ಸಂಕೇಶ್ವರದಲ್ಲಿ ಅದ್ದೂರಿಯಾಗಿ ಜರುಗಿದ ಕರ್ನಾಟಕ ರಾಜ್ಯೋತ್ಸವ : ಮನಸೆಳೆದ ರೂಪಕಗಳ ಮರರವಣಿಗೆ, ಕುಣಿದು ಕುಪ್ಪಳಿಸಿದ ಯುವಪಡೆ
ಸಂಕೇಶ್ವರ : ನಗರದಲ್ಲಿ ಶನಿವಾರ ತಾಯಿ ಭುವನೇಶ್ವರಿ ಮೂರ್ತಿಯ ಹಾಗೂ ರೂಪಕಗಳ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ವನ್ನು ಆಚರಣೆ ಮಾಡಲಾಯಿತು.

ನಗರದ ಗಾಂಧಿ ಚೌಕದಲ್ಲಿ ಶನಿವಾರ ದಿ. 5ರಂದು ಬೆಳಿಗ್ಗೆ 8 ಗಂಟೆಗೆ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಸಿ ಇವರ ಮಾರ್ಗದರ್ಶನದಲ್ಲಿ ಉದ್ಯಮಿ ಅಪ್ಪಾಸಾಹೇಬ ಶಿರಕೋಳಿ ಅವರು ಕನ್ನಡದ ಧ್ವಜಾರೋಹಣ ಮಾಡಿದರು. ತಾಯಿ ಶ್ರೀ ಭುವನೇಶ್ವರಿ ಭಾವಚಿತ್ರದ ಪೂಜೆಯನ್ನು ಸಂಕೇಶ್ವರದ ಪುರಸಭೆ ಅಧ್ಯಕ್ಷೆ ಶ್ರೀಮತಿ ಸೀಮಾ ಶ್ರೀಕಾಂತ ಹತನೂರೆ ನೆರವೇರಿಸಿದರು.
ಶ್ರೀ ಭುವನೇಶ್ವರಿ ಮೂರ್ತಿಯ ಪೂಜೆಯನ್ನು ಉಪಾಧ್ಯಕ್ಷ ಅಜೀತ ಕರಜಗಿ, ಭವ್ಯ ರೂಪಕಗಳ ಮೆರವಣಿಗೆಯ ಉದ್ಘಾಟನೆಯನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ ಪರ್ವತರಾವ್, ಶ್ರೀ ವೀರರಾಣಿ ಕಿತ್ತೂರು ಚನ್ನಮ್ಮಾ ಭಾವಚಿತ್ರ ಪೂಜೆಯನ್ನು ಪುರಸಭೆ ಸದಸ್ಯೆ ಸೌ. ಸುಚಿತಾ ಶ್ರೀಕಾಂತ ಪರೀಟ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಪೂಜೆ ನಂದು ಮುಡಶಿ, ಭವ್ಯ ವಾದ್ಯ-ಮೇಳಗಳ ಉದ್ಘಾಟನೆಯನ್ನು ನ್ಯಾಯವಾದಿ ವಿಕ್ರಂ ಕರನಿಂಗ, ಭವ್ಯ ರೂಪಕಗಳ ಮೆರವಣಿಗೆಗೆ ಸದಸ್ಯೆ ಶ್ರೀಮತಿ ಸಂಗೀತಾ ಕೋಳಿ ನೆರವೇರಿಸಿದರು.
ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ರೂಪಗಳ ಮೆರವಣಿಗೆ ನಡೆಯಿತು. ರೂಪಕಗಳಲ್ಲಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ರೂಪಗಳ ವೇಷಭೂಷ ಶಾಲೆಗಳ ಬಾಲ ವಿದ್ಯಾರ್ಥಿಗಳು ಮಿಂಚಿದರು. ರೂಪಕಗಳಲ್ಲಿ ಕರ್ನಾಟಕ ರತ್ನ ಡಾ. ಪುನಿತರಾಜ್ ಕುಮಾರ್, ಹಾಗೂ ದಿ. ಉಮೇಶ ಕತ್ತಿ ಅವರ ಭಾವಚಿತ್ರಗಳು ಕಂಗೋಳಿಸಿದವು. ಬಳಿಕ ರೂಪಕಗಳ ಮೆರವಣಿಗೆಯು ಗಾಂಧಿಚೌಕಗೆ ಆಗಮಿಸಿ ಕೊನೆಗೊಂಡಿತು.