ಕಿರ್ಗಿಸ್ತಾನ್‌ನಲ್ಲಿ ಪ್ರತಿಭಟನೆ ವೇಳೆ ಗಾಯಗೊಂಡವರ ಸಂಖ್ಯೆ 900ಕ್ಕೆ ಏರಿಕೆ
ಬಿಷ್ಕೆಕ್, ಅಕ್ಟೋಬರ್ 7 : ಕಿರ್ಗಿಸ್ತಾನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಗಾಯಗೊಂಡವರ ಸಂಖ್ಯೆ 911 ಕ್ಕೆ ತಲುಪಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಸಂಸತ್ ಚುನಾವಣೆ ಫಲಿತಾಂಶದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 700 ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ. ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಬುಧವಾರದ ಮಾಹಿತಿಯಂತೆ, ಗಾಯಗೊಂಡ ಒಟ್ಟು 911 ಜನರು (ಕಳೆದ 24 ಗಂಟೆಗಳ ಅವಧಿಯಲ್ಲಿ 169 ಮಂದಿ ಸೇರಿ) ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅವರಲ್ಲಿ 705 ಜನರು ತುರ್ತು ಚಿಕಿತ್ಸೆ ಪಡೆದ ನಂತರ ಬಿಡುಗಡೆ ಹೊಂದಿದ್ದಾರೆ. 205 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಐವರನ್ನು ತೀವ್ರ ನಿಗಾ ಘಟಕಗಳಲ್ಲಿ ಇರಿಸಲಾಗಿದೆ. ಗಾಯಗೊಂಡಿದ್ದ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ಮತಎಣಿಕೆ ನಡೆದು ಫಲಿತಾಂಶದಲ್ಲಿ ಕಡಿಮೆ ಸ್ಥಾನ ಪಡೆದ ರಾಜಕೀಯ ಪಕ್ಷಗಳ ಬೆಂಬಲಿಗರು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಫಲಿತಾಂಶವನ್ನು ತಡೆ ಹಿಡಿದು ಹೊಸದಾಗಿ ಮತದಾನ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.