ಬೆಳಗಾವಿಯಲ್ಲಿ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆ : ಸಿಎಂ ಬಸವರಾಜ ಬಸವರಾಜ ಬೊಮ್ಮಾಯಿ ಭರವಸೆ
ಬೆಳಗಾವಿ, ಅ, 15 : ಗಡಿನಾಡ. ಜಿಲ್ಲೆ ಬೆಳಗಾವಿಯಲ್ಲಿ ಬರುವ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಶನಿವಾರ ಸಂಜೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದಷ್ಟೇ ಹೇಳಿದರು.
ಕನ್ನಡ ಹೋರಾಟಗಾರ ಮೆಹಬೂಬ ಮಕಾನದಾರ, ಮನವಿ ಪತ್ರ ನೀಡಿ, ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯಾದ್ಯಂತ ಕಿತ್ತೂರು ರಾಣಿ ಚನ್ನಮ್ಮ ಜ್ಯೋತಿ ಹೊರಡಿಸಿರುವುದಕ್ಕೆ ಧನ್ಯವಾದ ಸಲ್ಲಿಸಿದರು. ಬೆಳಗಾವಿಯಲ್ಲಿ ಅತೀ ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಗಡಿ ವಿವಾದದ ಕುರಿತು ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟನಲ್ಲಿ ಅಂತಿಮ ವಿಚಾರಣೆಯಿದೆ. ಬೆಳಗಾವಿ ಕಣ ಕಣದಲ್ಲಿಯೂ ಕನ್ನಡ ಇದೆ ಎಂಬ ಸಂದೇಶವನ್ನು ದೇಶಕ್ಕೆ ಸಾರಬೇಕಿದೆ. ಹಾಗಾಗಿ, ಈ ಬಾರಿ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆ ಹಮ್ಮಿಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಕು. ಅಲ್ಲದೇ, ರಾಜ್ಯೋತ್ಸವ ಆಚರಣೆಗೆ 1 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಅನಂತಕುಮಾರ ಬ್ಯಾಕೂಡ, ಬಾಬು ಸಂಗೋಡಿ, ವಾಜೀದ್ ಹಿರೇಕೊಡಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.