ಸದಸ್ಯರ ಗಮನಕ್ಕೆ ತರದೆ ಕಸಾಪ ತಾಲೂಕಾಧ್ಯಕ್ಷರ ಆಯ್ಕೆ ಮಾಡಿದ್ದು ಖಂಡನೀಯ: ಅಂಗಡಿ
ಮಹಾಲಿಂಗಪುರ 13: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ರಬಕವಿ- ಬನಹಟ್ಟಿ ತಾಲೂಕಿನ ಸದಸ್ಯರ ಗಮನಕ್ಕೆ ತರದೆ ತಾಲೂಕಾಧ್ಯಕ್ಷರನ್ನು ಆಯ್ಕೆ ಮಾಡಿರುವುದು ಖಂಡನೀಯ ಮತ್ತು ಕಸಾಪ ಸದಸ್ಯರಿಗೆ ಮಾಡಿರುವ ದ್ರೋಹವಾಗಿದೆ ಎಂದು ಕಸಾಪ ಸದಸ್ಯ ಶೇಖರ ಅಂಗಡಿ ಹೇಳಿದರು.
ಪಟ್ಟಣದ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಬುಧವಾರ ಸಂಜೆ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ ಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿಯವರಿಗೆ ತಿಂಗಳ ಹಿಂದೆ ತಾಲೂಕಾಧ್ಯಕ್ಷರ ಆಯ್ಕೆಯನ್ನು ಸದಸ್ಯರ ಗಮನಕ್ಕೆ ತರಲು ಹೇಳಿದ್ದರೂ, ಆತುರದಲ್ಲಿ ಬುಧವಾರ ಜಾನಪದ ಅಧ್ಯಕ್ಷರನ್ನೇ ರಬಕವಿ- ಬನಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಏಕಪಕ್ಷೀಯ ನಿರ್ಧಾರವನ್ನು ಖಂಡಿಸುತ್ತ ಇದರ ಹಿಂದಿನ ಮರ್ಮ ಬಹಿರಂಗವಾಗಬೇಕಾಗಿದೆ.ಅಲ್ಲದೆ ಬಹುತೇಕ ತಾಲೂಕುಗಳಲ್ಲಿ ಹಿಂದಿನ ಜಾನಪದ ಅಧ್ಯಕ್ಷರನ್ನೇ ಕಸಾಪ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸರಿಯಾದ ಕ್ರಮವಲ್ಲ, ಸಾಹಿತ್ಯಕವಾಗಿ ಶ್ರಮಿಸಿರುವವರಿಗೆ ಮತ್ತು ಅವಕಾಶ ವಂಚಿತರಿಗೆ ಬೆಲೆಯೇ ಇಲ್ಲವೇ. ಕೂಡಲೇ ಒಂದು ವಾರದೊಳಗೆ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಇಲ್ಲವೇ ಕಸಾಪ ಸದಸ್ಯರ ಉಗ್ರ ಹೋರಾಟ ಎದುರಿಸಿ ಎಂದರು.
ಸ್ಥಳೀಯ ಕಾನಿಪ ಅಧ್ಯಕ್ಷ ಮಹೇಶ ಆರಿ ಮಾತನಾಡಿ, ನೂತನ ಜಿಲ್ಲಾಧ್ಯಕ್ಷರಿಗೆ ತಾಲೂಕಾಧ್ಯಕ್ಷರ ಆಯ್ಕೆ ವಿಷಯದಲ್ಲಿ ತಾಲೂಕಿನ ಎಲ್ಲ ಸದಸ್ಯರ ಗಮನಕ್ಕೆ ತರುವುದಾಗಿ ಹೇಳಿ, ಎಲ್ಲದಕ್ಕೂ ತಾವೇ ಸುಪ್ರೀಮ ಎನ್ನುವಂತೆ ಸದಸ್ಯರನ್ನು ವೋಟಿಗೆ ಮಾತ್ರ ಸೀಮಿತಗೊಳಿಸಿರುವ ಕ್ರಮ ಸರಿಯಲ್ಲ. ಈ ಸಂಘದಲ್ಲಿ ಸದಸ್ಯರ ಗಮನ ಸೆಳೆಯಲು ಹೇಳಿರುವುದು ತಪ್ಪೆ ಹಾಗಾದರೆ ನಮಗೆ ನ್ಯಾಯ ಕೇಳುವ ಹಕ್ಕೂ ಇಲ್ಲವೇ.. ಕೂಡಲೇ ಅಧ್ಯಕ್ಷ ಶೆಲ್ಲಿಕೇರಿಯವರು ವಿಷವನ್ನು ಗಂಭೀರವಾಗಿ ಪರಿಗಣಿಸಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು, ಮತ್ತೊಮ್ಮೆ ಈ ಭಾಗದ ಸದಸ್ಯರ ಪ್ರೀತಿಗೆ ಪಾತ್ರರಾಗಿ ಎನ್ನುತ್ತಾ ಆಗಿರುವ ಲೋಪಗಳ ಸರಿಪಡಿಸುವ ಬಗ್ಗೆ ಆಗ್ರಹಿಸುತ್ತಾ ಹೇಳಿದರು.
ನಂತರ ಮಾತನಾಡಿದ ಕಸಾಪ ಸದಸ್ಯರಾದ ಎಂ.ಐ ಡಾಂಗೆ, ಮಹೇಶ ಮನ್ನಯ್ಯನವರಮಠ, ಜಯರಾಂ ಶೆಟ್ಟಿ,.ಶಿವಲಿಂಗ ಸಿದ್ನಾಳ, ಲಕ್ಷ??ಣ ಕಿಶೋರ, ಸಿದ್ದು ಶಿರೋಳ ಮತ್ತು ಡಾ.ಮಹಾದೇವ ಕದ್ದಿಮನಿ ಇತ್ತೀಚೆಗೆ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭ ನಗರದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಆ ಸಮಯದಲ್ಲಿ ನಾನು ಏನೇ ನಿರ್ಧಾರ ತೆಗೆದುಕೊಳ್ಳಲಿ ಅದರಲ್ಲಿ ತಮ್ಮ ಅಣತಿಯನ್ನು ಪಡೆಯುತ್ತೇನೆ ಎಂದು ಭರವಸೆ ನೀಡಿದ್ದರು.ಆದರೆ ಕೆಲವೇ ದಿನಗಳಲ್ಲಿ ಅದನ್ನು ಮರೆತು ಭಾಷೆ ಭ್ರಷ್ಟರಾಗಿರುವುದು ಮಾತ್ರ ವಿಷಾಧನೀಯ. ಈಗಲೂ ಕಾಲ ಮಿಂಚಿಲ್ಲ ಸ್ಥಳೀಯ ಸದಸ್ಯರ ಸಭೆ ಕರೆದು ಆಗಿರುವ ಗೊಂದಲಕ್ಕೆ ತೆರೆ ಎಳೆಯಿರಿ ಎಂದರು.
ಹಿರಿಯರಾದ ಕಲ್ಲಪ್ಪ ಚಿಂಚಲಿ, ಪತ್ರಕರ್ತರಾದ ನಾರನಗೌಡ ಉತ್ತಂಗಿ, ಮೀರಾಸಾಬ ತಟಗಾರ ಮತ್ತು ಭೀಮಶಿ ನೇಗಿನಾಳ, ರಮೇಶ ಭಾವಿಕಟ್ಟಿ, ಸುರೇಶ ಮಡಿವಾಳ, ಚಿದಾನಂದ ಚಿಂದಿ, ಬಸವರಾಜ ಪರೀಟ, ವಿರೇಶ ನ್ಯಾಮಗೌಡ ಇದ್ದರು.