ಬಡಪಾಯಿ ಮಾರಾಟಗಾರರ ಹಣ್ಣುಗಳನ್ನೇ ಕದ್ದೊಯ್ದ ಕಳ್ಳರು
ಬಡಪಾಯಿ ಮಾರಾಟಗಾರರ ಹಣ್ಣುಗಳನ್ನೇ ಕದ್ದೊಯ್ದ ಕಳ್ಳರು
ಮಹಾಲಿಂಗಪುರ 25: ಕಳ್ಳರು ಬಡಪಾಯಿ ಮಾರಾಟಗಾರರ ಹಣ್ಣುಗಳನ್ನೇ ಕದ್ದೊಯ್ದು ಸಮೀಪದ ಬಸ್ ನಿಲ್ದಾಣದಲ್ಲಿ ಹಂಚಿಕೊಂಡಿರುವ ಸಚಿತ್ರ ಚಲನವಲನ ಅಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಕ್ಟೋಬರ್ 21 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಮೂವರು ಕಳ್ಳರು ಚೆನ್ನಮ್ಮ ವೃತ್ತ ಪಕ್ಕದಲ್ಲಿ ಕಿರುಕುಳ ಹಣ್ಣು ವ್ಯಾಪಾರಸ್ಥರು ಭದ್ರಪಡಿಸಿ 5/6 ತಳ್ಳುಗಾಡಿಯಲ್ಲಿಟ್ಟಿದ್ದ ಸೇಬು, ಕಿತ್ತಳೆ, ಪೇರು, ಮೋಸಂಬಿ, ಸಂತ್ರಾ ಇತ್ಯಾದಿ ಹಣ್ಣುಗಳು ಇನ್ನೊಂದು ಅಂಗಡಿಯಲ್ಲಿಯ ಚಿವಡ, ಸೇಂಗಾ ಇವುಗಳೂ ಸೇರಿ ಒಟ್ಟಾರೆ ಅಂದಾಜು ಮೊತ್ತ 20 ರಿಂದ 30 ಸಾವಿರ ರೂಗಳ ಮಾಲು ಕಳುವಾಗಿರಬಹುದು ಎಂದು ವ್ಯಾಪಾರಸ್ಥ ನಿಂಗಪ್ಪ ಹೇಳುತ್ತಾರೆ.
ಈ ವ್ಯಾಪಾರಸ್ಥರೆಲ್ಲರೂ ಕಡು ಬಡವರು. ಹಣ್ಣು ಮಾರಾಟ ಮಾಡುವ ಸಗಟು ವ್ಯಾಪಾರಸ್ಥರಿಂದ ಮಾಲು ಖರೀದಿಸಿ ಅಥವಾ ದಿನಗೂಲಿ ಮೇಲೆ ಕಿರುಕುಳ ವ್ಯಾಪಾರ ಮಾಡಿ ಸಂಜೆಯಾಗುತ್ತಲೇ ಮಾಲೀಕನಿಗೆ ಲೆಕ್ಕಪತ್ರ ಹೊಂದಿಸಿ ತಮಗೆ ಬರ್ತಕಂತಹ ಲಾಭ ಅಥವಾ ದಿನಗೂಲಿಯನ್ನು ಪಡೆದು ಜೀವನ ಸಾಗಿಸುವಂತಹವರು.
ಈ ಚಿಲ್ಲರೆ ಕಳ್ಳರು ಬಡಪಾಯಿಗಳ ಅಂಗಡಿಗಳನ್ನು ಒಡೆದು ಕಳ್ಳತನ ಮಾಡಿದ್ದಾರೆ ಎಂದರೆ ಇವರ ನೈತಿಕ ಮಟ್ಟವೇನು, ಯಾವತ್ತೂ ಸರ್ಕಲ್ನಲ್ಲಿ ಪೊಲೀಸರು, ಸಾರ್ವಜನಿಕರು ರಾತ್ರಿ ವೇಳೆಯಲ್ಲಿಯೂ ಇರುತ್ತಾರೆ, ಹೀಗಿದ್ದು ಕಳ್ಳತನವಾಗಿದೆ ಎಂದರೆ ಸೋಜಿಗದ ಸಂಗತಿಯಲ್ಲವೇ ಎಂದು ಸಾರ್ವಜನಿಕರ ಅಭಿಮತವಾಗಿದೆ.
ಕಳ್ಳತನವಾಗಿರುವ ವಸ್ತುಗಳ ಮೊತ್ತವೇನು ದೊಡ್ಡದಲ್ಲ, ಆದರೆ ಪೊಲೀಸ್ ಇಲಾಖೆಯ ಮತ್ತು ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯ ಮಾತ್ರ ಬಹಳ ಅಪಾಯಕಾರಿ. ಏಕೆಂದರೆ ಪಿಕೆಪಿಎಸ್ ಕಟ್ಟಡ ಸಮೂಹದಲ್ಲಿ ಸಾಲ ಸೋಲ ಮಾಡಿ ಕೋಟ್ಯಾಂತರ ಹಣ ತೊಡಗಿಸಿ ವ್ಯಾಪಾರಸ್ಥರು ಅಂಗಡಿ- ಮುಂಗಟ್ಟುಗಳನ್ನು ನಡೆಸುತ್ತಿದ್ದಾರೆ.
ಮುಂದೊಂದು ದಿನ ಇಂತಹ ಚಿಲ್ಲರೆ ಕಳ್ಳರು ದೊಡ್ಡ ಕಳ್ಳತನಕ್ಕೂ ಪ್ರಯತ್ನಿಸಿದರೆ, ವ್ಯಾಪಾರಸ್ಥರು ಬೀದಿಗೆ ಬೀಳುವ ಅಪಾಯವೂ ಇದೆ. ಆದಷ್ಟು ಬೇಗ ಇಂತಹ ಕಳ್ಳರನ್ನು ಗುರುತಿಸಿ ಕಸ್ಟಡಿಗೆ ಕಳಿಸಬೇಕೆಂದು ಮತ್ತು ಪಟ್ಟಣದಲ್ಲಿ ದಶಕದ ಹಿಂದೆ ಪಟ್ಟಣದ ವೃತ್ತಗಳಲ್ಲಿ ಪುರಸಭೆ ಲಕ್ಷಾಂತರ ಖರ್ಚು ಮಾಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಈಗ ಇವುಗಳು ನಿಸ್ಪ್ರಯೋಜಕವಾಗಿವೆ.
ಇವುಗಳ ದುರುಸ್ತಿ ಕಾರ್ಯಕ್ಕೆ ಪುರಸಭೆಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಆಗಾಗ ಮನವಿ ಪತ್ರಗಳನ್ನು ಕೂಡ ಸಲ್ಲಿಸುತ್ತ ಬಂದಿದ್ದಾರೆ. ಇಷ್ಟಾದರೂ ಪುರಸಭೆ ಅಥವಾ ಪೊಲೀಸ್ ಇಲಾಖೆಯವರಾಗಲಿ ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಕಾರಣ ಮಾತ್ರ ಗೊತ್ತಿಲ್ಲ. ಆದಷ್ಟು ಬೇಗ ಇವುಗಳ ರಿಪೇರಿ ಕೆಲಸ ನಡೆಸಿದಲ್ಲಿ ಅಪರಾಧ ಪ್ರಕರಣಗಳಿಗೆ ತಕ್ಕಮಟ್ಟಿನ ಕಡಿವಾಣ ಬಿದ್ದಂತೆಯೇ ಸರಿ ಎಂದು ಸ್ಥಳೀಯ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.