ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ಸಂಕೇಶ್ಚರ : ಪಟ್ಟಣದಲ್ಲಿ ರಸ್ತೆಗಳನ್ನು ಅತಿಕ್ರಮಿಸಿ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟು ಮಾಡುತ್ತಿದ್ದ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾರಂಭಿಸಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ರಸ್ತೆಯನ್ನು ಅತಿಕ್ರಮಿಸಿ ರಸ್ತೆಗಳಲ್ಲಿ ಡಬ್ಬಾ ಅಂಗಡಿ ಹಾಗೂ ತಳ್ಳುವ ಗಾಡಿಗಳನ್ನು ಇಡುವ ಮೂಲಕ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯನ್ನು ಉಂಟು ಮಾಡುತ್ತಿದ್ದ ಡಬ್ಬಾ ಅಂಗಡಿಗಳನ್ನು ತೆರವು ಮಾಡಲು ಪುರಸಭೆ ಸಿಬ್ಬಂದಿಗಳು ಗುರುವಾರ ಬೆಳಗಿನ ಜಾವದಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ರಸ್ತೆಗಳನ್ನು ಅತಿಕ್ರಮಿಸಿ ಮನಬಂದಂತೆ ಅಂಗಡಿಕಾರರು ಡಬ್ಬಾ ಅಂಗಡಿಗಳನ್ನು ಹಾಕಿಕೊಂಡಿದ್ದರು. ಅಲ್ಲದೆ ವಾಹನ ಸವಾರರು ಇದರಿಂದ ದಿನ ನಿತ್ಯ ತೊಂದರೆ ಅನುಭವಿಸುವಂತಾಗಿತ್ತು. ಸಂಚಾರ ದಟ್ಟಣೆ ಕಡಿತಗೊಳಿಸುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಡಬ್ಬಾ ಅಂಗಡಿಗಳ ತೆರವಿಗೆ ಮುಂದಾಗಿದ್ದಾರೆ.
ಪುರಸಭೆ ಅಧಿಕಾರಿಗೆ ಕೆಲವು ಮುಖಂಡರು ದೂರವಾಣಿ ಮೂಲಕ ಅವಾಜ್ ಹಾಕುತ್ತಿದ್ದು, ಡಬ್ಬಾ ಅಂಗಡಿಗಳ ತೆರವು ಮಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.