ಮಹಲಿಂಗಪುರ

ಬಸ್ ಫ್ರೀ : ಮೋಜಿನ ಪ್ರವಾಸಕ್ಕೆ ಬೇಕಾಬಿಟ್ಟಿ ! ವಿದ್ಯಾರ್ಥಿಗಳಿಗೆ ಯಾಕೆ ತುಟ್ಟಿ?

ಬಸ್ ಫ್ರೀ : ಮೋಜಿನ ಪ್ರವಾಸಕ್ಕೆ ಬೇಕಾಬಿಟ್ಟಿ ! ವಿದ್ಯಾರ್ಥಿಗಳಿಗೆ ಯಾಕೆ ತುಟ್ಟಿ?

ಪ್ರವಾಸ ಮಾಡುವ ಮಹಿಳೆಯರಿಗೆ ಪ್ರಯಾಸವಿಲ್ಲ, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ 

ಮನವಿ ಸ್ವೀಕರಿಸದ ಡೀಪೋ ಮ್ಯಾನೇಜರ್ ! ಬೆಂಗಳೂರು ಕಡೆ ಬೆರಳು ಮಾಡುವ ಅಧಿಕಾರಿ ! 

ಮಹಾಲಿಂಗಪುರ 23: ಉಚಿತ ಪ್ರಯಾಣದ ಪ್ರಯೋಜನ ಪಡೆಯಲು ಮಹಿಳೆಯರು ತಂಡೋಪತಂಡವಾಗಿ ಬಸ್‌ಗಳತ್ತ ನುಗ್ಗುತ್ತಿರುವುದರಿಂದ ನಿತ್ಯ ಹೊಟ್ಟೆಪಾಡಿನ ಕೆಲಸಕ್ಕೆ ತೆರಳುವ ಶ್ರಮಿಕರಿಗೆ, ಆಗಾಗ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ, ನಿಯಮಿತ ಕಲಿಯಲು ತೆರಳುವ ವಿದ್ಯಾರ್ಥಿಗಳಿಗೆ ಬಸ್ ಸಿಗದೇ ಪರದಾಡುವಂತಾಗಿದೆ.  

ಮೋಜಿನ ಪ್ರವಾಸಕ್ಕೆ ಬಿಟ್ಟಿ, ವಿದ್ಯಾರ್ಥಿಗಳಿಗೆ ತುಟ್ಟಿ : 

ಏತನ್ಮಧ್ಯೆ ಪರೀಕ್ಷೆ ಬರೆಯುತ್ತಿರುವ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇಲ್ಲದಂತಾಗಿ  ಪ್ರಯಾಣ ದುಬಾರಿಯಾಗಿದೆ. ಉಚಿತ ಪ್ರವಾಸ ಮಾಡುವ ಮಹಿಳೆಯರಿಗೆ ಪ್ರಯಾಸವಿಲ್ಲ, ಆದರೆ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ ಎಂಬುದು ಯಾವ ನ್ಯಾಯ? ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.  

ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಿಸುವವರೆಗೆ ಶಾಲಾ, ಕಾಲೇಜಿನಲ್ಲಿ ಪ್ರವೇಶ ಪಡೆದ ಶುಲ್ಕ ಪಾವತಿಯ ಪ್ರತಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ರಾಜ್ಯ ಸಾರಿಗೆ ಇಲಾಖೆಯೇ ಪ್ರಕಟಣೆ ಹೊರಡಿಸಿದೆ. ಆದಾಗ್ಯೂ ಮುಧೋಳದಿಂದ ಮಹಾಲಿಂಗಪುರಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.  

ತಾಂತ್ರಿಕ ಶಿಕ್ಷಣದ ಶೈಕ್ಷಣಿಕ ವರ್ಷದ ಅವಧಿಯಲ್ಲಿ ವ್ಯತ್ಯಾಸವಿದೆ. ಕೋವಿಡ್‌-19 ಕೊರೊನಾ ಅವಧಿಯಿಂದ ಶೈಕ್ಷಣಿಕ ವರ್ಷ ವಿಸ್ತರಣೆಯಾಗುತ್ತ ಬಂದಿದೆ. ಈ ವರ್ಷವೂ ಡಿಪ್ಲೋಮಾ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವಿಸ್ತರಣೆಯಾಗಿ ಪರೀಕ್ಷೆಗಳು ತಿಂಗಳುಗಟ್ಟಲೇ ಮುಂದೂಡಲ್ಪಟ್ಟಿವೆ. ಆದರೆ ವಿದ್ಯಾರ್ಥಿಗಳ ರಿಯಾಯ್ತಿ ಪಾಸ್ ಅವಧಿ ಮುಗಿದಿದೆ. ಸಾರಿಗೆ ಇಲಾಖೆಯವರು ಪಾಸ್‌ನ ಅವಧಿ ವಿಸ್ತರಿಸಿ ಕೊಡುತ್ತಿಲ್ಲ.  

ಹೀಗಾಗಿ ಮುಧೋಳದಿಂದ ಮಹಾಲಿಂಗಪುರದ ಕೆಎಲ್‌ಇ ಡಿಪ್ಲೋಮಾ ಕಾಲೇಜಿಗೆ ತೆರಳುವ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲೇ ತೊಂದರೆ ಅನುಭವಿಸುವಂತಾಗಿದೆ.  

ಮನವಿ ಸ್ವೀಕರಿಸದ ಡೀಪೋ ಮ್ಯಾನೇಜರ್ : 

ಶೈಕ್ಷಣಿಕ ವರ್ಷ ಬದಲಾಗಿದ್ದರಲ್ಲಿ, ಪರೀಕ್ಷೆ ಮುಂದೂಡುವಲ್ಲಿ ಇಲಾಖೆಯ ಕ್ರಮವಿದೆ ಹೊರತು ಇದರಲ್ಲಿ ವಿದ್ಯಾರ್ಥಿಗಳ ತಪ್ಪೇನಿದೆ? ಡಿಪ್ಲೋಮಾ ಕಾಲೇಜಿನ ತಾಂತ್ರಿಕ ಶಿಕ್ಷಣ ಇಲಾಖೆಯ ಆದೇಶದಂತೆ ಪರೀಕ್ಷೆಯ ವೇಳಪಟ್ಟಿ ಒಳಗೊಂಡ ಸುತ್ತೋಲೆ ಲಗತ್ತಿಸಿ ಪರೀಕ್ಷೆ ಮುಗಿಯುವವರೆಗೆ ಬಸ್ ಪಾಸ್ ವಿಸ್ತರಿಸುವಂತೆ ಮುಧೋಳ ಬಸ್ ಡೀಪೋ ಮ್ಯಾನೇಜರ್‌ಗೆ ಲಿಖಿತ ಮನವಿ ಸಲ್ಲಿಸಲು ಹೋದರೆ ಮನವಿ ಸ್ವೀಕರಿಸದೇ ತಿರಸ್ಕರಿಸಿದ್ದಾರೆ. ಏನೇ ಇದ್ರೂ ಬೆಂಗಳೂರಿಗೆ ಸಂಪರ್ಕಿಸಿರಿ ಎಂದು ಜಾರಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ವಿದ್ಯಾರ್ಥಿಗಳ ಆಗ್ರಹ: 

ಡಿಪ್ಲೋಮಾ ಕಾಲೇಜಿನ ವಾರ್ಷಿಕ ಪ್ರ್ಯಾಕ್ಟಿಕಲ್ ಎಕ್ಸಾಂ ಈಗಾಗಲೇ ಜೂ.20ರಿಂದ ಆರಂಭವಾಗಿದ್ದು, ಈ ತಿಂಗಳ ಅಂತ್ಯದವರೆಗೆ ನಡೆಯಲಿವೆ. ನಂತರ ಮುಂದಿನ ತಿಂಗಳು ಜು.24ರವರೆಗೆ ಥಿಯರಿ ಎಕ್ಸಾಂ ನಡೆಯಲಿವೆ. ಅಲ್ಲಿಯವರೆಗೆ ನಮ್ಮ ಬಸ್ ಪಾಸ್ ವಿಸ್ತಿರಿಸಿ ಕೊಡಬೇಕು ಇಲ್ಲವೇ ಶುಲ್ಕ ಪಾವತಿಯ ಪ್ರತಿ ಅಥವಾ ಎಕ್ಸಾಂ ಹಾಲ್ ಟಿಕೇಟ್ ತೋರಿಸಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಬೇಕು. ಮೋಜಿನ ಪ್ರಯಾಣಕ್ಕೆ ಬೇಕಾಬಿಟ್ಟಿ ಅವಕಾಶವಿರುವಾಗ ನಾವೇನು ಮಸ್ತಿ ಮಾಡಲು ಹೊರಟಿಲ್ಲ, ಪರೀಕ್ಷೆ ಬರೆಯಲು ಹೊರಟಿದ್ದೇವೆ. ನಮಗೇಕೆ ಅವಕಾಶವಿಲ್ಲ? 

 - ನೊಂದ ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳು ಕೆಎಲ್‌ಇ ಡಿಪ್ಲೋಮಾ ಕಾಲೇಜ್ ಮಹಾಲಿಂಗಪುರ 

ನಾನು ಮನವಿ ಸ್ವೀಕರಿಸುವುದಿಲ್ಲ, ಡಿಪ್ಲೋಮಾ ವಿದ್ಯಾರ್ಥಿಗಳು ನಮಗೆ ಸಂಬಂಧವಿಲ್ಲ, ನೀವು ಏನೇ ಕೇಳುವುದಿದ್ದರೂ ಬೆಂಗಳುರಿಗೆ ಸಂಪರ್ಕ ಮಾಡಿರಿ. ಅಲ್ಲಿಂದ ಆದೇಶ ಬಂದರೆ ನೋಡೋಣ 

-ಘಟಕ ವ್ಯವಸ್ಥಾಪಕ, ವಾಕರಾರ ಸಾರಿಗೆ ಸಂಸ್ಥೆ ಮುಧೋಳ ಘಟಕ. 


ಸುದ್ದಿ ಓದಿ