ಮಹಲಿಂಗಪುರ

ಸಂಗಾನಟ್ಟಿ ಗ್ರಾಮದ ಶೌಚಾಲಯ ದುರುಳರಿಂದ ಧ್ವಂಸ ! ಹೆಚ್ಚಿನ ತನಿಖೆಗೆ ಪಿಡಿಓ, ಪ್ರಕರಣ ದಾಖಲು

ಸಂಗಾನಟ್ಟಿ ಗ್ರಾಮದ ಶೌಚಾಲಯ ದುರುಳರಿಂದ ಧ್ವಂಸ ! ಹೆಚ್ಚಿನ ತನಿಖೆಗೆ ಪಿಡಿಓ, ಪ್ರಕರಣ ದಾಖಲು

ಮಹಾಲಿಂಗಪುರ 05: ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಮದಬಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಾನಟ್ಟಿ ಗ್ರಾಮದಲ್ಲಿ ಅಪರಿಚಿತರು ಸಾರ್ವಜನಿಕ ಶೌಚಾಲಯಗಳನ್ನು ಎಪ್ರಿಲ್ 03ರಂದು ನೆಲಸಮ ಮಾಡಿರುವ ಪ್ರಕರಣ ನಡೆದಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಮಗಳ ನೈರ್ಮಲೀಕರಣ ಹಾಗೂ ಬಯಲು ಮುಕ್ತ ಶೌಚಾಲಯಕ್ಕಾಗಿ ಪ್ರತಿವರ್ಷ ಕೋಟಿ ಕೋಟಿ ಪ್ರಜೆಗಳ ತೆರಿಗೆ ಹಣ ವ್ಯಯ ಮಾಡುತ್ತಿವೆ. ಆದರೆ ಕೆಲ ಅಪರಿಚಿತ ದುರುಳರು ತಮ್ಮ ವೈಯಕ್ತಿಕ ಅಥವಾ ರಾಜಕೀಯ ವೈಷಮ್ಯಕ್ಕೋ ಜನರ ಸೇವೆಯೇ ದೇವರ ಸೇವೆಯೆಂದು ಕಟ್ಟಿದ ಈ ಶೌಚಾಲಯಗಳನ್ನು ಧ್ವಂಸ ಮಾಡಿರುವುದು ಎಷ್ಟು ಸರಿ ಹಾಗೂ ಈ ಭಾಗದ ನೂರಾರು ಜನರು ಶೌಚಕ್ಕಾಗಿ ಬಯಲು ಪ್ರದೇಶವನ್ನು ಮತ್ತೊಮ್ಮೆ ಅವಲಂಬಿಸಬೇಕಾಗಿ ಬಂದಿರುವುದು ವಿಪರ್ಯಾಸದ ಸಂಗತಿ ಎಂದು ಗ್ರಾಮದ ಜನರು ಆಡಿಕೊಳ್ಳುತ್ತಿದ್ದಾರೆ. 

ಈ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಶೀಘ್ರ ಬಂಧಿಸಿ ಸರಕಾರದ ಬೊಕ್ಕಸಕ್ಕೆ ಆಗಿರುವ ಲಕ್ಷಾಂತರ ಹಾನಿಯನ್ನು ತುಂಬಿಕೊಳ್ಳಲು ಆಗ್ರಹಿಸಿದ್ದಾರೆ.

2017-18ರ ನರೇಗಾ ಹಾಗೂ 14ನೇ ಹಣಕಾಸು ಯೋಜನೆ ಅಡಿಯಲ್ಲಿ, ಬಸ್ ನಿಲ್ದಾಣದ ಹತ್ತಿರವಿರುವ, ಸ್ಮಶಾನದ ಪಕ್ಕದ 03ಲಕ್ಷ ರೂ.ಗಳ ವೆಚ್ಚದ 07 ಕೊಠಡಿಗಳ ಸಾರ್ವಜನಿಕ ಪುರುಷರ ಶೌಚಾಲಯಗಳು ಇವಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದಬಾವಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರೆಪ್ಪ ಸಾವಳಗಿ ಎಪ್ರಿಲ್ 4ರಂದು ಮಹಾಲಿಂಗಪುರ್ ಪೋಲೀಸ್ ಠಾಣೆಯಲ್ಲಿ ಸೂಕ್ತ ತನಿಖೆಗೆ ಪ್ರಕರಣ ದಾಖಲಿಸಿದ್ದಾರೆ. 

1984ರ ಸಾರ್ವಜನಿಕ ಆಸ್ತಿ ಹಾನಿ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ 52/2021 ಕಲಂ427 ಆಯ್.ಪಿ.ಸಿ ಸೆಕ್ಷನ್ 300 ಅಡಿಯಲ್ಲಿ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆಯನ್ನು ಸ್ಥಳೀಯ ಪೋಲೀಸರು ಕೈಗೊಂಡಿದ್ದಾರೆ.

ಸುದ್ದಿ ಓದಿ