ಜಮ್ಮು-ಕಾಶ್ಮೀರದ ಸೊಪೋರ್‍ ನಲ್ಲಿ ಗುಂಡಿನ ಚಕಮಕಿ: ಇಬ್ಬರು ಭಯೋತ್ಪಾದಕರು ಹತ

ಜಮ್ಮು-ಕಾಶ್ಮೀರದ ಸೊಪೋರ್‍ ನಲ್ಲಿ ಗುಂಡಿನ ಚಕಮಕಿ: ಇಬ್ಬರು ಭಯೋತ್ಪಾದಕರು ಹತ

 
ಬಾರಾಮುಲ್ಲ, ಜುಲೈ 23 ಉತ್ತರ ಕಾಶ್ಮೀರದ ಸೊಪೋರ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 ಗುರುವಾರ ತಡರಾತ್ರಿ ಸೊಪೋರ್‌ನ ವಾರ್‌ಪೋರಾದಲ್ಲಿ ಉಗ್ರರು ಇರುವ ಬಗ್ಗೆ ಸುಳಿವು ಆಧರಿಸಿ ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ಪೊಲೀಸ್ ನ  ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
 ಭದ್ರತಾ ಪಡೆಗಳು ನಿರ್ದಿಷ್ಟ ಸ್ಥಳದತ್ತ ಸಾಗತ್ತಿದ್ದಾಗ ಅಡಗಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದಾಗ ಪರಿಸ್ಪರ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಉಗ್ರರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಇಂದು ಬೆಳಿಗ್ಗೆ ಬೆಳಕು ಹರಿಯುತ್ತಲೇ ಭದ್ರತಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿವೆ.
 ನಂತರ, ಮತ್ತೊಬ್ಬ ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಕೊನೆಯದಾಗಿ ವರದಿಗಳು ಬಂದಾಗ ಕಾರ್ಯಾಚರಣೆ ನಡೆಯುತ್ತಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ನೆರೆಯ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
  ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳನ್ನು ಕಾಶ್ಮೀರ ವಲಯ ಐಜಿಪಿ ವಿಜಯ್‍ಕುಮಾರ್ ಅಭಿನಂದಿಸಿದ್ದು,  ಹತ್ಯೆಗೀಡಾದ ಓರ್ವ ಭಯೋತ್ಪಾದಕನನ್ನು ಫಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವನು ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ನಡೆದಿದ್ದ ದಾಳಿಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಸುದ್ದಿ ಓದಿ