ಮಹಲಿಂಗಪುರ

ಮದರಸಾ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ: ಸುತಾರ್

ಮದರಸಾ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ: ಸುತಾರ್

ಪವಿತ್ರ ಕುರಾನ್ ಷರೀಫ್ ನೋಡದೆ ಪಾರಾಯಣ 

ಮಹಾಲಿಂಗಪುರ 22: ಜಗತ್ತಿನ ಧಾರ್ಮಿಕ ಬೃಹತ್ ಗ್ರಂಥಗಳಲ್ಲಿ ಒಂದಾದ 30ಅಧ್ಯಾಯಗಳನ್ನು ಹೊಂದಿ 6666ಶ್ಲೋಕಗಳನ್ನೊಳಗೊಂಡಿರುವ ಪವಿತ್ರ ಕುರಾನ್ ಷರೀಫ್ ಅನ್ನು ನೋಡದೆ ಪಾರಾಯಣ ಮಾಡುವ ಮದರಸಾ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾದದ್ದೆಂದು ಪ್ರವಚನಕಾರರಾದ ಪದ್ಮಶ್ರೀ ಇಬ್ರಾಹಿಂ ಸುತಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪವಿತ್ರ ರಂಜಾನ್ ಮಾಸ ಆರಂಭವಾಗಿರುವ ಈ ಸಂದರ್ಭದಲ್ಲಿ ಏಪ್ರಿಲ್ 21ರಂದು ನಗರದ ದಾರುಲ್-ಉಲೂಮ್ ಅಫಕಾರೆ ಹಕ್ ಅನ್ವಾರುಲ್ ಕುರಾನ್ ಮದರ್ಸ್ ವಿದ್ಯಾರ್ಥಿ ಕುರಾನ್ ಏ ಹಾಫೀಸ್ ಮೋಹಮ್ಮದ್ ಉಬೇದ್ ರಜಾ ಅವರು ಜಾಮಿಯಾ ಮಸ್ಜೀದ್ ನಲ್ಲಿ ನಡೆಯುತ್ತಿರುವ ತರಾವಿ ನಮಾಜ್ ನಲ್ಲಿ 09ದಿವಸಗಳಲ್ಲಿ ಕುರಾನ್ ಷರೀಫ್ ನ್ನು ಪಾರಾಯಣ ಮಾಡಿ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಅವರ ಭವಿಷ್ಯದ ಬದುಕು ಉಜ್ವಲವಾಗಲಿ ಎಂದು ಹಾರೈಸಿ ಆಶೀರ್ವಚನ ನೀಡಿದರು.

ಪತ್ರಕರ್ತರಾದ ಜೈರಾಂ ಶೆಟ್ಟಿ ಮಾತನಾಡಿ ನಗರ ಭಾವೈಕ್ಯತೆಗೆ ಹೆಸರು ಮಾಡಿದೆ. ಎಲ್ಲ ಧರ್ಮಗ್ರಂಥಗಳ ತಿರುಳು ಶಾಂತಿ ನೆಮ್ಮದಿಯನ್ನೇ ಬಯಸಿವೆ. ಆದ್ದರಿಂದ ವಿದ್ಯಾರ್ಥಿಗೆ ಹಾಗೂ ಮುಸಲ್ಮಾನ್ ಬಾಂಧವರಿಗೆ ಸಮಸ್ತ ಹಿಂದೂಗಳ ಪರವಾಗಿ ರಂಜಾನ್ ಹಬ್ಬದ ಶುಭಾಶಯಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಮದರಸಾದ ಮುಖ್ಯಗುರು ಮೌ. ಮಾಹಿರುಲ್ ಖಾದ್ರಿ ಹಾಗೂ ಸರ್ವ ಸದಸ್ಯರು ಎಲ್ಲ ಪತ್ರಕರ್ತರನ್ನು ಸನ್ಮಾನಿಸಿದರು.ಸಂಸ್ಥೆಯ ಅಧ್ಯಕ್ಷ ಫಾರೂಕ್ ಪಕಾಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಹುಮಾಯೂನ್ ಸುತಾರ್ ನಿರೂಪಿಸಿ ವಂದಿಸಿದರು.

ವೇದಿಕೆಯ ಮೇಲೆ ಬಾಷಾಸಾಬ ಅವಟಿ, ಹಾಜಿ ರಾಜೇಸಾಬ್ ಪಕಾಲಿ, ಸಿರಾಜಸಾಬ ಯಕ್ಸಂಬಿ, ಗಣಿ ನನದಿ, ಬಂದೇನವಾಜ್ ಪಕಾಲಿ, ಮೌಲಾಲಿ ಕೆಂಭಾವಿ, ಯಾಸೀನ್ ಮಾಲ್ದಾರ್, ಭಾಶಾಸಾಬ ಯಾದಗೂಡ, ಹಾಜಿ ಚಿರಾಕಸಾಬ ಕೋಲಾರ್, ಇಕಬಾಲ್ ಮದ್ದೀನ್ ಇನ್ನು ಮುಂತಾದವರಿದ್ದರು.

ಸುದ್ದಿ ಓದಿ