ಆಶಾ ಕಾರ್ಯಕರ್ತೆಯರಿಂದ ಜಿಲ್ಲಾ ಪಂಚಾಯತ ಎದುರು ಬೃಹತ್ ಪ್ರತಿಭಟನೆ
ಕಾರವಾರ 06 : ವೇತನ ಹೆಚ್ಚಳ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಎದುರು ಎಐಯುಟಿಯುಸಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಮಾಡಿದರು. ಆಶಾ ಕಾರ್ಯಕರ್ತೆಯರ ಮೇಲೆ ಆರೋಗ್ಯ ಇಲಾಖೆಯ ಶೋಷಣೆ ನಿಲ್ಲಬೇಕು. ಹೊಸ ಹೊಸ ಆ್ಯಪ್ ಬಳಸುವಂತೆ ಒತ್ತಾಯಿಸಬಾರದು ಎಂದು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತರು ಸರ್ಕಾರವನ್ನು ಆಗ್ರಹಿಸಿದರು.
ಗರ್ಭಿಣಿ ಹೆಂಗಸರ ಹೆರಿಗೆ ಸಮಯದಲ್ಲಿ ಆಶಾ ಹಾಜರಿದ್ದರೂ, ಅದರ ಫಾರ್ಮೆಟ್ ಸರಿಯಾದ ಸಮಯದಲ್ಲಿ ತುಂಬಲಿಲ್ಲ ಎಂಬ ಕಾರಣ, ಗೌರವ ಧನಕ್ಕೆ ಕತ್ತರಿ ಹಾಕಲಾಗುತ್ತಿದೆ. ಮಾಡಿದ ಕೆಲಸಕ್ಕೆ ಸಹ ಸಿಗುವ ಹಣಕ್ಕೆ ಸತಾಯಿಸುವ ಅಮಾನವೀಯತೆ ಆರೋಗ್ಯ ಇಲಾಖೆಯಲ್ಲಿದೆ. ಈ ಶೋಷಣೆ ನಿಲ್ಲಬೇಕು ಎಂದು ಆಶಾ ಸಂಘಟನೆ ಅಧ್ಯಕ್ಷೆ ಪದ್ಮಾ ಚಲವಾದಿ ಹೇಳಿದರು. ಕೇರಳದಲ್ಲಿ ಆಶಾ ಕಾರ್ಯಕರ್ತೆಯರು ಒಂದು ವರ್ಷ ಧರಣಿ ಮಾಡಿ ತಮ್ಮ ಬೇಡಿಕೆ ಈಡೇರಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕನಿಷ್ಠ ವೇತನ ನಿಯಮ ಜಾರಿ ಮಾಡಿಲ್ಲ. ಮಾಡಿದ ಕೆಲಸಕ್ಕೆ ವೇತನ ನೀಡುತ್ತಿಲ್ಲ ಎಂದು ಎಐಯುಟಿಯುಸಿ ಮುಖಂಡ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಗಂಗಾಧ ಬಡಿಗೇರ ಆರೋಪಿಸಿದರು. ಆರೋಗ್ಯ ಇಲಾಖೆಯಲ್ಲಿ ಹೆಚ್ಚು ಶೋಷಣೆ ನಡೆಯುತ್ತಿದೆ. ಇದನ್ನು ಆಶಾಗಳು ಒಗ್ಗಟ್ಟಿನಿಂದ ಪ್ರತಿಭಟಿಸಿ. ಇತರರ ಕಷ್ಟ ಕೇಳುವ ಸೌಜನ್ಯ ಯಾವ ಪಕ್ಷದವರಿಗೂ ಇಲ್ಲವಾಗಿದೆ ಎಂದರು.