ಟನ್, ಹೂಸ್ಟನ್, ನೆವಾರ್ಕ್, ನ್ಯಾಶ್ವಿಲ್ಲೆ, ಪಿಟ್ಸ್‌ಬರ್ಗ್ ಮತ್ತು ಹ್ಯಾರಿಸ್ಬರ್ಗ್ ಪ್ರದೇಶದ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.ಇವರೆಲ್ಲರೂ ' ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (ಒಪಿಟಿ)' ಸೌಲಭ್ಯ ಬಳಸಿಕೊಂಡು ಅಕ್ರಮವಾಗಿ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಎಂದು ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಗಳು ಆರೋಪಿಸಿದ್ದಾರೆ. ಒಪಿಟಿ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ವಲಯದಲ್ಲಿ ಒಂದು ವರ್ಷ ಕೆಲಸ ಮಾಡುವ ಅವಕಾಶವನ್ನು ಒಪಿಟಿ ಕಲ್ಪಿಸುತ್ತದೆ. ಸ್ಟಮ್ ಒಪಿಟಿಯಲ್ಲಿ ಪಾಲ್ಗೊಂಡರೆ ಇನ್ನೂ 24 ತಿಂಗಳು ಕೆಲಸ ಮಾಡಬಹುದು. ಆದರೆ, ಇವರೆಲ್ಲರೂ ಎಲ್ಲಿಯೂ ಕೆಲಸ ಮಾಡದೆ ಒಪಿಟಿ ಅವಕಾಶ ಬಳಸುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.