ಕೆಎಲ್ಇ ಶಾಲೆಯಲ್ಲಿ ಗಮನ ಸೆಳೆದ ನೈಜ ಅಣಕು ಚುನಾವಣೆ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ ಆಚರಿಸಿದ ಮಕ್ಕಳು
ಮಹಾಲಿಂಗಪುರ 12 : ಮಹಾಲಿಂಗಪುರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ ಆ.12ರಂದು ದೇಶ್ ಅಪ್ನಾಯೇ ಆಕ್ಟಿಜಿನ್ ಕ್ಲಬ್ನ ಆಗಷ್ಟ್ ತಿಂಗಳ ಚಟುವಟಿಕೆಯಾಗಿ ಅಣಕು ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿ-ಶಿಕ್ಷಕರಲ್ಲಿ ಚುನಾವಣಾ ರಂಗು, ಮತದಾನದ ಗುಂಗು ತುಂಬಿತ್ತು. ಚುನಾವಣೆಯ ಎಲ್ಲ ಪ್ರಕ್ರಿಯೆಯನ್ನು ಮರು ಸೃಷ್ಠಿ ಮಾಡಿದರು. ಚುನಾವಣಾ ಅಧಿಸೂಚನೆಯಿಂದ ಹಿಡಿದು, ನಾಮ ಪತ್ರ ಸಲ್ಲಿಕೆ, ಪರೀಶೀಲನೆ, ಹಿಂಪಡೆಯುವಿಕೆ, ಮತ ಪ್ರಚಾರ, ಕರಪತ್ರ, ಮತದಾರ ಯಾದಿ, ಅಭ್ಯರ್ಥಿಗಳ ಚಿನ್ಹೆ ಮತ್ತು ಕ್ರಮ ಸಂಖ್ಯೆ ತೋರುವ ಬ್ಯಾಲೆಟ್ ಪೇಪರ್, ಪ್ರಣಾಳಿಕೆ, ಮತಗಟ್ಟೆ, ಮೋಬೈಲ್ ಆ್ಯಪ್ನ ನೈಜಮತಯಂತ್ರ ಸೇರಿದಂತೆ ಎಲ್ಲವನ್ನೂ ಕೃತಕವಾಗಿ ಸಿದ್ದಪಡಿಸಿದ್ದರು.
ಕೈಯಲ್ಲಿ ಕರಪತ್ರ ಹಿಡಿದು ಮತವೊಲಿಸುವ ಬಿಳಿಬಟ್ಟೆಯ ಅಭ್ಯರ್ಥಿಗಳು, ಲಾಠಿ ಹಿಡಿದು ಕಾವಲು ಕಾಯುವ ಖಾಕಿ ಬಟ್ಟೆಯ ಆರಕ್ಷಕರು, ಆಧಾರ್ ಕಾರ್ಡ್ ಹಿಡಿದು ಮತ ಹಾಕಲು ಸರದಿಯಲ್ಲಿ ನಿಂತಿರುವ ಮತದಾರರು, ಎದೆ ಮೇಲೆ ಬ್ಯಾಡ್ಜ್ ಧರಿಸಿ ಗಂಭೀರವಾಗಿ ಅವಲೋಕನ ಮಾಡುವ ಚುನಾವಣಾ ಅಧಿಕಾರಿಗಳು, ಮೈಕ್ ಹಿಡಿದು ಬೈಟ್ಸ್ ಕೇಳುವ ಮಿಡಿಯಾದವರು, ಎಲ್ಲ ಪರೀಶೀಲಿಸಿ, ಬೆರಳಿಗೆ ಮಸಿ ಹಚ್ಚಿ ಬ್ಯಾಲೆಟ್ ಪೇಪರ್ ಕೊಟ್ಟು ಮತ ಚಲಾವಣೆಗೆ ಸಹಕರಿಸುವ ಚುನಾವಣಾ ಸಿಬ್ಬಂದಿ, 100 ಮೀಟರ್ ಆವರಣಕ್ಕೆ ಸುಣ್ಣದಿಂದ ಗಡಿ ಹಾಕಿ ಕಾಯುವ ಭದ್ರತಾ ಸಿಬ್ಬಂದಿ, ಹೆಜ್ಜೆ ಹೆಜ್ಜೆಗೂ ಶಿಸ್ತು ನೆನಪಿಸುವ ಸೂಚನಾ ಫಲಕಗಳು, ಎಲ್ಲದರ ಫೊಟೋ, ವಿಡಿಯೋ ಸೆರೆ ಹಿಡಿವ ವಿಜ್ಯುವಲ್ ಸಿಬ್ಬಂದಿ, ಸೆಲ್ಫೀ ಬಾಕ್ಸ್, ಎಂಎಲ್ಎ, ಎಂಪಿ ಎಲೆಕ್ಷನ್ ಹೋಲುವ ಈ ನೈಜ ಗಂಭೀರ ದೃಶ್ಯಗಳು ಒಂದು ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದಿವೆ.
ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ ಆಚರಿಸಿದ ಮಕ್ಕಳು:
ವಿದ್ಯಾರ್ಥಿಗಳೇ ಭದ್ರತಾ ಸಿಬ್ಬಂದಿ, ಮಿಡಿಯಾ ಪರ್ಸನ್ ಆಗಿ ಸಮವಸ್ತ್ರದಲ್ಲಿ ಕಂಗೊಳಿಸಿದರು. ಅಭ್ಯರ್ಥಿಗಳು ಬಿಳಿ ಬಟ್ಟೆಯಲ್ಲಿ ಕೈಮುಗಿದ ಭಂಗಿಯಲ್ಲಿ ನಿಂತು ಮತಯಾಚಿಸಿದರು. ಶಿಕ್ಷಕರು ಇಸಿಒ, ಡಿಸಿಒ, ಪಿಆರ್ಒ, ಎಫ್ಆರ್ಒ, ಪೋಲ್.1, ಪೋಲ್.2 ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು. 7ನೇ ತರಗತಿಯ ಒಟ್ಟು 10 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಎಲ್ಲರಿಗೂ ಒಂದೊಂದು ಚಿಹ್ನೆ ನೀಡಿ ಬ್ಯಾಲೆಟ್ ಪೇಪರ್ ಸಿದ್ದಗೊಳಿಸಲಾಗಿತ್ತು. ಉಳಿದ ವಿದ್ಯಾರ್ಥಿಗಳು ಮತದಾರರಾಗಿ ಕಡ್ಡಾಯವಾಗಿ ಆಧಾರ್ ಕಾರ್ಡ್ ತಂದು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಸ್ಕೌಟ್ಸ್ ಅಂಡ್ ಗೈಡ್ ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯಾಗಿ ಶಿಸ್ತು ಮೆರೆದರು. ನಂತರ ಮತ ಎಣಿಕೆ ಮಾಡಲಾಯಿತು. ನೈಜ ಚುನಾವಣೆಯನ್ನೇ ಹೋಲುವ ರೀತಿ ಎಲ್ಲಾ ಪ್ರಕ್ರಿಯೆಗಳನ್ನು ಪಾಲಿಸಲಾಯಿತು.
ಒಟ್ಟಾರೆ ಶೇ.61 ಮತದಾನವಾಯಿತು. ಪುಸ್ತಕ ಗುರುತಿನ ವೆಂಕಟೇಶ ಸೋರಗಾಂವಿ ಅಧ್ಯಕ್ಷನಾಗಿ ವಜ್ರದ ಗುರುತಿನ ಶ್ರಾವಣಿ ತಡಸಲೂರ ಉಪಾಧ್ಯಕ್ಷಳಾಗಿ ಚುನಾಯಿತರಾದರು. ಮುಖ್ಯ ಶಿಕ್ಷಕಿ ಜಯಶ್ರೀ ಹಿರೇಮಠ ಚುನಾವಣಾಧಿಕಾರಿಯಾಗಿದ್ದರು, ವರ್ಗಶಿಕ್ಷಕಿ ರೇಶ್ಮಾ ರಾಠೊಡ ಸಂಘಟಿಸಿದ್ದರು. ಸಹಾಯಕರಾಗಿ ಮೀನಾಕ್ಷಿ ಜಂಗಮಶೆಟ್ಟಿ, ಪ್ರತಿಭಾ ಬರಗಲ್ಲ, ಆರ್.ಬಿ.ಪಾಶ್ಚಾಪೂರ, ಕೆ.ಎಂ.ಹುನಗುಂದ, ಎಸ್.ಎಂ.ಅಂಬಿ, ಎಸ್.ಆರ್.ಕುಲಕರ್ಣಿ, ಎನ್.ಎಫ್.ಹಡಪದ, ಎಸ್.ಎಂ.ಪತ್ತಾರ, ಡಿ.ಎಸ್.ಕುಂದರಗಿ, ರವಿ ಮಠಪತಿ ಸೇವೆ ಸಲ್ಲಿಸಿದರು.
ಇತ್ತೀಚೆಗೆ ನಗರ ಪ್ರದೇಶದ ಸುಶಿಕ್ಷಿತರಲ್ಲೇ ಮತದಾನ ಮಾಡುವ ಮರ್ಜಿ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಈಗಿನಿಂದಲೇ ಮತದಾನದ ಮಹತ್ವ, ಸಂವಿಧಾನದ ತತ್ವ, ಹಕ್ಕು, ಕರ್ತವ್ಯಗಳ ಅರಿವು ಮೂಡಿಸಿ ಎಂಥ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ವಿವೇಚನೆ ಬೆಳೆಸಲು ಇಡೀ ಶಾಲೆಯನ್ನೇ ಮತಗಟ್ಟೆಯಾಗಿ ಬದಲಿಸಿ ಮಕ್ಕಳನ್ನೇ ಸಂಪೂರ್ಣವಾಗಿ ತೊಡಗಿಸಿ ನೈಜವಾಗಿ ಚುನಾವಣೆ ನಡೆಸಿದ್ದು, ಮಕ್ಕಳಲ್ಲಿ ಮತೋತ್ಸಾಹ ಉಕ್ಕಿಸಿತು.