ದೇಶಕ್ಕೆ ಸ್ವಾತಂತ್ರ್ಯವನ್ನು ಕೊಡಿಸುವುದೇ ಟಿಪ್ಪುವಿನ ಗುರಿಯಾಗಿತ್ತು: ಉಳ್ಳೇಗಡ್ಡಿ
ಮಹಾಲಿಂಗಪುರ : ಹಜರತ ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅವನ ಗುರಿ ದೇಶಕ್ಕೆ ಸ್ವಾತಂತ್ರ್ಯವನ್ನು ಕೊಡಿಸುವುದೇ ಆಗಿತ್ತು ಎಂದು ನಿವೃತ್ತ ಶಿಕ್ಷಕರಾದ ಎಸ್.ಎಂ. ಉಳ್ಳೇಗಡ್ಡಿ ಹೇಳಿದರು.
ಶುಕ್ರವಾರ ಪಟ್ಟಣದ ಅಂಜುಮನ್ ಭವನದಲ್ಲಿ ಹಜರತ್ ಟಿಪ್ಪು ಸುಲ್ತಾನ್, ಮೌಲಾನಾ ಅಬುಲ್ ಕಲಾಂ ಆಜಾದ್, ಸರ್ ಅಲ್ಲಾಮಾ ಮೋಹ್ಮದ್ ಇಕ್ಬಾಲ್ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಳೇಗಡ್ಡಿ ಅವರು ಮಾತನಾಡುತ್ತಾ ಮಹಾತ್ಮರಿಗೆ ಜಾತಿ ಇಲ್ಲ. ಅಂಥವರನ್ನು ಜಯಂತಿಗಳ ಮೂಲಕ ನೆನಪಿಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದಾಗ ಸಮಾಜ, ದೇಶ ಸುಭಿಕ್ಷವಾಗಿರುತ್ತದೆ. ದೇಶದ ಅಸಂಖ್ಯಾತ ಮುಸಲ್ಮಾನರಲ್ಲಿ ಸೂಫಿ ಸಂತರು, ಸ್ವಾತಂತ್ರ್ಯ ಯೋಧರಾಗಿ ಮತ್ತು ಸಮಾನತೆಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದೂ ಅಲ್ಲದೆ, ಬಲಿದಾನವೂಗೊಂಡಿದ್ದಾರೆಂದು ಅವರ ಕೊಡುಗೆಗಳನ್ನು ಸ್ಮರಿಸಿದರು. ಸರ್ ಅಲ್ಲಾಮಾ ಇಕ್ಬಾಲ್ ಹಾಗೂ ದೇಶದ ಪ್ರಥಮ ಶಿಕ್ಷಣ ಮಂತ್ರಿ ಭಾರತರತ್ನ ಅಬುಲ್ ಕಲಾಂ ಆಜಾದ್ ಅವರ ಗುಣಗಾನ ಮಾಡಿ, ಇವರ ಬದುಕಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಭೇದ ಮರೆತು ತಿಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದು ಸಭಿಕರಲ್ಲಿ ಜಾಗೃತಿ ಮೂಡಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶರಣ ಶ್ರೀ ಇಬ್ರಾಹಿಂ ಸುತಾರ್ ವಿಶೇಷ ಉಪನ್ಯಾಸ ನೀಡಿ ಪ್ರತಿಯೊಬ್ಬರೂ ಸರ್ವಧರ್ಮಗಳ ಗ್ರಂಥಗಳನ್ನು ಓದಬೇಕು ಆಗ ಸಮಾನತೆಗಾಗಿ ಪ್ರಶ್ನೆ ಮಾಡುವ ಮನೋಬಲ ಬರುತ್ತದೆ. ಹಜರತ ಟಿಪ್ಪು ಸುಲ್ತಾನ್ ಬಾಲ್ಯದಲ್ಲಿ ಕುರಾನ್ ಜೊತೆಗೆ ಭಗವದ್ಗೀತೆಯನ್ನು ಕೂಡ ಚೆನ್ನಾಗಿ ಬಲ್ಲವರಾಗಿ ಬ್ರಾಹ್ಮನೋತ್ತಮರನ್ನು ಸಮಾನತೆ ಬಗ್ಗೆ ಪ್ರಶ್ನಿಸುವಂತವರಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ದೇಶದ ಒಳಗಿನ ಬ್ರಿಟಿಷರಿಗೆ ಸಹಾಯ ಮಾಡುವ ದ್ರೋಹಿಗಳನ್ನು ಶಿಕ್ಷಿಸಿದ್ದರು ಎಂದು ಇತಿಹಾಸದ ಪುಟಗಳನ್ನು ತೆರೆದರು. ಸರ್ ಅಲ್ಲಾಮಾ ಇಕ್ಬಾಲ್ ಅವರು ರಚಿಸಿದ ಸಾರೆ ಜಹಾಂ ಸೆ ಅಚ್ಚಾ ಹಿಂದು ಸಿತಾರಾ ಹಮಾರಾ ಕವಿತೆ ಮತ್ತು ಮೌ. ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ ಮಂತ್ರಿಗಳಾಗಿ ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಇನ್ನೋರ್ವ ಅತಿಥಿ ರೈತ ಸಂಘ, ಹಸಿರು ಸೇನೆಯ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ಜಾತಿಭೇದ ಮಾಡದೇ ಎಲ್ಲ ಮಹಾತ್ಮರ ಜಯಂತಿಗಳಲ್ಲಿ ಪಾಲ್ಗೊಂಡಾಗ ಮಾನವೀಯ ನೆಲೆಗಟ್ಟಿನ ವಿಷಯಗಳು ಗಮನಕ್ಕೆ ಬರುತ್ತವೆ. ನವಂಬರ್ ತಿಂಗಳ 9,10,11 ದಿನಾಂಕಗಳು ಈ ಮೂವರು ರತ್ನತ್ರಯರು ಹುಟ್ಟಿದ್ದ ಈ ತಿಂಗಳು ಶ್ರೇಷ್ಠವಾಗಿದೆ. ಹಜರತ ಟಿಪ್ಪು ಸುಲ್ತಾನ್ ಅವರು ದೇಶದ ಧೀರ ಯೋಧರಲ್ಲಿ ಗುರುತಿಸುವ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರ ಆಡಳಿತಾವಧಿಯಲ್ಲಿ ಸಾಮಾಜಿಕವಾಗಿ ಅಮೂಲಾಗ್ರ ಬದಲಾವಣೆ ತಂದು ಸಮಾನತೆಗೆ ಒತ್ತು ಕೊಟ್ಟಿದ್ದರು. ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದವರಲ್ಲಿ ಮೊದಲಿಗರಾಗಿದ್ದರು. ರಾಕೆಟ್ ಜನಕರಾಗಿ ನಾಸಾದವರು ಇವರ ಭಾವಚಿತ್ರ ಹಾಕುವ ಮೂಲಕ ವಿಶ್ವದಲ್ಲಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಮೌ. ಜಕ್ರಿಯಾಸಾಹಬ್, ದೇಶ ಸ್ವಾತಂತ್ರ್ಯ ಕಳೆದುಕೊಂಡು ಬ್ರಿಟಿಷರ ಗುಲಾಮರಾಗಬೇಕಾದರೆ ಒಳಗಿನ ದೇಶದ್ರೋಹಿಗಳೇ ಕಾರಣ. ಭವಿಷ್ಯದಲ್ಲಿ ನಾವು ಜಾತಿ-ಭೇದ ಮರೆತು ಒಂದಾಗದಿದ್ದರೆ ಮತ್ತೆ ಗುಲಾಮರಾಗುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ವೇದಿಕೆ ಮೇಲೆ ಅಧ್ಯಕ್ಷತೆ ಸಜನಸಾಬ ಪೆಂಡಾರಿ, ಜಾವೇದ್ ಭಾಗವಾನ, ಮಹೇಶ ಆರಿ, ನಜೀರ್ ಜಾರೆ, ನಜೀರ್ ಅತ್ತಾರ್, ಸೈಯದ್ ಯಾದವಾಡ, ಪರಶುರಾಮ ಮೇತ್ರಿ, ಜಮೀರ್ ಯಕ್ಸಂಬಿ, ಎಂ.ಆಯ್. ಮುಜಾವರ್, ಗಣಿ ನನದಿ ಮುಂತಾದವರಿದ್ದು ಮೀರಾ ತಟಗಾರ ನಿರೂಪಿಸಿ ವಂದಿಸಿದರು.