ಇಬ್ರಾಹಿಂ ಸುತಾರ ನಾಡಿಗೆ ನೀಡಿದ ಸೇವೆ ಅನನ್ಯ: ಮಾಜಿ ಸಚಿವೆ ಉಮಾಶ್ರೀ
ಮಹಾಲಿಂಗಪುರ 12: ಜಾತಿ, ಮತ, ಪಂಥ, ಧರ್ಮ ಎಂದು ಹೊಡೆದಾಡುವ ಈ ಸಂದರ್ಭದಲ್ಲಿ ಎಲೆಮರೆಯ ಕಾಯಿಯಂತೆ ಭಾವೈಕ್ಯತೆಯನ್ನು ಸಾರುತ್ತ ಸಮಾಜ ಸೇವೆ ಮಾಡಿದ ಇಬ್ರಾಹಿಂ ಸುತಾರ ಅವರು ನಾಡಿಗೆ ನೀಡಿದ ಸೇವೆ ಅನನ್ಯ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಶುಕ್ರವಾರ ಮಧ್ಯಾಹ್ನ ಇಬ್ರಾಹಿಂ ಸುತಾರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಈ ಹಿಂದೆ ದಾರ್ಶನಿಕರು ನಡೆದು ಬಂದ ದಾರಿಯನ್ನು ಅರ್ಥಮಾಡಿಕೊಂಡು ನಾವೆಲ್ಲ ಭಾರತೀಯರು ಒಂದೇ ಎಂಬ ಭಾವೈಕ್ಯತೆಗೆ ಅರ್ಥಬರುವಂತೆ ಜೀವನ ಸಾಗಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಹಿಂದೂ, ಮುಸಲ್ಮಾನ, ಕ್ರೈಸ್ತರ ರಕ್ತವನ್ನು ಕೂಡಿಸಿದಾಗ ಭೇದವಿಲ್ಲದೆ ಒಂದೇ ಬಣ್ಣ ಹೇಗೆ ತೋರುತ್ತದೆಯೋ ಹಾಗೆ ಇಂದು ಮತ, ಧರ್ಮದ ಹೆಸರಿನಲ್ಲಿ ಮನಸ್ಸುಗಳು ಒಂದಾಗುತ್ತಿಲ್ಲ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆಯೇ.. ಇದು ನಮ್ಮ ದೇಶದ ದೌರ್ಭಾಗ್ಯವೆಂದು ಹೇಳಿದರು. ಅಂತಹದರಲ್ಲಿ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದ ಶ್ರೇಷ್ಠ ಪ್ರವಚನಕಾರ ಪದ್ಮಶ್ರೀ ಇಬ್ರಾಹಿಂ ಸುತಾರ್ ಅವರು ನಮ್ಮನ್ನಗಲಿ ವಿಶೇಷವಾಗಿ ಬಾಗಲಕೋಟ್, ವಿಜಯಪುರ ಅವಳಿ ಜಿಲ್ಲೆಗಳಲ್ಲಿ ಆಧ್ಯಾತ್ಮದ ಶಕ್ತಿ ಕುಂದಿದಂತಾಗಿದೆ. ಏಕೆಂದರೆ ಪ್ರತಿಯೊಂದು ಹಬ್ಬ-ಹರಿದಿನ ಜಾತ್ರೆಗಳಲ್ಲಿ ಅವರ ಅಧ್ಯಾತ್ಮ ಪ್ರವಚನ ಪ್ರಾಮುಖ್ಯತೆಯನ್ನು ಪಡೆಯುತ್ತಿತ್ತು ಎಂದರು.
ಇಬ್ರಾಹಿಂ ಸುತಾರ್ ಅವರ ಪುತ್ರ ಹುಮಾಯೂನ್ ಸುತಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಪುರಸಭಾ ಸದಸ್ಯ ಭಾವನಾ ಬಾವಿಕಟ್ಟಿ, ಹಿರಿಯರಾದ ಮಹಾಲಿಂಗಪ್ಪ ಲಾತೂರ, ರಾಜು ಭಾವಿಕಟ್ಟಿ ಇತರರು ಇದ್ದರು