ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗಾಗಿ 12 ಬಿಲಿಯನ್ ಅಮೆರಿಕನ್ ಡಾಲರ್ ನೆರವು; ವಿಶ್ವ ಬ್ಯಾಂಕ್
ವಾಷಿಂಗ್ಟನ್, ಅ 14 :ಕೋವಿಡ್ ಸೋಂಕಿತರಿಗೆ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಖರೀದಿ ಮತ್ತು ವಿತರಣೆಗೆ ಹಣಕಾಸು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 12 ಬಿಲಿಯನ್ ಅಮೆರಿಕನ್ ಡಾಲರ್‌ಗಳ ನೆರವು ನೀಡಲು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದಿಸಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ. 1 ಬಿಲಿಯನ್ ಜನರಿಗೆ ಲಸಿಕೆ ಹಾಕುವಿಕೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಹಣಕಾಸಿನ ನೆರವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡಲು ವಿಶ್ವಬ್ಯಾಂಕ್ ನೀಡಲಿರುವ ಜೂನ್ 2021ರವರೆಗಿನ 160 ಬಿಲಿಯನ್ ಡಾಲರ್ ಒಟ್ಟು ವಿಶ್ವಬ್ಯಾಂಕ್ ಪ್ಯಾಕೇಜಿನ ಭಾಗವಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ವಿಶ್ವ ಬ್ಯಾಂಕನ್ ಕೋವಿಡ್-19 ತುರ್ತು ಪ್ರತಿಕ್ರಿಯಾ ಕಾರ್ಯಕ್ರಮಗಳು 111 ದೇಶಗಳನ್ನು ತಲುಪುತ್ತಿದೆ ಎಂದು ಹೇಳಿಕೆ ವಿವರಿಸಿದೆ. ಕೋವಿಡ್ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು ನಾವು ನಮ್ಮ ವೇಗದ ಮಾರ್ಗವನ್ನು ವಿಸ್ತರಿಸುತ್ತಿದ್ದೇವೆ. ಇದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಲಸಿಕೆಗಳನ್ನು ಪಡೆಯುವ ಸಮಾನ ಅವಕಾಶ ದೊರೆಯಲಿದೆ ಎಂದು ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ತಡೆಯಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳು ಮತ್ತು ಅದರ ಸದೃಢ ವಿತರಣಾ ವ್ಯವಸ್ಥೆಗಳು ಪ್ರಮುಖವಾದುದು. ಇದು ಹಣಕಾಸಿನ ಪರಿಣಾಮಗಳನ್ನು ಅನುಭವಿಸುತ್ತಿರುವ ದೇಶಗಳು ಚೇತರಿಸಿಕೊಳ್ಳುವ ಚೇತರಿಕೆಯತ್ತ ಸಾಗಲು ಸಹಾಯ ಮಾಡುತ್ತದೆ ಎಂದು ಮಾಲ್ಪಾಸ್ ಹೇಳಿದರು.