ಭೂತಾನ್‌ನಲ್ಲಿ ರಾಫ್ಟಿಂಗ್ ದುರಂತ: ಇಬ್ಬರು ಭಾರತೀಯ ಪ್ರವಾಸಿಗರು ಸಾವು

ಭೂತಾನ್‌ನಲ್ಲಿ ರಾಫ್ಟಿಂಗ್ ದುರಂತ: ಇಬ್ಬರು ಭಾರತೀಯ ಪ್ರವಾಸಿಗರು ಸಾವು Two Indian Tourists Die in Rafting Accident in Bhutan

ಥಿಂಪು, ಸೆ. 25 : ಭೂತಾನ್‌ನ ಮೋಚು ನದಿಯಲ್ಲಿ ರಾಫ್ಟಿಂಗ್ ಮಾಡುತ್ತಿದ್ದ ವೇಳೆ ದೋಣಿಯಿಂದ ನದಿಗೆ ಬಿದ್ದ ಇಬ್ಬರು ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು 60 ವರ್ಷದ ಮಹಿಳೆ ಹಾಗೂ 68 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ಪುನಾಖಾ ಜಿಲ್ಲೆಯ ಛುಬು ಗೆವೊಗ್ ವ್ಯಾಪ್ತಿಯ ಯೆಬಿಸಾ ಗ್ರಾಮದ ಸಮೀಪ ರಾಫ್ಟಿಂಗ್ ದೋಣಿಗೆ ಭಾರೀ ಅಲೆ ಅಪ್ಪಳಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮೂವರು ನದಿಗೆ ಬಿದ್ದಿದ್ದು, ಅವರಲ್ಲಿ ಓರ್ವ ಮಹಿಳೆಯನ್ನು ಯಾವುದೇ ಗಾಯಗಳಿಲ್ಲದೆ ರಕ್ಷಿಸಲಾಗಿದೆ. ಇಬ್ಬರು ಭಾರತೀಯ ಪ್ರವಾಸಿಗರನ್ನು ನದಿಯ ಕೆಳಭಾಗದಿಂದ ರಕ್ಷಿಸಿ ಪುನಾಖಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಸೆಪ್ಟೆಂಬರ್ 24ರ ಸಂಜೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲಭ್ಯ ಮಾಹಿತಿಯ ಪ್ರಕಾರ, 16 ಮಂದಿ ಭಾರತೀಯ ಪ್ರಾದೇಶಿಕ ಪ್ರವಾಸಿಗರು ಯೆಬಿಸಾ ಪ್ರದೇಶದಲ್ಲಿ ರಾಫ್ಟಿಂಗ್‌ಗೆ ತೆರಳಿ ಮೂರು ರಾಫ್ಟಿಂಗ್ ದೋಣಿಗಳಲ್ಲಿ ಪ್ರಯಾಣಿಸಿದ್ದರು. ಮೃತಪಟ್ಟ ಇಬ್ಬರು ಪ್ರವಾಸಿಗರು ಈ ಪೈಕಿ ಒಂದು ದೋಣಿಯಲ್ಲಿದ್ದರು.

ಇಬ್ಬರು ಮೃತರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ದೆಹಲಿಗೆ ವಿಮಾನದ ಮೂಲಕ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೃತರು ಒಂದು ವಾರದ ಭೂತಾನ್ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರ ತಂಡದ ಭಾಗವಾಗಿದ್ದರು.