ಮಹಲಿಂಗಪುರ

ಬೆಲೆಯೇರಿಕೆಗೆ ಕೇಂದ್ರ, ರಾಜ್ಯ ಸರ್ಕಾರ ಆಡಳಿತ ವಿಫಲವೇ ಕಾರಣ

ಬೆಲೆಯೇರಿಕೆಗೆ ಕೇಂದ್ರ, ರಾಜ್ಯ ಸರ್ಕಾರ ಆಡಳಿತ ವಿಫಲವೇ ಕಾರಣ
ಸೈದಾಪುರ್ ಗ್ರಾಮಪಂಚಾಯತ್ ವ್ಯಾಪ್ತಿಯ ಪೆಟ್ರೋಲ್ ಬಂಕ್ ಎದುರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಪೆಟ್ರೋಲ್ ಏರಿಕೆಗೆ

ಮಹಾಲಿಂಗಪುರ 13: ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಪೆಟ್ರೋಲಿಯಂ ದರ ಇಳಿಕೆ ಇದ್ದರೂ, ಕೇಂದ್ರ ಸರ್ಕಾರ ಇಂಧನ ದರ ಇಳಿಸದೆ ದೇಶದ ನಾಗರಿಕರು ಪರದಾಡುವಂತೆ ಮಾಡಿದ್ದಾರೆ. ಇದಕ್ಕೆ ದೇಶದ ಆಡಳಿತ ನಡೆಸುವಲ್ಲಿ ಭಾಜಪ ಸರಕಾರಗಳು ವಿಫಲಗೊಂಡಿದ್ದೇ ಇದಕ್ಕೆಲ್ಲ ಕಾರಣ ಎಂದು ತೇರದಾಳ ಮತಕ್ಷೇತ್ರದ ಯುಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಬಾರ್ಕೋಲ್ ಹೇಳಿದರು. 

ಸಮೀಪದ ಸೈದಾಪುರ್ ಗ್ರಾಮಪಂಚಾಯತ್ ವ್ಯಾಪ್ತಿಯ ಪೆಟ್ರೋಲ್ ಬಂಕ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿದರು.  

ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ದರ ಏರಿಕೆ ಕುರಿತು ಬಿಜೆಪಿಯವರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಇವತ್ತು ಅವರದೇ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 109ರೂ ಇದ್ದಾಗ ಲೀಟರ್ಗೆ ಪೆಟ್ರೋಲ್ ದರ 80ರೂ ಇತ್ತು. ಈಗ ಬ್ಯಾರೆಲ್ ಒಂದಕ್ಕೆ 70ರೂ ಆಗಿದೆ ಅಂದು ಇರತಕ್ಕಂತ ದರ ಇಳಿಕೆಯ ಕಾಳಜಿ ಇಂದೇಕಿಲ್ಲ. ರಾಜ್ಯದ 25 ಸಂಸದರೂ ಸಹಿತ ಇದರ ಬಗ್ಗೆ ಚಕಾರ ಎತ್ತದೆ ಮೌನವಹಿಸಿದ್ದಾರೆ.  

ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಸರ್ಕಾರವಿದ್ದರೇ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂದು ಚುನಾವಣೆಯಲ್ಲಿ ಭರವಸೆ ನೀಡಿದ್ದ ಇವರು ಈಗೇನು ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಮತ್ತು ಕೋವಿಡ್ ನಿರ್ವಹಣೆಯಲ್ಲಿಯೂ ವಿಫಲವಾಗಿ, ಅವೈಜ್ಞಾನಿಕವಾಗಿ ಆಡಳಿತ ನಡೆಸಿ, ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಕೆಲಸ ಕಳೆದುಕೊಂಡು ಮತ್ತು ದೇಶದ ರೈತರೂ ಸಹಿತ ಆರ್ಥಿಕ ಹಿಂಜರಿತ ಕಂಡಿದ್ದಾರೆ.  

ಜೀವನಾವಶ್ಯಕ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಅವರು ಜೀವನ ನಡೆಸುವುದೂ ಕೂಡ ದುಸ್ತರವಾಗಿದೆ. ದೇಶದ ಜನರ ಭವನೆ ತಡೆಯಲಿಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಶೀಘ್ರದಲ್ಲಿ ಬೆಲೆ ಏರಿಕೆಯನ್ನು ತಡೆಯಬೇಕು, ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಉಗ್ರ ಹೋರಾಟ ಮಾಡಲಾಗುವುದೆಂದು ಭಾಜಪ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು. 

ಮಾಜಿ ಕೆಎಂಎಫ್ ಅಧ್ಯಕ್ಷ ರಂಗನಗೌಡ ಪಾಟೀಲ ಅವರು ಮಾತನಾಡಿ, ಕೇಂದ್ರ ಸರ್ಕಾರದ ಅವೈಜ್ಞಾನಿಕ ಟ್ಯಾಕ್ಸ್‌ ನೀತಿಯಿಂದ ಪೆಟ್ರೋಲ್ ದರ 100ರೂ ಆಗಿದೆ. ಅದೇ ನಮ್ಮ ನೆರೆ ದೇಶಗಳಾದ ಶ್ರೀಲಂಕಾ 45ರೂ ಹಾಗೂ ಪಾಕಿಸ್ತಾನದಲ್ಲಿ 65ರೂ ದರವಿರುವುದು ಗಮನಾರ್ಹ ಅಂಶ. ವ್ಯಾಕ್ಸಿನ್ ಗಳನ್ನು ಹೊರದೇಶಕ್ಕೆ ಮಾರಿದ ಕಾರಣ ಜನವರಿ ತಿಂಗಳಿಂದೀಚೆಗೆ ಕೋವಿಡ್ ಚಿಕಿತ್ಸಾ ಉಪಕರಣಗಳು ಹಾಗೂ ವ್ಯಾಕ್ಸಿನ್ ಗಳ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಜನ ಅಸುನೀಗಿದ್ರು. ದರ ಏರಿಕೆ ಹಾಗೂ ಕೋವಿಡ್‌-19 ನಿರ್ವಹಣೆಯಲ್ಲಿಯೂ ಸಂಪೂರ್ಣ ವಿಫಲಗೊಂಡು ಮಾಜಿ ಸಚಿವೆ ಉಮಾಶ್ರೀ ಅವರ ವಿರುದ್ಧ ಅಭಿವೃದ್ಧಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಪಟ್ಟಿಯನ್ನು ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ. ನಿಮ್ಮ ಎರಡೂವರೆ ವರ್ಷಗಳ ಅವಧಿಯಲ್ಲಿ ಮಾಡಿರುವ ಕೆಲಸಗಳ ಬಗ್ಗೆ ತಾವು ಜನರ ಮುಂದೆ ತಿಳಿಸಿ ಎಂದು ಶಾಸಕರಿಗೆ ಟಾಂಗ ಕೊಟ್ಟರು. 

ಈ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನಾರಾಯಣ ನಿಕ್ಕಂ, ಶ್ರೀಮಂತ ಪಾಟೀಲ್, ವಿಠ್ಠಲ ಲಟ್ಟಿ, ವಿಠ್ಠಲ್ ಢವಳೇಶ್ವರ, ಎಚ್ ಎಸ್ ಭಜಂತ್ರಿ, ಬಸವರಾಜ ಪೂಜಾರಿ, ಆರ್ ಎಸ್ ಪಾಟೀಲ್, ರಾಜೇಸಾಬ್ ನದಾಫ್, ಶಿವಪ್ಪ ಹೋಲ್ಕರ್, ಗೌಡಪ್ಪ ಪಾಟೀಲ್, ರಮೇಶ್ ಚಿಂಚಲಿ, ಸುರೇಶ್ ಹಾದಿಮನಿ, ಮಹಾವೀರ ಗದಾಳಿ, ವಿಠ್ಠಲ್ ಹೊಸಮನಿ, ಬಸವರಾಜ್ ಮುಕುಂದ, ಜ್ಯೋತೆಪ್ಪ ಕಪರಟ್ಟಿ, ವಿನಾಯಕ್ ಕಾಂತೆ, ಭೀಮಶಿ ತಿಮ್ಮಾಪುರ್, ಬಸವರಾಜ್ ಹರಿಜನ, ಮಲ್ಲು ನಾವಿ, ಪಿ.ಸಿ ಕೌಜಲಗಿ, ಅಯ್ಯುಬ್ ಅಥಣಿ, ಸುರೇಶ್ ಜೋಗಣ್ಣವರ್, ವಿಠ್ಠಲ್ ಮಾದರ್ ಇನ್ನು ಮುಂತಾದವರಿದ್ದರು. 

ಸುದ್ದಿ ಓದಿ