ರಾಷ್ಟ್ರೀಯ

ಉತ್ತರ ಪ್ರದೇಶದ 18 ನಗರಗಳಲ್ಲಿ 1,725 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಅನುಮೋದನೆ

ಉತ್ತರ ಪ್ರದೇಶದ 18 ನಗರಗಳಲ್ಲಿ 1,725 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಅನುಮೋದನೆ

ಲಖನೌ, ಅ. 9 : ಉತ್ತರ ಪ್ರದೇಶದ ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯದ 18 ನಗರಗಳಲ್ಲಿ ಒಟ್ಟು 1,725 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯಡಿ ಆಗ್ರಾ, ಅಲಿಗಢ, ಅಯೋಧ್ಯೆ, ಬರೇಲಿ, ಫಿರೋಜಾಬಾದ್, ಗಾಜಿಯಾಬಾದ್, ಗೋರಖ್‌ಪುರ, ಝಾನ್ಸಿ, ಕಾನ್ಪುರ, ಲಖನೌ, ಮಥುರಾ-ವೃಂದಾವನ, ಮೀರತ್, ಮೊರಾದಾಬಾದ್, ಪ್ರಯಾಗ್‌ರಾಜ್, ಶಹಜಹಾನ್‌ಪುರ, ಸಹಾರನ್‌ಪುರ, ವಾರಾಣಸಿ ಹಾಗೂ ನೋಯ್ಡಾ (ಜೆವಾರ್ ಸೇರಿದಂತೆ) ನಗರಗಳಲ್ಲಿ ಬಸ್‌ಗಳನ್ನು ಓಡಿಸಲಾಗುತ್ತದೆ.

ಈ ಬಸ್‌ಗಳು 9 ಮೀಟರ್ ಮತ್ತು 12 ಮೀಟರ್ ಉದ್ದದ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳಾಗಿರಲಿವೆ. ವಾಣಿಜ್ಯ ಕಾರ್ಯಾಚರಣೆ ಆರಂಭವಾದ ದಿನದಿಂದ 12 ವರ್ಷಗಳ ಅವಧಿಗೆ ಗುತ್ತಿಗೆ ನಿಗದಿಪಡಿಸಲಾಗಿದೆ.

ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅರವಿಂದ್ ಕುಮಾರ್ ಶರ್ಮಾ ಮಾತನಾಡಿ, ರಾಜ್ಯದ 18 ನಗರಗಳಲ್ಲಿ ಶೀಘ್ರದಲ್ಲೇ ಹೆಚ್ಚುವರಿ 1,725 ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

ನಗರವಾರು ಬಸ್ ಹಂಚಿಕೆ ಹೀಗಿದೆ: ಆಗ್ರಾ ಮತ್ತು ಗಾಜಿಯಾಬಾದ್‌ಗೆ ತಲಾ 100 ಬಸ್‌ಗಳು, ಮಥುರಾ-ವೃಂದಾವನಕ್ಕೆ 50, ಅಲಿಗಢ ಮತ್ತು ಫಿರೋಜಾಬಾದ್‌ಗೆ ತಲಾ 25, ಮೀರತ್‌ಗೆ 100, ಶಹಜಹಾನ್‌ಪುರ, ಬರೇಲಿ, ಮೊರಾದಾಬಾದ್ ಮತ್ತು ಸಹಾರನ್‌ಪುರಕ್ಕೆ ತಲಾ 25 ಬಸ್‌ಗಳನ್ನು ಒದಗಿಸಲಾಗುತ್ತದೆ.

ನೋಯ್ಡಾ (ಜೆವಾರ್ ಸೇರಿದಂತೆ)ಗೆ 100, ವಾರಾಣಸಿಗೆ 250, ಅಯೋಧ್ಯೆಗೆ 50, ಲಖನೌ ಮತ್ತು ಕಾನ್ಪುರಕ್ಕೆ ತಲಾ 300, ಗೋರಖ್‌ಪುರಕ್ಕೆ 150, ಪ್ರಯಾಗ್‌ರಾಜ್‌ಗೆ 50 ಹಾಗೂ ಝಾನ್ಸಿಗೆ 25 ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ.

ಜಿಸಿಸಿ ಮಾದರಿಯಡಿ ಖಾಸಗಿ ನಿರ್ವಾಹಕರು ಬಸ್‌ಗಳ ಖರೀದಿ, ಚಾರ್ಜಿಂಗ್ ಕೇಂದ್ರಗಳಿಗೆ ಅಗತ್ಯವಿರುವ ಚಾರ್ಜರ್‌ಗಳ ವ್ಯವಸ್ಥೆ, ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿಯ ನೇಮಕ ಹಾಗೂ ಬಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ನಿಗದಿಪಡಿಸಿದ ಕಾರ್ಯಕ್ಷಮತೆಯ ಮಾನದಂಡಗಳ ಆಧಾರದ ಮೇಲೆ ಖಾಸಗಿ ನಿರ್ವಾಹಕರಿಗೆ ಕಾರ್ಯಾಚರಣೆ ಮತ್ತು ನಿರ್ವಹಣಾ ಶುಲ್ಕ (ಒ&ಎಂ ಶುಲ್ಕ) ಪಾವತಿಸಲಾಗುತ್ತದೆ. ಪ್ರಯಾಣ ದರಗಳನ್ನು ಸರ್ಕಾರವೇ ನಿಗದಿಪಡಿಸಲಿದೆ.

ಯೋಜನೆಯಡಿ ಪ್ರತಿ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್‌ಗೆ 40 ಲಕ್ಷ ರೂ. ಹಾಗೂ ಪ್ರತಿ 9 ಮೀಟರ್ ಉದ್ದದ ಬಸ್‌ಗೆ 35 ಲಕ್ಷ ರೂ. ಅನುದಾನ ನೀಡಲು ಅನುಮೋದನೆ ದೊರೆತಿದೆ. ಬಸ್‌ಗಳ ಕಾರ್ಯಾಚರಣೆಗೆ ಅಗತ್ಯವಿರುವ ಡಿಪೋಗಳ ನಿರ್ಮಾಣಕ್ಕಾಗಿ ಸಂಬಂಧಪಟ್ಟ ನಗರ ಪಾಲಿಕೆಗಳು ಮತ್ತು ನೋಯ್ಡಾ ಪ್ರಾಧಿಕಾರವು ಉಚಿತವಾಗಿ ಭೂಮಿಯನ್ನು ಒದಗಿಸಲಿದೆ.

ಖಾಸಗಿ ವಲಯದ ಹೂಡಿಕೆಯಿಂದ ಬಸ್‌ಗಳ ಕಾರ್ಯಾಚರಣೆಗೆ ಸರ್ಕಾರ ಮಾಡಬೇಕಾದ ವೆಚ್ಚದ ಹೊರೆ ಕಡಿಮೆಯಾಗುವುದರ ಜೊತೆಗೆ ಸೇವೆಗಳ ಗುಣಮಟ್ಟವೂ ಸುಧಾರಿಸಲಿದೆ ಎಂದು ಸರ್ಕಾರ ತಿಳಿಸಿದೆ. ಖಾಸಗಿ ನಿರ್ವಾಹಕರು ಕಾರ್ಯಕ್ಷಮತೆ, ಸಮಯಪಾಲನೆ ಮತ್ತು ಪ್ರಯಾಣಿಕರ ತೃಪ್ತಿಗೆ ಆದ್ಯತೆ ನೀಡಲಿದ್ದಾರೆ. ಅಲ್ಲದೆ, ನಿರ್ವಾಹಕರ ನಡುವಿನ ಸ್ಪರ್ಧೆಯಿಂದ ಆಧುನಿಕ ತಂತ್ರಜ್ಞಾನ ಅಳವಡಿಕೆ ಮತ್ತು ಸೇವೆಗಳ ಸುಧಾರಣೆಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ಈ ಯೋಜನೆಯಡಿ ಖಾಸಗಿ ನಿರ್ವಾಹಕರನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿ ಗುತ್ತಿಗೆ ನೀಡಲಾಗುತ್ತದೆ.

ಹೊಸ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ರೂಪಿಸಿರುವ ನೀತಿಯಂತೆ, ಅನ್ವಯವಾಗುವ ಖರೀದಿ ನಿಯಮಗಳಿಗೆ ಒಳಪಟ್ಟು ಎಲ್-1 ದರದಲ್ಲಿ ಉತ್ತರ ಪ್ರದೇಶದಲ್ಲೇ ತಯಾರಾದ ಬಸ್‌ಗಳಿಗೆ ಆದ್ಯತೆ ನೀಡಲು ಪ್ರಸ್ತಾಪಿಸಲಾಗಿದೆ.

ಈ ಕ್ರಮದಿಂದ ರಾಜ್ಯದಲ್ಲಿ ಬಸ್ ತಯಾರಿಕೆ ಮತ್ತು ಬಿಡಿಭಾಗಗಳ ಪೂರೈಕೆಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಸುದ್ದಿ ಓದಿ