ಮಹಲಿಂಗಪುರ

ಸಚಿವರಿಂದ ತರಾತುರಿ ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ ಬೇಸರ ವ್ಯಕ್ತಪಡಿಸಿದ ಜನತೆ

ಸಚಿವರಿಂದ ತರಾತುರಿ ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ ಬೇಸರ ವ್ಯಕ್ತಪಡಿಸಿದ ಜನತೆ

ಮಹಾಲಿಂಗಪುರ 16: ನಾಡಿನಲ್ಲಿಯೇ ಮಹಾಲಿಂಗಪೂರ ಪಟ್ಟಣ ಹಿಂದೂ ಮುಸ್ಲಿಂರ ಸಹಬಾಳ್ವೆಯ ಕಾರಣ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ಹೇಳಿದರು. 

ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಬಸವೇಶ್ವರ ವೃತ್ತದಲ್ಲಿಯ ಅಶ್ವಾರೂಢ ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮತ್ತು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರಿಂದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಪಟ್ಟಣದಲ್ಲಿ ನಡೆಯುವ ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಪರಸ್ಪರರು ಪಾಲ್ಗೊಂಡು ಸಂತಸ, ನೆಮ್ಮದಿಯನ್ನು ಹಂಚಿಕ್ಕೊಳ್ಳುತ್ತಾರೆ. ಇದು ನಿರಂತರವಾಗಿ ನಡೆದು ಬರುತ್ತಿರುವ ಪೃಕ್ರಿಯೆಯಾಗಿದೆ.ಈ ಕಾರಣದಿಂದ ಜಗತ್ತಿಗೆ ಸಮಾನತೆಯನ್ನು ಸಾರಿದ ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ಸಮಯೋಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಶಾಸಕ ಸಿದ್ದು ಸವದಿ, ಸಂಸದ ಪಿ ಸಿ. ಗದ್ದಿಗೌಡರ್ ಮತ್ತು ಬಸವ ತಂಡದ ಸದಸ್ಯರು ವಚನ ಸಾಹಿತ್ಯವನ್ನು ತಲೆ ಮೇಲೆ ಹೊತ್ತು ಮಂಗಳವಾದ್ಯಗಳೊಂದಿಗೆ ವೇದಿಕೆಗೆ ಆಗಮಿಸಿ ಗೌರವ ಸೂಚಿಸಿದರು.  

ತರಾತುರಿ : ಉಸ್ತುವಾರಿ ಸಚಿವ ತಿಮ್ಮಾಪುರ ವೇದಿಕೆಗೆ ಆಗಮಿಸುತ್ತಲೇ ನಿರೂಪಕರಿಂದ ಸ್ವಾಗತ ಭಾಷಣವನ್ನು ಕೂಡ ಮಾಡಲು ಕೊಡದೆ ನೇರವಾಗಿ ಭಾಷಣ ಮಾಡಲು ಧಾವಿಸಿ ಕೇವಲ ಎರಡು ನಿಮಿಷಗಳಲ್ಲಿ ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸಿದರೆ, ಇವರ ಹಿಂದೆಯೇ ಸಂಸದ ಪಿ ಸಿ. ಗದ್ದಿಗೌಡರ್ ಮತ್ತು ಶಾಸಕ ಸಿದ್ದು ಸವದಿ ಕೂಡ ಯಾವುದೇ ಭಾಷಣ ಮಾಡದೆ ತೆರಳಿದರು.  

ಕಾರ್ಯಕ್ರಮದ ಆರಂಭದಲ್ಲಿಯೂ ಬಸವ ಧ್ವಜಾರೋಹಣಕ್ಕೆ ಸಚಿವರನ್ನು ಆಹ್ವಾನಿಸಿದರೂ ಬಾರದ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಬಹಳ ಉತ್ಸುಕತೆಯಿಂದ ಸೇರಿದ ಸಾವಿರಾರು ಜನರು ಬಸವಣ್ಣನವರ ಕುರಿತು ಹಿತವಚನ ಆಲಿಸಲು ಕಾತುರರಾಗಿದ್ದು, ಕೇವಲ ಐದು ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಇದು ಶ್ರೀ ಬಸವೇಶ್ವರರಿಗೆ ಮಾಡಿದ ಅವಮಾನವೆಂದು ಗೊನಗಿದರು.  

ಸುಮಾರು 60/ 70 ಲಕ್ಷ ರೂಗಳ ಅಶ್ವಾರೂಢ ಶ್ರೀ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ರಂಗು ರಂಗಿನ ಸ್ವಾಗತ ಬ್ಯಾನರ್ ಗಳು, ಅದ್ದೂರಿಯ ಪೆಂಡಾಲ್, ಧ್ವನಿವರ್ಧಕ, ಆಸನ ಮತ್ತು ಉಪಹಾರದ ವ್ಯವಸ್ಥೆ ಸಹ ಮಾಡಲಾಗಿ, ಕನಿಷ್ಠ ಒಂದು ಗಂಟೆಯಾದರೂ ವೇದಿಕೆ ಕಾರ್ಯಕ್ರಮ ನಡೆದಿದ್ದರೆ ಬಸವಣ್ಣನವರಿಗೆ ಇವರು ನೀಡುವ ಗೌರವ ಸೂಚಕವಾಗಿರುತ್ತಿತ್ತು, ಲಕ್ಷಾಂತರ ಖರ್ಚು ಮಾಡಿ ಸಮಾರಂಭದ ತಯಾರಿ ಹೊಳೆಯಲ್ಲಿ ಹುಣಸೆ ತೊಳದಂತಾಗಿದೆ ಎಂದು ಜನ ಅಲ್ಲಲ್ಲಿ ಮಾತನಾಡುವುದು ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. 

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿ, ಸಂಸದ ಪಿ.ಸಿ.ಗದ್ದಿಗೌಡರ,ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲರಜಾಕ ಬಾಗವಾನ, ಮುಖಂಡರಾದ ಸಿದ್ದು ಕೊಣ್ಣೂರ, ರವಿಗೌಡ ಪಾಟೀಲ, ಬಲವಂತಗೌಡ ಪಾಟೀಲ, ಬಾಳಕೃಷ್ಣ ಮಾಳವಾದೆ, ಮಹಾಲಿಂಗಪ್ಪ ತಟ್ಟಿಮನಿ, ನಿಂಗಪ್ಪ ಬಾಳಿಕಾಯಿ, ಪ್ರಕಾಶ ಮಮದಾಪುರ, ಕೃಷ್ಣಗೌಡ ಪಾಟೀಲ, ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ನೀರಾವರಿ ಇಲಾಖೆಯ ಸ.ಕಾ.ನಿ.ಅಧಿಕಾರಿ ಮಹಾಂತೇಶ ಯಡಪ್ಪನವರ ಸೇರಿದಂತೆ ಇತರರಿದ್ದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ಪುರಸಭೆ ಸದಸ್ಯ ಶೇಖರ ಅಂಗಡಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ