ಸರ್ವಾಧಿಕಾರಿಯ ನಾಡಿನಲ್ಲಿ ಸಮಾನತೆಯ ಸಿದ್ಧಾಂತ

ಸರ್ವಾಧಿಕಾರಿಯ ನಾಡಿನಲ್ಲಿ ಸಮಾನತೆಯ ಸಿದ್ಧಾಂತ

“ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ” ಸುದ್ದಿಸಂಸ್ಥೆ ನನ್ನನ್ನು ಲಿಬಿಯಾದ ಬಗ್ಗೆ ಬರೆದು ಕೊಡಿ ಎಂದು ಕೇಳಿದಾಗ ನನಗೆ ತಕ್ಷಣ ಎಲ್ಲಿಂದ ಆರಂಭಿಸಬೇಕೆಂದು ತಿಳಿಯಲಿಲ್ಲ. ನಾನು ಮೊಟ್ಟ ಮೊದಲಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿ ಸಮಾನತೆಯ ಸಿದ್ಧಾಂತಕ್ಕೆ ಸಂಬಂಧಪಟ್ಟ ಹಾಗೆ ನನ್ನನ್ನು ಬಹುವಾಗಿ ಆಕರ್ಷಿಸಿದ ಬೋರ್ಡೊಂದರ ಸಾಲಿನಿಂದ ಆರಂಭಿಸಲೆ? ಅಥವಾ ಎರಡನೇ ದಿನವೇ ಟ್ಯಾಕ್ಶಿ ಡ್ರೈವರ್ ನೊಬ್ಬನನ್ನು “ಇಲ್ಲಿ ಟಾಯ್ಲೆಟ್ ಎಲ್ಲಿ?’ ಎಂದು ಅರೇಬಿಕ್ ಬಾರದ ನಾನು ಇಂಗ್ಲೀಷಿನಲ್ಲಿ ಕೇಳಿ ಅವನನ್ನು ಅರ್ಥ ಮಾಡಿಸಲು ಹೆಣಗಾಡಿದ ಪ್ರಸಂಗದಿಂದ ಬರೆಯಲೆ?

 ಲಿಬಿಯನ್ನರು ಮಾತಿಗೂ ಮುಂಚೆ ಸಲಾಂ ಅಲೀಕ್, ಕೆಫೆಹಲಾಲ್, ಕೋಯಿಸ್ ಎಂದೆಲ್ಲಾ ಆರಂಭಿಸಿ ನೀವು ಹೇಗಿದ್ದಿರಿ? ನಿಮ್ಮ ಅಪ್ಪ ಹೇಗಿದ್ದಾನೆ? ಅಮ್ಮ ಹೇಗಿದ್ದಾಳೆ? ಅಕ್ಕ ಹೇಗಿದ್ದಾಳಿ? ತಂಗಿ ಹೇಗಿದ್ದಾಳೆ? ಅಣ್ಣ ಹೇಗಿದ್ದಾನೆ? ತಮ್ಮ ಹೇಗಿದ್ದಾನೆ? ಎಂದೆಲ್ಲಾ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕೇಳುವದಲ್ಲದೆ ಕೊನೆಗೆ ನಿಮ್ಮ ಹೊಲದಲ್ಲಿರುವ ಕುರಿ, ಕೋಳಿ, ಒಂಟೆಗಳು ಸಹ ಹೇಗಿವೆ? ಎಂದೆಲ್ಲ ಪ್ರಾಣಿಗಳ ಬಗ್ಗೆಯೂ ವಿಚಾರಿಸಿಕೊಳ್ಳುವದು ನಮಗೆಲ್ಲಾ ತಮಾಷೆಯಾಗಿ ಕಂಡಿದ್ದನ್ನು ಬರೆಯಲೆ? ಅಥವಾ ಇವರಿಗೆ ಇಂಗ್ಲೀಷೇ ಬಾರದೆಂದುಕೊಂಡು ನಾವು ಕ್ಲಾಸಿರೂಮಿನೊಳಗೆ ಕಾಲಿಟ್ಟಾಗ ಅವರಲ್ಲಿ ಕೆಲವರ ಇಂಗ್ಲೀಷನ್ನು ಕೇಳಿ ನಾವೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದನ್ನು ಬರೆಯಲೆ? ಅಥವಾ ಯಾವುದೇ ಜಾಗತೀಕರಣದ ತೀವ್ರ ಪ್ರಭಾವಕ್ಕೊಳಗಾಗದೆ ಆಧುನಿಕ ಬದುಕನ್ನು ಬದುಕುತ್ತಾ ಇನ್ನೂ ಮೌಲ್ಯಗಳನ್ನು ಉಳಿಸಿಕೊಂಡಿರುವ ಇಲ್ಲಿನ ಬುಡಕಟ್ಟು ಜನರ ಬಗ್ಗೆ ಬರೆಯಲೆ? ಅಥವಾ ಮನೆಯಲ್ಲಿ ಹೀಟರ್ ಗಳನ್ನು ಹಾಕಿಕೊಂಡು ಕುಳಿತರೂ ಮೈ ನಡುಗಿಸುವಷ್ಟು ಕೆಟ್ಟದಾಗಿರುವ ಇಲ್ಲಿನ ಚಳಿಯ ಬಗ್ಗೆ ಬರೆಯಲೆ? ಇಲ್ಲ ಮೈ ಸುಟ್ಟುಹೋಗುವಷ್ಟು ಅನುಭವವಾಗುವ ಇಲ್ಲಿನ ರಣರಣ ಬಿಸಿಲಿನ ಬಗ್ಗೆ ಬರೆಯಲೆ? ಯಾವುದರ ಬಗ್ಗೆ ಮೊದಲು ಬರೆಯಲಿ ಎಂದು ಯೋಚಿಸುವಾಗಲೆಲ್ಲಾ ಗಡಾಫಿ ನೆನಪಾಗುತ್ತಾನೆ. ಆತನ ಕರಾಳ ಅಂತ್ಯ ನೆನಪಾಗುತ್ತದೆ. ನಲವತ್ತೆರೆಡು ವರ್ಷಗಳ ಕಾಲದ ಆತನ ಆಳ್ವಿಕೆ ನೆನಪಾಗುತ್ತದೆ. ಆತನ ಸಿದ್ಧಾಂತಗಳು ನೆನಪಾಗುತ್ತವೆ. ಹೇಗಿದ್ದವ ಹೇಗಾಗಿ ಹೋದ? ಲಿಬಿಯಾ ಎಂದರೆ ಗಡಾಫಿ, ಗಡಾಫಿ ಎಂದರೆ ಲಿಬಿಯಾ ಎಂದು ಹೇಳುತ್ತಲೇ ಹೇಳಹೆಸರಿಲ್ಲದಂತೆ ನಾಶವಾಗಿ ಹೋದನಲ್ಲ? ಅಂಥವನ ಬಗ್ಗೆ ಮೊದಲು ಬರೆಯದೇ ಲಿಬಿಯಾದ ಇನ್ಯಾವ ವಿಷಯದ ಬಗ್ಗೆ ಬರೆಯಲಿ? ಹೀಗಾಗಿ ಮೊದಲು ಆತನ ಬಗ್ಗೆ ಒಂದಷ್ಟು ಬರೆದು ಆಮೇಲೆ ಮುಂದೆ ಹೋದರಾಯಿತು ಎಂದು ಅವನ ಬಗ್ಗೆ ಬರೆಯುತ್ತಿದ್ದೇನೆ.

ನಾನು 2007 ರಲ್ಲಿ ಲಿಬಿಯಾದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿಳಿದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ ದೇಶ ಬಿಟ್ಟು, ಹೋಗಿ ಹೋಗಿ ಆ ಆಫ್ರಿಕಾ ದೇಶಕ್ಕೆ ಹೋಗತೀರಲ್ರಿ? ಬುದ್ದಿಯಿಲ್ಲ ನಿಮಗೆ”ಎಂದು ನಗಾಡಿದ್ದರು. ದುಡ್ದಿಗೆ, ಬುದ್ಧಿಗೆ ಆಫ್ರಿಕಾ ದೇಶ, ಯೂರೋಪ್ ದೇಶ, ಅರಬ್ ದೇಶ ಅಂತೆಲ್ಲಾ ಇರುತ್ತದೆಯೆ? ಎಲ್ಲಿ ನನ್ನ ಬುದ್ಧಿ ಬೆಲೆಬಾಳುತ್ತದೋ ಅಲ್ಲಿಗೆ ಹೋಗುವವನು ನಾನು. ಬುದ್ಧಿಗೆ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬರುವ ದುಡ್ದಿಗೆ ಜಾಗದ ಹಂಗಿಲ್ಲ. ಅಥವಾ ’ಕೆಲಸ ಮಾಡಿದರೆ ನಮ್ಮ ದೇಶದಲ್ಲಿಯೇ ಮಾಡಬೇಕು’ಎನ್ನುವ ಭಯಂಕರ ಸ್ವಾಭಿಮಾನದ ಕಟ್ಟಿಗೆ ಬಿದ್ದು ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವಷ್ಟು ಕಟ್ಟಾ ದೇಶಾಭಿಮಾನಿಯಾಗಲಿ ಅಥವಾ ಸಿಗದೇ ಇರುವ ಅವಕಾಶವನ್ನು ದೇಶಾಭಿಮಾನದ ನೆಪವೊಡ್ಡಿ ಹೋಗಲಿಲ್ಲ ಎಂದು ಹೇಳುವ ಸೋಗಲಾಡಿ ಮನುಷ್ಯನಾಗಲಿ ನಾನಲ್ಲವಾದ್ದರಿಂದ ಅವರ ಮಾತಿಗೆ ನನ್ನ ನಿರ್ಲಕ್ಷ್ಯ ನಗೆಯೊಂದನ್ನು ಉತ್ತರವಾಗಿ ನೀಡಿ ಇಲ್ಲಿಗೆ ಹಾರಿ ಬಂದಿದ್ದೆ.

ಹೋಗುವ ಮುನ್ನ ನೂರು ಜನ ನೂರು ಮಾತನಾಡಿದ್ದರು. “ಅಯ್ಯೋ ಆಫ್ರಿಕಾ ದೇಶಾನಾ? ಅಯ್ಯೋ ರಾಮ! ಮುಗಿದೇ ಹೋಯ್ತು ನಿಮ್ಮ ಕಥೆ! ಅದೊಂದು ಕೆಟ್ಟ ಖಂಡ! ಅಲ್ಲಿಗ್ಯಾಕ್ರಿ ಹೋಗ್ತೀರಾ?” ಎಂದು ನನ್ನ ಸಹದ್ಯೋಗಿಯೊಬ್ಬರು ಇಡೀ ಆಫ್ರಿಕಾ ಖಂಡವನ್ನೇ ಸುತ್ತಿ ಬಂದವರ ತರ ಅಧಿಕೃತವಾಗಿ ಘೋಷಿಸಿ ಬಿಟ್ಟರು. ಇನ್ನೊಬ್ಬರು “ಅಲ್ಲಿ ಯೆಲೋ ಫಿವರ್, ಏಡ್ಸ್ ತುಂಬಾ ಜಾಸ್ತೀರೀ. ಹುಷಾರು!” ಎಂದು ಎಚ್ಚರಿಸಿದ್ದರು. ಇನ್ನು ಕೆಲವರು “ಅಲ್ಲಿ ಕಳ್ಳತನ, ಕೊಲೆ ಎಲ್ಲಾ ತುಂಬಾ ಕಾಮನ್ ಅಂತೆ. ಯಾವುದಕ್ಕೂ ಹುಶರಾಗಿರಿ. ರಾತ್ರಿ ಹೊರಗೆ ಒಬ್ರೇ ಎಲ್ಲೂ ಓಡಾಡಬೇಡಿ”ಎಂದು ನನ್ನ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಾ ಒಂದಷ್ಟು ಉಪದೇಶಿಸಿದ್ದರು. ಮತ್ತೆ ಕೆಲವರು “ಫಾರಿನ್‍ಗೆ ಹೋಗೋದಾದರೆ UK, USA, ಆಸ್ಟ್ರೀಲಿಯಾ, ಯೂರೋಪ್ ದೇಶಗಳಿಗೆ  ಮಾತ್ರ ಹೋಗಬೇಕಪ್ಪ, ಅದು ಬಿಟ್ಟು ಬೇರೆ ದೇಶಗಳಿಗೆ ಹೋಗೋದ್ರಲ್ಲಿ ಏನು ಸುಖ ಇದೆ?” ಎಂದು ವ್ಯಂಗ್ಯವಾಡಿದ್ದರು. ಇನ್ನು ಕೆಲವರು ‘ಅದು ನಿರಂಕುಶವಾದಿ ಮೌಮೂರ್ ಗಡಾಫಿಯ ಹಿಡಿತದಲ್ಲಿರುವ ದೇಶ, ಅಲ್ಲಿನ ಸ್ಥಿತಿಗತಿಗಳು ಅಷ್ಟೇನೂ ಚನ್ನಾಗಿರಲಿಕ್ಕಿಲ್ಲ, ಅಲ್ಲಿಗ್ಯಾಕ್ರೀ ಹೋಗ್ತೀರಿ?’ ಎಂದು ನನ್ನ ಬಗ್ಗೆ ಭಾರಿ ಕಾಳಜಿವಹಿಸಿ ಮಾತನಾಡಿದ್ದರು. ಏನಾದರಾಗಲಿ, ಸಿಕ್ಕ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ? ಎಂದುಕೊಂಡು ನಾನು ಲಿಬಿಯಾಗೆ ಹೊರಟು ಬಂದಿದ್ದೆ. ಮೇಲಾಗಿ ಗಡಾಫಿ ಒಬ್ಬ ತಿಕ್ಕಲು, ವಿಲಕ್ಷಣ ವ್ಯಕ್ತಿ, ವಿಕ್ಷಿಪ್ತ ಮನಸ್ಸಿನವನು ಹಾಗೂ ಅಮೇರಿಕನ್ನರಂಥ ಅಮೆರಿಕನ್ನರಿಗೆ ಸೆಡ್ಡು ಹೊಡೆದು ನಿಲ್ಲುವವನು ಎಂದು ಕೇಳಿ ತಿಳಿದುಕೊಂಡಿದ್ದೆ. ಈ ತೆರದ ವಿಲಕ್ಷಣ ವ್ಯಕ್ತಿಗಳು ತುಂಬಾ ಇಂಟರೆಸ್ಟಿಂಗ್ ಮಾತ್ರವಲ್ಲ ಅಸಾಮಾನ್ಯ ಸಾಧಕರು ಕೂಡ ಆಗಿರುತ್ತಾರೆ. ಅವನ ಬಗ್ಗೆ ಒಂದಷ್ಟು ಹತ್ತಿರದಿಂದ ತಿಳಿಯವ ಕುತೂಹಲವಿತ್ತು ಹಾಗೂ ಅಮೆರಿಕನ್ನರಂಥ ಅಮೇರಿಕನ್ನರನ್ನೇ ಎದುರುಹಾಕಿಕೊಂಡು ಬದುಕವವನ ನಾಡಿನಲ್ಲಿ ಜಿವನ ಹೇಗಿರುತ್ತದೆ? ಒಮ್ಮೆ ನೋಡಿಯೇ ಬಿಡೋಣವೆಂದುಕೊಂಡು ಇಲ್ಲಿಗೆ ಹಾರಿ ಬಂದಿದ್ದೆ.

ಮೆಡಿಟೇರಿಯನ್ ಸಮುದ್ರ ತಟದಲ್ಲಿ ಲೇಖಕರು

ನಾನು ಮೊಟ್ಟಮೊದಲಬಾರಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಥಟ್ಟನೆ ನನ್ನ ಗಮನ ಸೆಳೆದಿದ್ದು ಅಲ್ಲಿ ನೇತುಹಾಕಿದ್ದ ಬೋರ್ಡೊಂದರ ಮೇಲೆ ಬರೆದ ಸಾಲು. ಅದು ಅಲ್ಲಿನ ಕೆಳದರ್ಜೆಯ ಕೆಲಸಗಾರರ ಕುರಿತಾಗಿತ್ತು. ಅದು ಹೀಗಿತ್ತು: “Do not call them wage workers. They are your partners.” ಈ ಸಾಲನ್ನು ಓದಿ “ಅರೆರೆ! ಇದೇನಿದು? ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಇಂಥದೊಂದು ಬೋರ್ಡು? ಇಂಥ ಒಂದು ಸಮಾನತೆಯ ಸಿದ್ಧಾಂತ ಇಲ್ಲಿ ಜಾರಿಯಲ್ಲಿರಲು ಸಾಧ್ಯವೆ?” ಎಂದು ಆಶ್ಚರ್ಯ ಮತ್ತು ಅನುಮಾನಗಳೆರೆಡನ್ನೂ ಒಟ್ಟಿಗೆ ವ್ಯಕ್ತಪಡಿಸಿದ್ದೆ. ಆದರೆ ನಾನು ಯಾವಾಗ ಲಿಬಿಯನ್ನರೊಟ್ಟಿಗೆ ಕೆಲಸ ಮಾಡತೊಡಗಿದನೋ ಆಗ ಇದು ಬರೀ ಬೋರ್ಡಲ್ಲಿ ಬರಿದಿಟ್ಟ ಮಾತಲ್ಲ, ಅಕ್ಷರಶಃ ಜಾರಿಯಲ್ಲಿರುವ ಮಾತು ಎಂಬ ಸತ್ಯದ ಅರಿವಾಯಿತು. ಇಲ್ಲಿ ಎಲ್ಲರೂ ಸಮಾನರೇ. ಮೇಲಾಧಿಕಾರಿ, ಕೆಳಾಧಿಕಾರಿ ಎಂಬ ಬೇಧ ಭಾವ ಇಲ್ಲ. ಅಥವಾ ಮೇಲಾಧಿಕಾರಿಯಾದವನು ತನ್ನ ಕೈ ಕೆಳಗಿರುವ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವಂತಿಲ್ಲ. ಒಬ್ಬ ಅಟೆಂಡರ‍್ ನಿಂದ ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ ಯಾವುದೇ ಹಿಂಜರಿಕೆಯಿಲ್ಲದೆ ಕುಳಿತುಕೊಳ್ಳುತ್ತಾನೆ. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರನ್ನು ಬಳಸುತ್ತಾನೆ. ಆತನೊಟ್ಟಿಗೆ ಕುಳಿತು ಕಾಫಿ ಕುಡಿಯುತ್ತಾನೆ. ಹಾಗೆಯೆ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸ ಮಾಡಿಸಿಕೊಳ್ಳುತ್ತಾನೆ. ಒಂದುವೇಳೆ ಅವನು ಬೇರೆ ಕೆಲಸದಲ್ಲಿ ಮಗ್ನನಾಗಿದ್ದರೆ ಅವನ ಕೆಲಸ ಮುಗಿಯುವವರೆಗೂ ಈತನು ಕಾಯಬೇಕಾಗುತ್ತದೆ. ಇದೆಲ್ಲ ಅಭ್ಯಾಸವಿರದ ನಮಗೆ ಇದು ಮೊದಮೊದಲು ವಿಚಿತ್ರವಾಗಿ ಕಂಡಿತು. ಆಮೇಲಾಮೇಲೆ ರೂಢಿಯಾಯಿತು.

ನಮ್ಮ ಕಾಲೇಜಿನ ಪರೀಕ್ಷಾ ವಿಭಾಗದ ಮುಖ್ಯಸ್ಥ (ಕಂಟ್ರೋಲರ್ ಆಫ್ ಎಕ್ಸಾಮಿನಿಶನ್ ಬೋರ್ಡ್) ಯಾವುದೇ ಸಂಕೊಚವಿಲ್ಲದೆ ಒಬ್ಬ ಗುಮಾಸ್ತನ ಕೋಣೆಯಲ್ಲಿ ಕುಳಿತು ಅವನೊಟ್ಟಿಗೆ ಆತ್ಮೀಯವಾಗಿ ಹರಟೆ ಹೊಡೆಯುವದನ್ನು ನೋಡಿ ಇದೇನಿದು? ಒಂದು ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ಈ ತರ ಕೆಳದರ್ಜೆಯ ಅಧಿಕಾರಿಯೊಟ್ಟಿಗೆ ಅದೂ ಅವನ ಚೇಂಬರ‍್ ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾನೆ? ಎಂದು ಬೆರಗಾಗಿದ್ದೆವು. ಹಾಗೆ ನೋಡಿದರೆ ಇಂಥದೊಂದು ಪರಿಕಲ್ಪನೆ ಸೋ ಕಾಲ್ಡ್ ಪ್ರಜಾರಾಜ್ಯ ಎನಿಸಿಕೊಂಡ ನಮ್ಮ ದೇಶದಲ್ಲಿ ಇರಬೇಕು (ಇಲ್ಲ ಎನ್ನುವದು ಬೇರೆ ಮಾತು). ಆದರೆ ಸರ್ವಾಧಿಕಾರಿಯ ನಾಡಿನಲ್ಲಿದ್ದಿದ್ದುನ್ನು ಕಂಡು ಆಶ್ಚರ್ಯಪಟ್ಟಿದ್ದೆ. ಅಷ್ಟೇ ಏಕೆ? ನಾನು ಕೆಲಸ ಮಾಡುವ ‘ಘಾತ್’ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿಯಾಗಿದ್ದರು. ಅವರು ಮಂತ್ರಿ ಎಂಬ ಕಾರಣಕ್ಕೆ ಅವರಿಗೆ ಪ್ರತ್ಯೇಕ ಸರಕಾರಿ ಕಾರ್ ಆಗಲಿ, ಬೇರೆ ಸೌಲತ್ತುಗಳಾಗಲಿ ಇರಲಿಲ್ಲ. ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಬ್ಯಾಂಕುಗಳಲ್ಲಿ ಮತ್ತು ಸರಕಾರಿ ಕಛೇರಿಗಳಲ್ಲೂ ಅಷ್ಟೆ, ಅವರಿಗೆ ಯಾವುದೇ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸರದಿಯಲ್ಲಿ ನಿಂತು ತಮ್ಮ ಕೆಲಸ ಮುಗಿಸಿಕೊಳ್ಳಬೇಕಿತ್ತು. ಒಂದೊಂದು ಸಾರಿ ಕಾರು ಕೆಟ್ಟುಹೋದರೆ ಅವರು ನಡೆದುಕೊಂಡು ಬಂದೇ ಪಾಠ ಮಾಡಿ ಹೋಗುತ್ತಿದ್ದರು. ಈ ತೆರದ ಸಮಾನತೆಯ ಪರಿಕಲ್ಪನೆ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಹೇಗೆ ಇರಲು ಸಾಧ್ಯ? ಎಂದು ಯೋಚಿಸುತ್ತಿರುವಾಗಲೆ ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ಗಡಾಫಿಯ ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ವಿಚಾರಧಾರೆಗಳನ್ನೊಳಗೊಂಡ ಅವನ ಪುಸ್ತಕ “ದಿ ಗ್ರೀನ್ ಬುಕ್” ಸಿಕ್ಕಿತು. ಅದು ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿತ್ತು. ಓದುತ್ತಿದ್ದಂತೆ ಆತನ ವಿಚಾರಧಾರೆಗಳಿಗೆ ನಿಬ್ಬೆರಗಾಗಿದ್ದೆ. ಅವನ್ನು ಗಡಾಫಿ ಬರೀ ಪುಸ್ತಕದಲ್ಲಿ ಮಾತ್ರ ಹೇಳಿ ಸುಮ್ಮನೆ ಕೂರಲಿಲ್ಲ. ಅಕ್ಷರಶಃ ಜಾರಿಗೆ ತಂದ. ಪರಿಣಾಮವಾಗಿ ಈ ಸಮಾನತೆಯ ಕಲ್ಪನೆ ಜನರ ಮನದಲ್ಲಿ ಗಟ್ಟಿಯಾಗಿ ತಳವೂರಿತು.

ಹಾಗಾದರೆ ಇಷ್ಟೆಲ್ಲ ಸಮಾಜವಾದದ ಸಿದ್ಧಾಂತವನ್ನು ಬೋಧಿಸುತ್ತಿದ್ದ ಗಡಾಫಿ ತನ್ನ ಅಧಿಕಾರ ಗದ್ದುಗೆಯನ್ನೇಕೆ ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡದೆ ಸಾಯಬಾರದ ಸಾವು ಸತ್ತ? ದುರಂತವೆಂದರೆ ಗಡಾಫಿಯನ್ನು ಕನ್ನಡದ ಮಾಧ್ಯಮಗಳೂ ಸೇರಿದಂತೆ ಜಗತ್ತಿನ ಎಲ್ಲ ಮಾಧ್ಯಮಗಳು ಮುಂಚಿನಿಂದಲೂ ಒಬ್ಬ ಖಳನಾಯಕನಂತೆ ಚಿತ್ರಿಸಿಕೊಂಡು ಬಂದವು. ನಾವೆಲ್ಲ ದೂರದಲ್ಲಿ ಕುಳಿತುಕೊಂಡು ಈ ಇಂಗ್ಲೀಷ್ ಚಾನಲ್‍ಗಳು ಹೇಳುವದೆಲ್ಲಾ ಸತ್ಯ ಎಂದು ನಂಬುತ್ತೇವೆ. ಆದರೆ ಇಲ್ಲಿಗೆ ಬಂದು ಸುಮ್ಮನೆ ಒಮ್ಮೆ ಜನರನ್ನು ಕೇಳಿ ನೋಡಿ. ಅವರು ಈ ಇಂಗ್ಲೀಷ್ ಚಾನಲ್‍ಗಳಿಗೆ ಹಿಡಿ ಹಿಡಿ ಶಾಪ ಹಾಕುತ್ತಾರೆ. ಅವರ ಪ್ರಕಾರ ಅವು ಬೋಗಸ್, ಬಂಡಲ್! ಬರೀ ಅಮೆರಿಕಾದವರು ಮತ್ತು ಯೂರೋಪಿಯನ್ನರ ಪರವಾಗಿ ಕೆಲಸ ಮಾಡುವಂಥವು ಎಂದು ಕಿಡಿಕಾರುತ್ತಾರೆ. ಆದರೆ ಬಹಳಷ್ಟು ಜನಕ್ಕೆ ಗೊತ್ತಿರದ ಮತ್ತು ಮಾಧ್ಯಮಗಳು ಬಹಿರಂಗಪಡಿಸದ ಸಂಗತಿಯೇನೆಂದರೆ ಲಿಬಿಯಾದಲ್ಲಿ ಎದ್ದ ಕ್ರಾಂತಿ ತೀವ್ರ ಸ್ವರೂಪಪಡೆದುಕೊಳ್ಳುತ್ತಿದ್ದಂತೆ ಗಡಾಫಿ ಕೆಲವು ಬಂಡುಕೋರರ ಮುಖಂಡರನ್ನು ಕರೆದು “ಆಯ್ತು. ನಾನು ಅಧಿಕಾರ ಬಿಟ್ಟುಕೊಡುತ್ತೇನೆ. ನೀವು ಹೇಳುವಂತೆ ಚುನಾವಣೆ ನಡೆಸೋಣ. ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ಅವರು ಅಧಿಕಾರವಹಿಸಿಕೊಳ್ಳೋಣ.” ಎಂದು ಹೇಳಿದನಂತೆ. ಆದರೆ ಬಂಡುಕೋರರಿಗೆ ಗಡಾಫಿ ಏನಾದರು ಚುನಾವಣೆಗೆ ನಿಂತರೆ ಖಂಡಿತ ಅವನೇ ಆರಿಸಿ ಬರುತ್ತಾನೆಂಬುದು ಚನ್ನಾಗಿ ಗೊತ್ತಿದ್ದರಿಂದ “ಬೇಡ. ನಾವು ಹೋರಾಟ ಮಾಡಿಯೇ ಗೆಲ್ಲುತ್ತೇವೆ” ಎಂದು ತಮ್ಮ ಹೋರಾಟ ಮುಂದುವರಿಸಿದರು. ಜೊತೆಗೆ ಇದನ್ನೇ ಕಾಯ್ದುಕೊಂಡಿದ್ದ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಅವರಿಗೆ ಬೆಂಬಲ ನೀಡಿದರು. ಹೀಗಾಗಿ ಲಿಬಿಯಾದಲ್ಲಿ ಒಂದು ದೊಡ್ಡ ಕ್ರಾಂತಿಯೇ ನಡೆದುಹೋಯಿತು. ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿ ಹೆಮ್ಮೆಯಿಂದ ಬೀಗಿದರು.

ಆದರೆ ಇಲ್ಲಿಗೆ ಬಂದು ಈ ವಿಷಯದ ಕುರಿತಂತೆ ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸಿ ನೋಡಿ. ಅವರು ಕೊಡುವ ಚಿತ್ರಣವೇ ಬೇರೆ. “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ಮೇಲೆ ದ್ವೇಷವಿತ್ತು. ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಈ ಹಿಂದೆ 1988ರಲ್ಲಿ ಸ್ಕಾಟ್ಲೆಂಡ್‍ನ ಪಾನ್ ಅಮ್ ವಿಮಾನದಲ್ಲಿ ಬಾಂಬಿಟ್ಟ ಅರೋಪ ಲಿಬಿಯಾದ ಮೇಲಿತ್ತು. ಆ ಘಟನೆಯಲ್ಲಿ ಸುಮಾರು 250 ಜನ ಅಮೆರಿಕನ್ನರು ಸತ್ತಿದ್ದರು. ಅದನ್ನು ಬಹುಕಾಲ ಗಡಾಫಿ ನಿರಾಕರಸುತ್ತಲೇ ಬಂದಿದ್ದ. ಈ ಕಾರಣಕ್ಕಾಗಿ ಲಿಬಿಯಾದ ಮೇಲೆ ಅಮೆರಿಕಾ ಹನ್ನೆರೆಡು ವರ್ಷಗಳ ಕಾಲ ದಿಗ್ಬಂಧನ ಹೇರಿತ್ತು. ತದನಂತರದಲ್ಲಿ ಗಡಾಫಿ ಆರೋಪಿಗಳನ್ನು ಅವರಿಗೆ ಒಪ್ಪಿಸಿ ಮೃತರ ಕುಟುಂಬಕ್ಕೆ ಸುಮಾರು 2.7 ಬಿಲಿಯನ್ ಡಾಲರಿನಷ್ಟು ಪರಿಹಾರ ನೀಡಿದ್ದ. ಆದರೆ ಗಡಾಫಿ ಲಿಬಿಯಾದಲ್ಲಿ ಕ್ರಾಂತಿ ಏಳುವ ಒಂದು ವರ್ಷ ಮುಂಚೆ ಅಮೆರಿಕಾ ಸರಕಾರವನ್ನು ದಿಗ್ಬಂಧನದ ಸಮಯದಲ್ಲಿ ಲಿಬಿಯಾಕ್ಕೆ ಉಂಟಾದ ನಷ್ಟವನ್ನು ಕಟ್ಟಿಕೊಡಿ ಇಲ್ಲವೇ ನಿಮ್ಮ ತೈಲ ಕಂಪನಿಗಳಿಗೆ ಬೀಗ ಜಡಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದ. ಆದರೆ ಇದಕ್ಕೆ ಕ್ಯಾರೆ ಅನ್ನದೆ ಅಮೆರಿಕಾ ಸರಕಾರ ತನ್ನ ಎಂದಿನ ಕಾಯಕವನ್ನು ಮುಂದುವರಿಸಿತ್ತು. ಸಿಟ್ಟಿಗೆದ್ದ ಗಡಾಫಿ ಹೇಳಿದಂತೆ ಅಕ್ಟೋಬರ್ ತಿಂಗಳಲ್ಲಿ ಅಂದರೆ ಕ್ರಾಂತಿ ಆರಂಭವಾಗುವದಕ್ಕೆ ಮೂರು ತಿಂಗಳು ಮುಂಚೆ ಲಿಬಿಯಾದಲ್ಲಿದ್ದ ಅಮೆರಿಕಾದ ಕಂಪನಿಗಳಿಗೆ ಬೀಗ ಜಡಿದೇ ಬಿಟ್ಟ. ಇದು ಅಮೆರಿಕನ್ನರನ್ನು ರೊಚ್ಚಿಗೆಬ್ಬಿಸಿತ್ತು.

ಇನ್ನೊಂದು ವಿಷಯ ನಿಮಗೆ ಗೊತ್ತಿರಲಿ. 1943 ರವರೆಗೆ ಲಿಬಿಯಾ ಇಟ್ಯಾಲಿಯನ್‍ರ ಅಧೀನಕ್ಕೆ ಒಳಪಟ್ಟಿತು. ಆದರೆ ಎರಡನೇ ಮಹಾಯುದ್ಧದಲ್ಲಿ ಯಾವಾಗ ಇಟಲಿ ಸೋತಿತೋ ಅಂದಿನಿಂದ ಲಿಬಿಯಾ ಒಕ್ಕೂಟ ರಾಷ್ಟ್ರಗಳ ಅಧೀನಕ್ಕೆ ಒಳಪಟ್ಟಿತು. ಮುಂದೆ ಅಂದರೆ ಡಿಸೆಂಬರ್ 24, 1951 ರಂದು ಲಿಬಿಯಾವನ್ನು ಈ ಎಲ್ಲ ದಾಸ್ಯದಿಂದ ಬಿಡುಗಡೆಗೊಳಿಸಿ ಅದನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ ತಮಗೆ ಬೇಕಾದವನನ್ನೇ ರಾಜನನ್ನಾಗಿ ಮಾಡಿದರು. ದೊರೆ ಇದ್ರೀಸ್ ಇವರೆಲ್ಲರ ಕೈಗೊಂಬೆಯಾಗಿ ಉಳಿದ. ಆದರೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ಲಿಬಿಯಾದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡನಂತರ ಇಟ್ಯಾಲಿಯನ್‍ರಿಗೆ ಮೂವತೈದು ವರ್ಷಗಳ ಕಾಲ ತಮ್ಮ ದೇಶವನ್ನು ಆಕ್ರಮಿಸಿಕೊಂಡು ಇಲ್ಲಿಯ ಸಂಪತ್ತನ್ನು ಕಬಳಿಸಿದ್ದಕ್ಕಾಗಿ ಪರಿಹಾರವನ್ನು ಕೊಡಿ ಎಂದು ಗಂಟುಬಿದ್ದ.

ಅವರು ಬಹುಕಾಲ ನಿರಾಕರಿಸುತ್ತಲೇ ಬಂದರು. ಆದರೆ ಹಟ ಬಿಡದ ಗಡಾಫಿ ತನ್ನ ಚಾಣಾಕ್ಷತನದಿಂದ ಕ್ರಮೇಣ ಅವರನ್ನು ತೈಲ ಮತ್ತು ಅನಿಲಕ್ಕಾಗಿ ಲಿಬಿಯಾದ ಮೇಲೆ ಸಂಪೂರ್ಣವಾಗಿ ಅವಲಂಬಿತರನ್ನಾಗಿ ಮಾಡಿದ. ನಂತರ ತೀರ ಇತ್ತೀಚಿಗಷ್ಟೇ ಅಂದರೆ ಲಿಬಿಯಾದಲ್ಲಿ ಕ್ರಾಂತಿ ಏಳುವ ಮೂರು ವರ್ಷಗಳ ಮುಂಚೆ ನೀವು ನಮ್ಮ ದೇಶದ ಸಂಪತ್ತನ್ನು ಕಬಳಿಸಿದ್ದಕ್ಕಾಗಿ ಪರಿಹಾರ ಕೊಡಿ ಇಲ್ಲವಾದರೆ ನಿಮ್ಮೊಟ್ಟಿಗಿನ ತೈಲ ಒಪ್ಪಂದವನ್ನು ಮುರಿಯಬೇಕಾಗುತ್ತದೆ ಎಂದು ಅವರಿಗೆ ಬೆದರಿಕೆ ಹಾಕುವದರ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ. ಲಿಬಿಯಾಕ್ಕೆ ಸಮೀಪದಲ್ಲಿದ್ದ ಇಟಲಿಗೆ ಅಲ್ಲಿಂದ ತೈಲವನ್ನು ತರಿಸಿಕೊಳ್ಳುವ ಖರ್ಚುವೆಚ್ಚ ಅತ್ಯಂತ ಕಡಿಮೆ ದರದಲ್ಲಿ ಆಗುತ್ತಿತ್ತು. ಒಂದು ವೇಳೆ ಒಪ್ಪಂದವನ್ನು ಮುರಿದು ದೂರದ  ರಾಷ್ಟ್ರಗಳಿಂದ ತೈಲವನ್ನು ತರಿಸಿಕೊಂಡಿದ್ದರೆ ಬಲು ದುಬಾರಿಯಾಗುತ್ತಿತ್ತು. ಹಾಗಾಗಿ ಇಟಲಿಯು ಅಳೆದು ತೂಗಿ ನೋಡಿ ಕೊನೆಗೆ ಪರಿಹಾರವನ್ನು ಕೊಟ್ಟು ಲಿಬಿಯಾದೊಂದಿಗೆ ವ್ಯಾಪಾರವನ್ನು ಮುಂದುವರಿಸುವದೇ ವಾಸಿ ಎಂಬ ನಿರ್ಧಾರಕ್ಕೆ ಬಂತು. ಆಗ ಗಡಾಫಿ ಅವರಿಗೆ ಪ್ರತಿ ವರ್ಷ 320 ಬಿಲಿಯನ್ ಡಾಲರ್‍ಗಳಷ್ಟು ಪರಿಹಾರವನ್ನು ಕೊಟ್ಟು ವ್ಯಾಪಾರವನ್ನು ಮುಂದುವರಿಸಬಹುದು ಎಂದು ಹೇಳಿದ. ಇಟಲಿಯು ಒಳಗೊಳಗೆ ಕೋಪದಿಂದ ಕುದಿದರೂ ಅವನ ಒಪ್ಪಂದಕ್ಕೆ ಬಗ್ಗಲೇಬೇಕಾಯಿತು. ಆ ಒಪ್ಪಂದದ ಪ್ರಕಾರ ಅವರು ಲಿಬಿಯಾದಲ್ಲಿ ಕ್ರಾಂತಿಯೇಳುವ ಮೊದಲ ಮೂರು ವರ್ಷ ಅವನಿಗೆ ಪರಿಹಾರ ಕೊಟ್ಟರು. ಇದು ಅವರ ಆರ್ಥಿಕತೆಗೆ ಮತ್ತು ಅವರ ದೊಡ್ಡಸ್ತಿಕೆಗೆ ಬಲವಾದ ಏಟನ್ನು ಕೊಟ್ಟಿತು. ಹಾಗಾಗಿ ಅವರು ಕೂಡಾ ಅವನನ್ನು ಕಿತ್ತೊಗೆಯಲು ಸರಿಯಾದ ಸಮಯಕ್ಕಾಗಿ ಕಾದು ಕೂತರು.

ಮೇಲಾಗಿ ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತ ಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ. ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆಗೆ ಭಾರಿ ನಷ್ಟವುಂಟಾಗಲಿತ್ತು. ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಜೊತೆಗೆ ಲಿಬಿಯಾದ ತುಂಬಾ ಟ್ರೇನುಗಳನ್ನು ಓಡಾಡಿಸಲು ಯೊಜನೆಯೊಂದನ್ನು ಹಾಕಿದ್ದ. ಬೆಂಗಾಜಿಯನ್ನು ಮೇಲ್ದರ್ಜೆಗೆ ಏರಿಸಿ ವಿಶ್ವದ ಸುಂದರ ನಗರಗಳ ಸಾಲಿಗೆ ಸೇರಿಸುವವನಿದ್ದ. ಟ್ರಿಪೋಲಿಯಲ್ಲಿ ದುಬೈ ವಿಮಾನ ನಿಲ್ದಾಣಕ್ಕಿಂತ ದೊಡ್ಡದಾದ ವಿಮಾನ ನಿಲ್ದಾಣವೊಂದನ್ನು ಕಟ್ಟಿಸುತ್ತಲಿದ್ದ. ಹೀಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದ. ಮೇಲಾಗಿ ಆತ ಅಧಿಕಾರಕ್ಕೆ ಬರುತ್ತಿದ್ದಂತೆ ಮೊಟ್ಟಮೊದಲು ಮಾಡಿದ ಕೆಲಸವೆಂದರೆ ದೊರೆ ಇದ್ರೀಸ್‍ನ್ ಕಾಲದಿಂದಲೂ ಇಲ್ಲಿಯೇ ಬೀಡುಬಿಟ್ಟಿದ್ದ ಅಮೆರಿಕನ್ ಮಿಲ್ಟ್ರಿ ಬೇಸ್‍ನ್ನು ಹೊರಹಾಕಿದ್ದು. ಇದು ಅಮೆರಿಕನ್‍ರನ್ನು ಸಹಜವಾಗಿ ರೊಚ್ಚಿಗೆಬ್ಬಿಸಿತ್ತು ಮತ್ತವರು ಅಂದಿನಿಂದಲೇ ಅವನ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಹರಡುತ್ತಾ ಅಷ್ಟು ವರ್ಷಗಳಿಂದ ಸರಿಯಾದ ಸಮಯಕ್ಕಾಗಿ ಕಾದು ಕೂತರು. ಹೀಗಾಗಿ ಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ಯಾವ ಆತಂಕವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಡುತ್ತಾರೆ.

 “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದರೆ ಅವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್‍ನಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಪಕ್ಕದಲ್ಲಿ ನ್ಯಾಟೋ ಸಣ್ಣದೊಂದು ಬಾಂಬ್‍ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಅಟ್ಟಾಡಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು. ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲ ಅಮೆರಿಕಾ, ಫ್ರಾನ್ಸ್, ಬ್ರಿಟನ್, ಇಟಲಿಯ  ಪಾಲಾಗುತ್ತಿದೆ.” ಎಂದು ಕಣ್ಣೀರಿಡುತ್ತಾರೆ.

ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸುತ್ತಾರೆ. ಅದೇನೆಂದರೆ ಈ ಅಮೆರಿಕನ್ನರಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತಿರಲಿಲ್ಲ.  ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಡುತ್ತಾರೆ.

ಗಡಾಫಿ ವಿರುದ್ಧ ದಂಗೆಯೆದ್ದೆದ್ದು ನಿಮ್ಮವರೇ ಅಲ್ಲವೇ? ಅದಕ್ಯಾಕೆ ಅಮೆರಿಕಾದವರನ್ನು ದೂಷಿಸುತ್ತೀರಿ? ಎಂದು ಕೇಳಿದರೆ ಇದು ಅಮೆರಿಕಾದವರದೇ ಕುತಂತ್ರ. ದಂಗೆ ಎದ್ದ ಜನ ಕೇವಲ 9% ಮಾತ್ರ. They are crazy! ಅವರಿಗೆ ಬುದ್ಧಿಯಿಲ್ಲ. ಅವರಿಗೆ ಅಮೆರಿಕಾದವರೇ ದುಡ್ಡು ಕೊಟ್ಟು ಮಾಡಿಸಿದ್ದು. ಗಡಾಫಿ ಅವರನ್ನು ಹೇಗಾದರು ಮಾಡಿ ಹತ್ತಿಕ್ಕುತ್ತಿದ್ದ. ಆದರೆ ಇದನ್ನೇ ಕಾಯ್ದುಕೊಂಡಿದ್ದ ಅಮೆರಿಕಾದವರು ಬಂಡುಕೋರರಿಗೆ ಕುಮ್ಮಕ್ಕು ಕೊಟ್ಟು ಗಡಾಫಿಯನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು ಎಂದು ಪರಿತಪಿಸುತ್ತಾರೆ. ಹೀಗೆ ಗಡಾಫಿ ಹೊರಜಗತ್ತಿಗೆ ಒಬ್ಬ ಖಳನಾಯಕನಾಗಿ ಕಾಣಿಸಿದರೆ ಇಲ್ಲಿಯವರೆಗೆ ಒಬ್ಬ ದುರಂತ ನಾಯಕನಾಗಿ ಕಾಣಿಸುತ್ತಾನೆ.

ಇವತ್ತು ಲಿಬಿಯಾದಲ್ಲಿ ಗಡಾಫಿ ಇಲ್ಲ. ಆದರೆ ಗಡಾಫಿತನ ಮಾತ್ರ ಹಾಗೆ ಇದೆ. ಅವನು ಹಾಕಿಕೊಟ್ಟ ಸಮಾನತೆಯ ಸಿದ್ಧಾಂತದ ಪರಿಕಲ್ಪನೆ ಮಾತ್ರ ಜನರ ಮನದಲ್ಲಿ ಇನ್ನೂ ಹಾಗೆ ಇದೆ. ವ್ಯಕ್ತಿಯೊಬ್ಬನನ್ನು ಸುಲಭವಾಗಿ ಅಳಿಸಿಹಾಕಬಹುದು. ಆದರೆ ಅವನ ಸಿದ್ಧಾಂತಗಳನ್ನು ಅಷ್ಟು ಸುಲಭವಾಗಿ ಅಳಿಸಿಹಾಕಲಾದೀತೆ?

ಸೂಚನೆ: ಲಿಬಿಯಾದಲ್ಲಿ ಗಡಾಫಿಯನ್ನು ಕೆಲವರು ಮೌಮರ್ ಗಡಾಫಿ ಎಂದು ಕರೆದರೆ ಇನ್ನು ಕೆಲವರು ಮೊಹಮ್‍ದ್ ಗಡಾಫಿ ಎಂದು ಕರೆಯುತ್ತಿದ್ದರಿಂದ ನಾನು ಕೂಡಾ ಕೆಲವು ಕಡೆ ಮೌಮರ್ ಎಂದು ಕೆಲವು ಕಡೆ ಮೊಹಮ್‍ದ್ ಎಂದು ಕರೆದಿದ್ದೇನೆ.

  ಉದಯ ಇಟಗಿಯವರ ಪರಿಚಯ

ಉದಯ ಇಟಗಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಮುಧೋಳದವದರು. ಹುಟ್ಟಿದ್ದು 1975 ರಲ್ಲಿ ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ. ಬಾಲ್ಯ ಕಳೆದಿದ್ದು ಸವಣೂರು ತಾಲೂಕಿನ ಕಲಕೋಟಿ ಗ್ರಾಮದ ವರದಾ ನದಿ ತಟದಲ್ಲಿ. ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಬಾಲ್ಯದಿಂದಲೇ ಹೊಳೆಸಾಲ ಸಂವೇದನಗಳೊಂದಿಗೆ ಬೆಳೆದ ಇವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ.

ಮುಂದೆ ಗದುಗಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಹಾಗೂ ಧಾರವಾಡದಲ್ಲಿ ಪಿ.ಯು. ಶಿಕ್ಷಣವನ್ನು ಮುಗಿಸಿದರು. ಈ ಸಮಯದಲ್ಲೇ ಸಾಹಿತ್ಯದತ್ತ ಅವರ ಒಲವು ತೀವ್ರಗೊಂಡಿದ್ದು. ಪದವಿ ಓದುವವರಿಗೂ ಅವರೊಳಗಿನ ಸಂವೇದನೆಗಳು ಸ್ಪಷ್ಟ ರೂಪವನ್ನು ಪಡೆಯಲಾರದೆ ಹೊರಬರಲು ಒದ್ದಾಡುತ್ತಿದ್ದವು. ಎರಡು ವರ್ಷ ಪಿ.ಯು ಫೇಲಾಗಿ ಮನೆಯಲ್ಲಿ ಕೂತಾಗ  ಅವರೊಳಗಿನ ಬರಹಗಾರ  ನಿಧಾನವಾಗಿ ಆಕಾರ ಪಡೆಯಲು ಶುರು ಮಾಡಿದ. ನಂತರ ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಎ. ಇಂಗ್ಲೀಷ್ ಸಾಹಿತ್ಯವನ್ನು ಓದುವಾಗ ಅವರ ಭಾವನೆಗಳಿಗೆ ಚಿಟ್ಟೆಯ ರೂಪ ದೊರೆಯುತ್ತಾ ಹೋಯಿತು.

2000 ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದಾದ ಮೇಲೆ ಬೆಂಗಳೂರಿನ ವಿವಿಧ ಪ್ರತಿಷ್ಟಿತ ಕಾಲೇಜುಗಳಲ್ಲಿ ಏಳು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ತದನಂತರ ಲಿಬಿಯಾದ (ಉತ್ತರ ಆಫ್ರಿಕಾ) ಸೆಭಾ ವಿಶ್ವವಿದ್ಯಾನಿಲಯಕ್ಕೆ ಇಂಗ್ಲೀಷ್ ಉಪನ್ಯಾಸಕರಾಗಿ ಆಯ್ಕೆಗೊಂಡು 2007 ರಲ್ಲಿ ಅಲ್ಲಿಗೆ ಪಯಣ ಬೆಳೆಸಿದರು. ಅಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿ 2015 ರಲ್ಲಿ ಭಾರತಕ್ಕೆ ಮರಳಿದರು. ಸಧ್ಯ ಅವರು ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಲಿಬಿಯಾದಲ್ಲಿರುವಾಗಲೇ ಅವರ ಬರವಣಿಗೆ ತೀವ್ರಗೊಂಡಿತು. ಪರಿಣಾಮವಾಗಿ ಅವರು ಅನೇಕ ಅರೇಬಿ ಕವನಗಳನ್ನು ಹಾಗೂ ವಿವಿಧ ಭಾಷೆಯ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವರ ಕವಿತೆ ಮತ್ತು ಲೇಖನಗಳು “ಕೆಂಡಡಸಂಪಿಗೆ” ಹಾಗೂ “ಅವಧಿ” ಸೇರಿದಂತೆ ವಿವಿಧ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಪ್ರಕಟವಾಗಿವೆ. ಇವರ ಅನೇಕ ಅನುವಾದಿತ ಕಥೆಗಳು “ಉದಯವಾಣಿ”, “ಮಯೂರ” ಮತ್ತು “ಪ್ರಜಾವಾಣಿ” ಗಳಲ್ಲಿ ಪ್ರಕಟವಾಗಿವೆ.

ಲಿಬಿಯಾದ ಕ್ರಾಂತಿ ಹಾಗೂ ಅಲ್ಲಿನ ಅನುಭವಗಳನ್ನು ಕುರಿತಂತೆ 2018 ರಲ್ಲಿ ಹೊರಬಂದ ಇವರ ಚೊಚ್ಚಲ ಕೃತಿ “ಲಿಬಿಯಾ ಡೈರಿ” ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಜೊತೆಗೆ ಇವರ ಇನ್ನೆರೆಡು ಕೃತಿಗಳಾದ  “ಶೇಕ್ಸ್‍ಪಿಯರನ ಶ್ರೀಮತಿ” ಮತ್ತು ಅಸ್ಸಾಮಿ ಕವನಗಳ ಅನುವಾದಿತ ಕವನ ಸಂಕಲನ “ನನ್ನ ಚಹಾ ತೋಟ ಮತ್ತು ನೀಲಿಹಕ್ಕಿ” ಹೊರಬಂದಿವೆ.

ಸುದ್ದಿ ಓದಿ